ಮಂಗಳವಾರ, ಡಿಸೆಂಬರ್ 10, 2019
19 °C

ಲಿಂಗಾಯತ ಹೋರಾಟ ರಾಜಕೀಯ ಪ್ರೇರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಾಯತ ಹೋರಾಟ ರಾಜಕೀಯ ಪ್ರೇರಿತ

ಅಫಜಲಪುರ: ರಾಜ್ಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ರಾಜಕೀಯ ಪ್ರೇರಿತವಾಗಿ ನಡೆಯುತ್ತಿದ್ದು, ವಿಧಾನಸಭೆ ಚುನಾವಣೆ ಮುಗಿದ ನಂತರ ಮೂಲೆಗುಂಪಾಗಲಿದೆ ಎಂದು ಬಾಳೆಹೊನ್ನೂರು  ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ

ಹೇಳಿದರು.

ತಾಲ್ಲೂಕಿನ ಚಿನ್ಮಯಗಿರಿ ಚೌಡಾಪುರ ಕ್ಷೇತ್ರದಲ್ಲಿ ಗುರು ಮಹಾಂತೇಶ್ವರ ಗದ್ದುಗೆ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಕಾಯಕಯೋಗಿ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಧಾರ್ಮಿಕ ಸಭೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಒಂದೇ ಆಗಿದ್ದು, ರಾಜಕೀಯ ಲಾಭಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡಲಾಗುತ್ತಿದೆ. ಚುನಾವಣೆ ನಂತರ ಹೋರಾಟ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

ಸಬಲ ಸದೃಢ ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಕಾರ್ಯ ಮಾಡಿದರೆ ಎಲ್ಲೆಡೆ ಸಾಮರಸ್ಯ, ಶಾಂತಿ ನೆಲೆಗೊಳ್ಳಲು ಸಾಧ್ಯ. ಧರ್ಮ, ದೇವರು, ಗುರುವಿನಲ್ಲಿ ನಂಬಿಕೆ ಇಟ್ಟು ಬಾಳಿದವರ  ವಿಕಾಸಗೊಂಡಿದ್ದನ್ನು ಕಾಣುತ್ತೇವೆ. ವೈಚಾರಿಕತೆ ಹೆಸರಿನಲ್ಲಿ ಸಂಸ್ಕೃತಿ ಕಲುಷಿತಗೊಳಿಸಬಾರದು ಎಂದು ತಿಳಿಸಿದರು. ಸಾನಿಧ್ಯ ವಹಿಸಿದ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕು ಬರಡು ಎಂದರು.

ಕತ್ತಲೆಯ ಬಾಳಿನಲ್ಲಿ ಬೆಳಕು ತೋರಬಲ್ಲಾತನೇ ನಿಜವಾದ ಗುರು. ಶಿವಪಥವನರಿಯಲು ಗುರು ಪಥವೇ ಮೊದಲು. ಕಾಯಕ ಯೋಗಿ ಸಿದ್ಧರಾಮ ಶಿವಾಚಾರ್ಯರು ಶ್ರಮ ಜೀವಿಗಳಾಗಿ ಧರ್ಮ ಕಾರ್ಯಗಳನ್ನು ಮಾಡಿದ ಶ್ರೇಷ್ಠ ಸಾಧಕರು. ಮಠದ ಕರ್ತೃ ಮಹಾಂತೇಶ್ವರ ಜಾಗೃತ ಸ್ಥಾನ ಇದಾಗಿದ್ದು ಈ ಭಾಗದ ಭಕ್ತರ ಬಾಳಿಗೆ ವರ ಕೊಡುವ ಶ್ರದ್ಧಾ ಕೇಂದ್ರವಾಗಿದೆ ಎಂದರು.

ಚಿನ್ಮಯಗಿರಿ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಮಾತನಾಡಿ ಗುರುವಿನಲ್ಲಿ ಇಟ್ಟ ನನ್ನ ನಿಷ್ಠೆ ಈ ಎತ್ತರಕ್ಕೆ ಬೆಳೆಸಿದೆ. ಕಾಯಕ ನನ್ನ ಜೀವನದ ಉಸಿರು ಎಂದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಸ್ಟೇಷನ್ ಬಬಲಾದಿನ ರೇವಣಸಿದ್ಧ ಶಿವಾಚಾರ್ಯರು ಮತ್ತು ಐಹೊಳಿ, ಶಿರಿಸ್ಯಾಡ, ಅಳ್ಳಳ್ಳಿ, ಮಾಶ್ಯಾಳ, ಮಿಣಜಿಗಿ, ಜೋಗೂರ ಶ್ರೀಗಳು ಇದ್ದರು. ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ, ಮಹಾಂತಪ್ಪ ಅವರಾದ, ಸಿದ್ದು ಶಿರಸಗಿ, ದೇವೆಂದ್ರಪ್ಪ ಜಮಾದಾರ, ಶಿವಣ್ಣ ಕಲಶೆಟ್ಟಿ, ಮಲ್ಲಿನಾಥ ಜಮಾದಾರ, ಮಹಾಂತಗೌಡ ಪಾಟೀಲ, ಶಾಂತಕುಮಾರ ಹಳಿಮನಿ, ಶಿವಪುತ್ರಪ್ಪ ಮಹಾಂತಪೂರ, ಬಸವರಾಜ ಎಂ ಪಾಟೀಲ, ಉಮೇಶಗೌಡ ಪಾಟೀಲ, ಬಸವರಾಜ ದಿಕ್ಕಾವಿ, ಬಸವರಾಜ ಸುಂಟನೂರ, ಮಹಾಂತಪ್ಪ ಎಸ್ ಜೋಗದ ಇದ್ದರು. ಸಮಾರಂಭಕ್ಕೂ ಮುನ್ನ ಉಭಯ ಸ್ವಾಮೀಜಿಗಳನ್ನು ಅಲಂಕೃತ ಸಾರೋಟದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಂಡರು.

ಪ್ರತಿಕ್ರಿಯಿಸಿ (+)