ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಮಾರಿಕಾಂಬ ಜಾತ್ರೆಗೆ ಶಿವಮೊಗ್ಗ ಸಜ್ಜು

Last Updated 7 ಫೆಬ್ರುವರಿ 2018, 7:16 IST
ಅಕ್ಷರ ಗಾತ್ರ

ಶಿವಮೊಗ್ಗ: ಐತಿಹಾಸಿಕ ಕೋಟೆ ಮಾರಿಕಾಂಬ ದೇವಿ ಜಾತ್ರೆ ಈ ಬಾರಿ ಫೆ. 20ರಿಂದ 24ರವರೆಗೆ ವಿಜೃಂಭಣೆ ಯಿಂದ ನೆರವೇರಿಸಲು ಶಿವಮೊಗ್ಗ ನಗರ ಸಜ್ಜಾಗಿದೆ. ಕೆಳದಿ ಅರಸರ ಕಾಲದಿಂದಲೂ ಆಚರಣೆಯಲ್ಲಿ ಇರುವ ಕೋಟೆ ಮಾರಿಕಾಂಬ ದೇವಿ ಜಾತ್ರೆ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ವಿವಿಧ ಜಾತಿ, ಧರ್ಮಗಳ ಜನರು ಸೇರಿ ಸೌಹಾರ್ದವಾಗಿ ಜಾತ್ರೆ ನಡೆಸುತ್ತಾರೆ. ಪ್ರತಿ ಜಾತ್ರೆಯಲ್ಲೂ ಲಕ್ಷಾಂತರ ಭಕ್ತರು ದೇವಿಯ ದರ್ಶನ, ಪೂಜಾ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ.

ಮೌಢ್ಯಕ್ಕೆ ಇಲ್ಲ ಅವಕಾಶ: ಮೌಢ್ಯಕ್ಕೆ ಅವಕಾಶ ನೀಡದೇ ನಂಬಿಕೆಗೆ ಧಕ್ಕೆ ಬಾರದಂತೆ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯಲು ದೇವಸ್ಥಾನದ ಸುತ್ತಲೂ, ಜಾತ್ರೆ ನಡೆಯುವ ಸ್ಥಳದಲ್ಲಿ ಹಲವು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ   ವಾರದವರೆಗೆ ವಿದ್ಯುತ್‌ ದೀಪಗಳು ಜಗಮಗಿ  ಸಲಿವೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ರಾತ್ರಿ 12ರವರೆಗೂ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಸ್ವಚ್ಛತೆಗೆ ಆದ್ಯತೆ: ಜಾತ್ರೆ ಸಮಯದಲ್ಲಿ ಪ್ರಮುಖ ಸಮಸ್ಯೆ ಸಂಗ್ರಹವಾಗುವ ಕಸ ವಿಲೇವಾರಿಯದು. ಈ ಬಾರಿ ಕಸ ಸಂಗ್ರಹಣೆ, ವಿಲೇವಾರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಧಾರ್ಮಿಕ ಚಟುವಟಿಕೆ 20ರಿಂದ ಆರಂಭ: 20ರಂದು ಬೆಳಿಗ್ಗೆ 5ಕ್ಕೆ ಪೂಜಾ ಕಾರ್ಯಕ್ರಮ ಆರಂಭ ವಾಗುತ್ತವೆ. ಪೂಜಾ ಕಾರ್ಯಕ್ಕೂ ಮೊದಲು ಸಮಿತಿಯ ನೇತೃತ್ವದಲ್ಲಿ ಮಂಗಳವಾದ್ಯಗಳ ಜತೆ ತೆರಳಿ, ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂ ಬದ ಸದಸ್ಯರನ್ನು ಆಹ್ವಾನಿಸಲಾಗುತ್ತದೆ. ಆ ಸಮಾಜದ ಮುತ್ತೈದೆಯರು ಮೆರವಣಿಗೆಯಲ್ಲಿ ಬಾಸಿಂಗ ಧರಿಸಿ ಗಾಂಧಿಬಜಾರ್‌ನ ದೇವಿಯ ತವರು ಮನೆಗೆ ಬರುತ್ತಾರೆ. ಅಲ್ಲೇ ಜಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಕೋಟೆ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‌ಗಾಂಧಿ ಬಜಾರ್‌ ಮೂಲ ನೆಲೆಯಲ್ಲಿ ಮಾರಿಕಾಂಬೆಗೆ ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕ ಪೂಜೆ ಆರಂಭಿಸುತ್ತಾರೆ. ಅಂದು ರಾತ್ರಿ 10ರವರೆಗೂ ಮುತ್ತೈದೆಯರು ಉಡಿ ತುಂಬುತ್ತಾರೆ. ನಂತರ ಉಪ್ಪಾರ ಸಮಾಜದ ಜನರು ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆ ಮೂಲಕ ಕೋಟೆ ರಸ್ತೆಯ ಮಾರಿ ಗದ್ದುಗೆಗೆ ದೇವಿ ಕರೆತರಲಾಗುತ್ತದೆ.

