ರಾಹುಲ್ ಭೇಟಿ: ತರಾತುರಿ ರಸ್ತೆ ನಿರ್ಮಾಣ

7

ರಾಹುಲ್ ಭೇಟಿ: ತರಾತುರಿ ರಸ್ತೆ ನಿರ್ಮಾಣ

Published:
Updated:

ಯಾದಗಿರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ.12ರಂದು ಜಿಲ್ಲೆಗೆ ರೋಡ್‌ ಶೋ ಮೂಲಕ ಆಗಮಿಸಲಿದ್ದು, ಅವರು ಬರುವ ಮಾರ್ಗದ ರಸ್ತೆಗಳನ್ನು ಹದಗೊಳಿಸಲು ಗುತ್ತಿಗೆದಾರರಿಗೆ ಆದೇಶಿಸಲಾಗಿದೆ. ಆದ್ದರಿಂದ ಶಹಾಪುರ ತಾಲ್ಲೂಕಿನ ಎಂ.ಕೊಳ್ಳೂರು ರಸ್ತೆ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರು ತರಾತುರಿಯಲ್ಲಿ ಕೈಗೆತ್ತಿಕೊಂಡಿದ್ದಾರೆ.

ರಾಜ್ಯಕ್ಕೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ ರೋಡ್‌ ಶೋ ಮೂಲಕವೇ ಪ್ರಚಾರ ಸಭೆಗೆ ಆಗಮಿಸಲು ಉದ್ದೇಶಿಸಿದ್ದಾರೆ. ಅದಕ್ಕಾಗಿ ರಾಜ್ಯದಲ್ಲಿ ರಾಹುಲ್ ರೋಡ್‌ ಶೋ ನಡೆಸಲಿರುವ ರಸ್ತೆ ಮಾರ್ಗಗಳನ್ನು ಪರೀಕ್ಷಿಸಲಿಕ್ಕಾಗಿಯೇ ಒಂದು ವಾರದ ಹಿಂದೆ ರಾಹುಲ್ ಗಾಂಧಿ ಆಪ್ತ ಸಹಾಯಕರೊಬ್ಬರು ಜಿಲ್ಲೆಗೆ ಬಂದಿದ್ದರು ಎಂದು ತಿಳಿದುಬಂದಿದೆ.

ರಾಯಚೂರಿನ ದೇವದುರ್ಗದಲ್ಲಿ ಕಾಂಗ್ರೆಸ್ ಪ್ರಚಾರಸಭೆ ಮುಗಿದ ನಂತರ ಸೈದಾಪುರ ಮಾರ್ಗದ ಮೂಲಕ ಶಹಾಪುರದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಆದರೆ, ಸೈದಾ ಪುರ, ಯಾದಗಿರಿ, ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಮಾರ್ಗ ಬದಲಿಸಲಾಗಿದ್ದು ಸೈದಾಪುರ, ಎಂ.ಕೊಳ್ಳೂರು, ಹತ್ತಿಗೂಡೂರಿನ ಮೂಲಕ ರೋಡ್‌ ಶೋ ನಡೆಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಎಂ.ಕೊಳ್ಳೂರು ಬಳಿ ಹದಗೆಟ್ಟಿರುವ ಅರ್ಧ ಕಿ.ಮೀ ಉದ್ದದ ರಸ್ತೆ ಕಾಮಗಾರಿಯನ್ನು ತರಾತುರಿಯಲ್ಲಿ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯ ಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದೆ.

ಇದೇ ರಸ್ತೆಯನ್ನು ದುರಸ್ತಿಗೊಳಿಸು ವಂತೆ ಹಲವು ವರ್ಷಗಳಿಂದ ಎಂ.ಕೊಳ್ಳೂರು ಗ್ರಾಮಸ್ಥರು, ಸ್ಥಳೀಯ ಮುಖಂಡರು ಜಿಲ್ಲಾಡಳಿತಕ್ಕೆ ಹತ್ತಾರು ಬಾರಿ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಇತ್ತ ಗಮನ ಹರಿಸಿರಲಿಲ್ಲ. ರಸ್ತೆಯಲ್ಲಿ ನಿತ್ಯ ಸಂಚರಿಸುವ ಜನರು ರಸ್ತೆ ದುರಸ್ತಿಗೊಳಿಸಲು ಮುಂದಾಗದ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದ್ದರು.

