ಬುಧವಾರ, ಡಿಸೆಂಬರ್ 11, 2019
24 °C

ಸರ್ಕಾರದ ಅಸಡ್ಡೆ: ಹರಿಯದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರದ ಅಸಡ್ಡೆ: ಹರಿಯದ ನೀರು

ಪಾವಗಡ: ತಾಲ್ಲೂಕಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಮಡಕಶಿರಾಗೆ ಕೃಷ್ಣಾ ನದಿಯಿಂದ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಬದ್ಧತೆ ಕೊರತೆ, ಸರ್ಕಾರದ ಅಸಡ್ಡೆ ಕಾರಣಗಳಿಂದ ತಾಲ್ಲೂಕಿಗೆ ನೀರು ಹರಿಸಲಾಗುತ್ತಿಲ್ಲ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸ್ವತಂತ್ರ ಬಂದು ದಶಕಗಳು ಕಳೆದರೂ ತಾಲ್ಲೂಕಿಗೆ ಸಮರ್ಪಕವಾಗಿ ನೀರು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರದ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣ ಎಂದು ತಾಲ್ಲೂಕಿನ ಗುಂಡಾರ್ಲಹಳ್ಳಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

‘ಮುಖ್ಯಮಂತ್ರಿಯಾಗಿದ್ದಾಗ ಈ ಭಾಗಕ್ಕೆ ಭದ್ರಾ ಮೇಲ್ದಂಡೆ ನೀರು ಪೂರೈಸುವ ಸಲುವಾಗಿ ಕೆ.ಸಿ.ರೆಡ್ಡಿ ನಾಯಕತ್ವದಲ್ಲಿ ಸಮಿತಿ ರಚಿಸಲಾಯಿತು. ವರದಿ ಪ್ರಕಾರ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಪ್ರದೇಶಕ್ಕೆ 19 ಟಿ.ಎಂ.ಸಿ ನೀರನ್ನು ಹರಿಸುವ ₹ 4,600 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಯಿತು. ಆದರೆ ನಂತರ ಅಧಿಕಾರ ನಡೆಸಿದ ಸರ್ಕಾರಗಳು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ’ ಎಂದರು.

ತಾಲ್ಲೂಕಿನಲ್ಲಿ ಬರ, ಬಡತನದಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ತಾಲ್ಲೂಕನ್ನು ಕೇಂದ್ರ ವನ್ನಾಗಿಸಿಕೊಂಡು 2000 ಮೆಗಾ ವಾಟ್ ಉತ್ಪಾದನೆ ಮಾಡುತ್ತೇವೆ ಎಂದು ಹೇಳಿಕೊಳ್ಳಲಾಗಿದೆ. 2017ರ ವೇಳೆಗೆ 2000 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯಾಗಬೇಕಿತ್ತು. ಆದರೆ ಕಾಲಾವಧಿ ಮುಗಿದರೂ ಕೇವಲ 500 ಮೆಗಾ ವಾಟ್ ಉತ್ಪಾದನೆ ಮಾಡಲಾಗುತ್ತಿದೆ ಎಂದರು.

ಎನ್.ಟಿ.ಪಿ.ಸಿ. ಹಾಗೂ ಕೆ.ಆರ್.ಸಿ ನಡುವಿನ ಭಿನ್ನಾಭಿಪ್ರಾಯ ದಿಂದಾಗಿ ಪ್ರಮುಖ ಸಂಸ್ಥೆ ಎನ್.ಟಿ.ಪಿ.ಸಿ 2000 ಮೆಗಾ ವಾಟ್ ಯೋಜನೆಯಿಂದ ಹಿಂದೆ ಸರಿದಿದೆ. ಹೀಗಾಗಿ 500 ಮೆಗಾ ವಾಟ್ ಮಾತ್ರ ಉತ್ಪಾದನೆಯಾಗುತ್ತಿದೆ ಎಂದರು.

ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ಸರ್ಕಾರ ಅಗತ್ಯ ಸೌಕರ್ಯ ಕಲ್ಪಿಸಿ ಪ್ರೋತ್ಸಾಹ ನೀಡಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ನೀರು, ನಿರುದ್ಯೋಗ, ವಸತಿ ಸಮಸ್ಯೆ ಬಗೆಹರಿಸಲು ಹೆಚ್ಚು ಒತ್ತು ನೀಡಲಾಗುವುದು ಎಂದರು.

ತಾಲ್ಲೂಕಿನ ಬಗ್ಗೆ ಕಾಳಜಿ ಇದೆ. ಹಾಗಾಗಿ ತಾಲ್ಲೂಕಿನ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರ ಗೆಲುವಿಗಾಗಿ ಒತ್ತು ನೀಡಲಾಗುತ್ತಿದೆ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗುವುದು. ತಾಲ್ಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಶಾಸಕ ಕೆ.ಎಂ.ತಿಮ್ಮರಾಯಮ್ಮ, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಪುರಸಭೆ ಅಧ್ಯಕ್ಷೆ ಸುಮಾ ಅನಿಲ್, ಸದಸ್ಯ ಮನು, ವೆಂಕಟೇಶ್, ವಸಂತ್, ಗೋಪಾಲ್, ತುಮುಲ್ ನಿರ್ದೇಶಕ ಕೆ.ಆರ್.ಸುರೇಶ್, ಬಾಬು, ಮಂಜುನಾಥ ಚೌಧರಿ ಇದ್ದರು.

ಬಿಎಸ್‌ಪಿ ಜತೆ ಹೊಂದಾಣಿಕೆ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬಿಎಸ್‌ಪಿ ರಾಷ್ಟ್ರ ಘಟಕದ ಅಧ್ಯಕ್ಷೆ ಮಾಯಾವತಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಮಾತುಕತೆ ಸಫಲವಾದಲ್ಲಿ 15 ರಿಂದ 20 ಸ್ಥಾನಗಳನ್ನು ಆ ಪಕ್ಷದ ಅಭ್ಯರ್ಥಿಗಳಿಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ತಿಳಿಸಿದರು. ಫೆಬ್ರುವರಿ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ 140 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.

ಜೆಡಿಎಸ್ ಸೂಟ್‌ಕೇಸ್ ರಾಜಕಾರಣ ಮಾಡುತ್ತಿದೆ ಎಂದು ತಾಲ್ಲೂಕಿನ ಕೆಲ ಮುಖಂಡರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಉತ್ತರವೇನು? ಎಂಬ ಪತ್ರಕರ್ತರ ಪ್ರಶ್ನೆಗೆ, ‘ನಮ್ಮ ಪಕ್ಷದವರಿಗೆ ಬೇರೆಯವರಿಗೆ ಸೂಟ್‌ಕೇಸ್ ಕೊಟ್ಟು ಅಭ್ಯಾಸವಿದೆಯೇ ಹೊರತು, ಬೇರೆಯವರಿಂದ ಪಡೆದ ರೂಢಿ ಇಲ್ಲ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)