21 ರಂದು ಬೆಳಿಗ್ಗೆ 4ಕ್ಕೆ ಹರಿಜನ ಸಮಾಜದ ಮುಖಂಡರು ಬೇವಿನುಡಿಗೆಯೊಂದಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿ, ನಂತರ ಗದ್ದುಗೆ ಮೇಲೆ ಪ್ರತಿಷ್ಠಾಪಿಸುವರು. ಕುರುಬ ಸಮಾಜದವರು ನೈವೇದ್ಯ ಮಾಡಿ, ಪೂಜೆ ಸಲ್ಲಿಸುವರು. ನಂತರ ಎಲ್ಲಾ ಸಮಾಜದವರು ನಾಲ್ಕು ದಿನ ಗದ್ದುಗೆಯಲ್ಲಿ ಸರದಿ ಪ್ರಕಾರ ದೇವಿಗೆ ಪೂಜೆ ಸಲ್ಲಿಸುವರು ಎಂದು ತಿಳಿಸಿದರು. 24ರಂದು ಧಾರ್ಮಿಕ ವಿಧಿ ವಿಧಾನ,  ಜನಪದ ತಂಡಗಳ ಸಮ್ಮುಖದಲ್ಲಿ ದೇವಿಯ ರಾಜಬೀದಿ ಉತ್ಸವ ನಡೆಯುತ್ತದೆ. ನಂತರ ದೇವಿ ಮೂಲಕ ವನಕ್ಕೆ ಬೀಳ್ಕೊಡಲಾಗುವುದು ಎಂದರು.

15 ಉಪ ಸಮಿತಿ ರಚನೆ: ಜಾತ್ರೆ ಅಚ್ಚುಕಟ್ಟಾಗಿ ನಡೆಸಲು 15 ಉಪ ಸಮಿತಿ ರಚಿಸಲಾಗಿದೆ. ಭದ್ರತಾ ಸಿಬ್ಬಂದಿ ಮತ್ತು ಸ್ವಯಂ ಸೇವಕರಿಗೆ  ಪ್ರತಿನಿತ್ಯ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ನಿತ್ಯವೂ ಪ್ರಸಾದ ವಿತರಣೆ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಿ.ಎಂ ರಾಮಯ್ಯ, ಎನ್. ಉಮಾಪತಿ, ಹನುಮಂತಪ್ಪ, ಶ್ರೀನಿವಾಸ್, ಸುನೀಲ್, ಪ್ರಭಾಕರಗೌಡ, ವಿ.ರಾಜು, ಲೋಕೇಶ್, ಶ್ರೀಧರಮೂರ್ತಿ ನವುಲೆ ಉಪಸ್ಥಿತರಿದ್ದರು.

ಪ್ರತಿದಿನ ಬೆಳಿಗ್ಗೆ 5ಕ್ಕೆ ಪೂಜೆ

21 ರಿಂದ 24ರವರೆಗೆ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 5 ರಿಂದ ಹರಕೆ, ಪೂಜೆ, ಪ್ರಸಾದ ವಿನಿಯೋಗವಿರುತ್ತದೆ. ಪ್ರತಿದಿನ ರಾತ್ರಿ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 23ರಂದು ರಾತ್ರಿ 7ಕ್ಕೆ ಮಹಾಮಂಗಳಾರತಿ ನಡೆಯಲಿದೆ.

23ರಿಂದ ಕುಸ್ತಿ ಸ್ಪರ್ಧೆ

ಜಾತ್ರೆಯ ಅಂಗವಾಗಿ 23ರಿಂದ 25ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ  ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 3ರಿಂದ ಕುಸ್ತಿ ಪಂದ್ಯಾವಳಿ ಪ್ರಾರಂಭವಾಗುತ್ತವೆ. ಕುಸ್ತಿಯಲ್ಲಿ ವಿಜೇತ ಪೈಲ್ವಾನರಿಗೆ ಬೆಳ್ಳಿ ಗದೆ ಮತ್ತು ₹ 25 ಸಾವಿರ ಬಹುಮಾನ ನೀಡಲಾಗುತ್ತದೆ. ರಾಜ್ಯ ಮತ್ತು ಹೊರ ರಾಜ್ಯದ ಪ್ರಸಿದ್ಧ ಪೈಲ್ವಾನರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT