ಭಾನುವಾರ, ಡಿಸೆಂಬರ್ 8, 2019
25 °C

ಬೆಂಬಲ ಬೆಲೆಗೆ ತೊಗರಿ ಮಾರಲು ಪರದಾಟ

ಮಲ್ಲಿಕಾರ್ಜುನ ಪಾಟೀಲ್, ಚಪೆಟ್ಲಾ Updated:

ಅಕ್ಷರ ಗಾತ್ರ : | |

ಬೆಂಬಲ ಬೆಲೆಗೆ ತೊಗರಿ ಮಾರಲು ಪರದಾಟ

ಗುರುಮಠಕಲ್: ರೈತರು ಹುತ್ತಿ, ಬಿತ್ತಿ, ಬೆವರನ್ನು ಸುರಿಸಿ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯಾದರೂ ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಆವಳಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವೇ ಏಜೆನ್ಸಿಗಳ ಮೂಲಕ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ, ಅನ್ನಧಾತ ಬಿತ್ತಿ ಬೆಳೆಯೋದಕ್ಕಿಂತ ಬೆಂಬಲ ಬೆಲೆಗೆ ಬೆಳೆಯನ್ನು ಮಾರಾಟ ಮಾಡಲು ಪರದಾಡುವಂತಾಗಿರುವುದು ವಿಪರ್ಯಾಸ.

ಗುರುಮಠಕಲ್, ಗಾಜರಕೋಟ, ಪುಟಪಾಕ, ಕೊಂಕಲ್, ಯಲ್ಹೇರಿ ಹಾಗೂ ಗಣಪುರ ಗ್ರಾಮಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜ.14ರಂದು ರೈತರು ಹೆಸರು ನೋಂದಾ ಯಿಸಿಕೊಳ್ಳಲು ಕೊನೆಯ ದಿನವಾಗಿತ್ತು ಮತ್ತು ಫೆ.14ರಂದು ಮಾರಾಟಕ್ಕೆ ಕೊನೆಯ ದಿನವೆಂದು ಆದೇಶಿಸಲಾಗಿದೆ. ಖರೀದಿ ಆರಂಭಗೊಂಡು ಸುಮಾರು 15 ದಿನಗಳು ಕಳೆದರೂ ನೋಂದಾ ಯಿತ ಅರ್ಧದಷ್ಟು ರೈತರಿಂದಲೂ ತೊಗರಿಯನ್ನು ಖರೀದಿಸಿಲ್ಲ. 8 ದಿನಗಳು ಮಾತ್ರ ಖರೀದಿಗೆ ಬಾಕಿಯಿರು ವುದರಿಂದ ರೈತರು ಚಿಂತೆಗೀಡಾಗಿದ್ದಾರೆ.

‘ಪ್ರತಿದಿನ ಸರಾಸರಿ 20 ರೈತರಿಂದ ಖರೀದಿ ಮಾಡಲಾಗುತ್ತಿದೆ. ಖರೀದಿಸಿದ ತೊಗರಿಯನ್ನು ಕೇಂದ್ರದಲ್ಲಿ ಶೇಖರಿಸಿಕೊಂಡಿರುವುದರಿಂದ ಸ್ಥಳದ ಕೊರತೆಯಾಗುತ್ತಿದೆ. ಇನ್ನು ಶಿವರಾತ್ರಿಯ ಸಂದರ್ಭದಲ್ಲಿ ಮಳೆ ಬರುವ ವಾಡಿಕೆಯಿದೆ. ಈಗ ಖರೀದಿಸಿದ ಬೆಳೆಯನ್ನು ಶೀಘ್ರವೇ ದಾಸ್ತಾನಿಗೆ ಕಳುಹಿಸದಿದ್ದರೆ ಬೆಳೆ ಹಾನಿಯಾಗಬಹುದು. ಎರಡು ದಿನಕ್ಕೊಮ್ಮೆಯಾ ದರೂ ಖರೀದಿ ಕೇಂದ್ರಗಳಿಂದ ಗೋದಾಮಿಗೆ ಸಾಗಣೆ ಮಾಡಿದರೆ ಉಳಿದ ರೈತರ ತೊಗರಿ ಖರೀದಿಗೆ ಅನುಕೂಲ ವಾಗುತ್ತದೆ’ ಎನ್ನುವುದು ಖರೀದಿ ಸಂಸ್ಥೆಗಳ ನಿರ್ದೇಶಕರಾದ ಸಾಬಣ್ಣ ಗಣಪುರ, ರಾಮರೆಡ್ಡಿ, ಭೀಮು ಹಾಗೂ ಬಸವರಾಜಪ್ಪ ಅವರ ಅಭಿಪ್ರಾಯ.

‘ಈಗಾಗಲೇ ನೋಂದಾಯಿಸಿದ ರೈತರ ಬೆಳೆಯನ್ನಾದರೂ ಖರೀದಿಸುವ ಅವಕಾಶ ನೀಡದಿರುವುದು ಖಂಡನೀಯವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ ಎನ್ನುವುದನ್ನು ಮೊದಲು ಅಧಿಕಾರಿಗಳು ಅರಿತುಕೊಳ್ಳಲಿ. ಶೇ 50ರಷ್ಟು ಜನರಿಂದಲೂ ಖರೀದಿ ಸಾಧ್ಯವಾಗದಿರುವುದರಿಂದಾಗಿ ಅವಧಿ ಯನ್ನು ವಿಸ್ತರಿಸಬೇಕು’ ಎಂದು ಮಲ್ಲಿಕಾ

ರ್ಜುನ ಅದಗಲ್, ಮರೆಪ್ಪ, ವೆಂಕಟಪ್ಪ ಹಾಗೂ ಶರಣು ಮನವಿ ಮಾಡಿದರು.

300 ರೈತರಿಗೆ ಸಿಗದ ‘ಖರೀದಿ ಭಾಗ್ಯ’

ಗುರುಮಠಕಲ್: ಹತ್ತಿರದ ಚಪೆಟ್ಲಾ ಗ್ರಾಮದ ವ್ಯವಸಾಯ ಸೇವಾ ಪತ್ತಿನ ಸಹಕಾರಿ ಸಂಘಕ್ಕೆ ಜ.12ರಂದು ತೊಗರಿ ಖರೀದಿ ಕೇಂದ್ರವನ್ನು ಆರಂಭಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಆನ್‌ಲೈನ್ ನೋಂದಣಿಗೆ ಕೇಂದ್ರಕ್ಕೆ ಲಾಗಿನ್ ನೀಡಲಾಗಿಲ್ಲ. ಇನ್ನೇನು ಗ್ರಾಮದಲ್ಲಿಯೇ ಖರೀದಿ ಕೇಂದ್ರ ಆರಂಭವಾಗುತ್ತದೆ ಎಂದು ಸುಮಾರು 300 ಜನ ರೈತರು ತಮ್ಮ ದಾಖಲಾತಿಗಳನ್ನು ಚಪೆಟ್ಲಾದಲ್ಲಿಯೇ ನೀಡಿದ್ದರು. ಆದರೆ ಕೇಂದ್ರಕ್ಕೆ ಲಾಗಿನ್ ನೀಡದ ಕಾರಣ ಚಪೆಟ್ಲಾ ಖರೀದಿ ಕೇಂದ್ರ ವ್ಯಾಪ್ತಿಯ 300 ಜನ ರೈತರ ಬೆಳೆಯ ಖರೀದಿಗೆ ಆನ್ ಲೈನ್ ನೋಂದಣಿ ಆಗಿಲ್ಲ.

‘ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಇಂದು-ನಾಳೆ ಎನ್ನುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಭರವಸೆ ನೀಡಿಲ್ಲ. ಲಾಗಿನ್ ನೀಡದವರು ಖರೀದಿ ಕೇಂದ್ರದ ಸ್ಥಾಪನೆಗೆ ಆದೇಶವನ್ನು ನೀಡಿದ್ದಾದರೂ ಏಕೆ?’ ಎಂದು ಚಪೆಟ್ಲಾ ಕೇಂದ್ರದಲ್ಲಿ ನೋಂದಾಯಿಸಿ ಕಂಗಾಲಾಗಿರುವ ರೈತರು ಅಳಲನ್ನು ತೋಡಿಕೊಳ್ಳುತ್ತಾರೆ.

‘ಚಪೆಟ್ಲಾ ಕೇಂದ್ರದಲ್ಲಿ ಜ.14ರ ಅವಧಿಯೊಳಗೆ ದಾಖಲೆಗಳನ್ನು ನೀಡಿದ ರೈತರ ಬೆಳೆಯನ್ನು ಖರೀದಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ತೊಗರಿ ಸುರಿದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ’ ಎಂದು ರೈತರಾದ ಬ್ರಹ್ಮಾನಂದರೆಡ್ಡಿ, ಶಿವಪ್ಪ, ಗುರಪ್ಪ, ಪರ್ವತರೆಡ್ಡಿ, ಮಾಣಿಕಪ್ಪ ಆಕ್ರೋಶ ವ್ಯಕ್ತಪಡಿಸಿದರು.

* * 

ಕೇಂದ್ರದಲ್ಲಿ ಖರೀದಿಸಿರುವ ತೊಗರಿಯನ್ನು ಗೋದಾಮುಗಳಿಗೆ ದಾಸ್ತಾನಿಗೆ ಸಾಗಿಸಿದರೆ ನೋಂದಾಯಿತ ಉಳಿದ ರೈತರ ತೊಗರಿ ಖರೀದಿಗೆ ಅನುಕೂಲವಾಗುತ್ತದೆ.

ಸಾಬಣ್ಣ ಗಣಪುರ, ವಕೀಲ

 

ಪ್ರತಿಕ್ರಿಯಿಸಿ (+)