‘ಜನರ ಮನವಿಗೆ ಕಿವಿಗೊಡದ ಜಿಲ್ಲಾಡಳಿತ ರಾಹುಲ್‌ ಗಾಂಧಿ ರೋಡ್‌ ಶೋ ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದ್ದಕ್ಕಿದ್ದಂತೆ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿಸಿದೆ. ಟೆಂಡರ್ ಪಡೆದ ಗುತ್ತಿಗೆದಾರರು ರಸ್ತೆ ನಿರ್ಮಾಣ ಕಾಮಗಾರಿಯನ್ನು ತರಾತುರಿಯಲ್ಲಿ ಕೈಗೆತ್ತಿಕೊಂಡಿದ್ದು, ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಕಳಪೆ ಮಾಡುತ್ತಿದ್ದಾರೆ’ ಎಂಬುದಾಗಿ ಗ್ರಾಮಸ್ಥರಾದ ರವಿ, ರಮೇಶ್, ಶಾಂತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳಪೆ ಆರೋಪ: ಕಾಮಗಾರಿ ಸ್ಥಗಿತ

ರಾಹುಲ್‌ ರೋಡ್‌ ಶೋಗಾಗಿಯೇ ಆರಂಭಿಸಿರುವ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು, ಗುಣಮಟ್ಟ ಕಾಮಗಾರಿ ನಡೆಸುವಂತೆ ಅಲ್ಲಿನ ಗ್ರಾಮದ ಮುಖಂಡರು ಗುತ್ತಿಗೆದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿ ರಸ್ತೆ ಕಾಮಗಾರಿಯನ್ನು ಮಂಗಳವಾರ ಸ್ಥಗಿತಗೊಳಿಸಿದ್ದಾರೆ.

‘ಕನಿಷ್ಠ ಒಂದು ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ₹1.50 ಕೋಟಿಯಷ್ಟು ಅನುದಾನ ಬೇಕಾಗುತ್ತದೆ. ಆದರೆ, ಅರ್ಧ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದೇ ನಿಗೂಢವಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಬಹಿರಂಗವಾಗಿ ನಡೆದಿಲ್ಲ. ಅರ್ಧ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಕನಿಷ್ಠ ₹2ರಿಂದ ₹3 ಕೋಟಿಯಷ್ಟು ಅನುದಾನ ಬಳಸಿರಬಹುದು. ಕಾಮಗಾರಿ ಕ್ರಿಯಾಯೋಜನೆ ಕಡತಗಳನ್ನು ಸಹ ನೀಡಲು ಗುತ್ತಿಗೆದಾರರು ಒಪ್ಪುತ್ತಿಲ್ಲ’ ಎಂಬುದಾಗಿ ಬಿಜೆಪಿ ಮುಖಂಡ ಭೀಮಣ್ಣ ಮೇಟಿ ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆ ಅಗೆದು ಮರಳು ತುಂಬಿ ನಂತರ ಜಲ್ಲಿಕಲ್ಲು ಹಾಕಿ ಹದಗೊಳಿಸಿ ತದನಂತರ ಡಾಂಬರೀಕರಣ ನಡೆಸಬೇಕು. ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ರಸ್ತೆ ನಿರ್ಮಾಣ ತುರ್ತಾಗಿ ಮುಗಿಸುವಂತೆ ಒತ್ತಡ ಹಾಕಿರುವುದರಿಂದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ’ ಎಂಬುದಾಗಿ ಗ್ರಾಮಸ್ಥರಾದ ರಂಗನಾಥ, ಮಲ್ಲಿಕಾರ್ಜುನ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry