ಭಾನುವಾರ, ಡಿಸೆಂಬರ್ 8, 2019
25 °C

ರಾಹುಲ್‌ ನಿದ್ದೆಗೆ ಅಮೆರಿಕದ ಹಾಸಿಗೆ!

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ರಾಹುಲ್‌ ನಿದ್ದೆಗೆ ಅಮೆರಿಕದ ಹಾಸಿಗೆ!

ಕೊಪ್ಪಳ: ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಹುಲ್‌ ಗಾಂಧಿ ಕುಕನೂರಿನ ಹೊಸ ಪರಿವೀಕ್ಷಣಾ ಮಂದಿರದಲ್ಲಿ ಫೆ. 10 ರಂದು ಅಮೆರಿಕದ ಎಕ್ಲಿಪ್ಸ್‌ ಇಂಟರ್‌ನ್ಯಾಷನಲ್‌ ಕಂಪೆನಿಯ ಹಾಸಿಗೆಯಲ್ಲಿ ರಾಹುಲ್‌ ಪವಡಿಸಲಿದ್ದಾರೆ! ಭಾರತದಲ್ಲಿ ಈ ಬ್ರಾಂಡ್‌ನ ಸಾಮಾನ್ಯ ಹಾಸಿಗೆಯ ಆರಂಭಿಕ ಬೆಲೆಯೇ ₹ 25 ಸಾವಿರವಿದೆ.

ಈ ಪರಿವೀಕ್ಷಣಾ ಮಂದಿರದ ಮೊದಲ ಮಹಡಿಯಲ್ಲಿ ಮೂರು ಕೊಠಡಿಗಳ ಸುಸಜ್ಜಿತ, ಹವಾನಿಯಂತ್ರಿತ ಸೂಟ್‌ನ್ನು ರಾಹುಲ್‌ ಅವರಿಗಾಗಿ ಮೀಸಲಿರಿಸಲಾಗಿದೆ. ಇದರಲ್ಲಿ ನಿರೀಕ್ಷಣಾ ಕೊಠಡಿ, ಸಮಾಲೋಚನಾ ಹಾಲ್‌ ಮತ್ತು ಡಬಲ್‌ ಬೆಡ್‌ರೂಂನ ಒಳಗೆ ಎಲ್‌ಇಡಿ ಟಿವಿ, ಪುಟ್ಟ ಫ್ರಿಡ್ಜ್‌ ಇದೆ. ಈ ಕೊಠಡಿಗೆ ಹೊಂದಿಕೊಂಡಂತೆ ಶೌಚಾಲಯ ಮತ್ತು ಸ್ನಾನಗೃಹಗಳಿವೆ.

ನೆಲ ಅಂತಸ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಮಾದರಿಯ ಸೂಟ್‌ನ್ನು ಕಾದಿರಿಸಲಾಗಿದೆ. ಪರಿವೀಕ್ಷಣಾ ಮಂದಿರದಲ್ಲಿ ಒಟ್ಟು 8 ಕೊಠಡಿಗಳಿವೆ. ಎರಡು ಸೂಟ್‌ಗಳು ಸಿದ್ದರಾಮಯ್ಯ ಹಾಗೂ ರಾಹುಲ್‌ ಗಾಂಧಿ ಅವರಿಗೆ ಮೀಸಲಾಗಿವೆ. ಉಳಿದವುಗಳಲ್ಲಿ ಮುಖ್ಯಮಂತ್ರಿ ಅವರ ಸಂಪುಟ ಸಹೋದ್ಯೋಗಿಗಳು, ಅಧಿಕಾರಿಗಳು ಉಳಿದುಕೊಳ್ಳಲಿದ್ದಾರೆ. ಎಲ್ಲ ಕೊಠಡಿಗಳಿಗೆ ಎ.ಸಿ. ಅಳವಡಿಸಲಾಗಿದೆ.

ಕುಕನೂರು ಪಟ್ಟಣದಿಂದ ಹೊರವಲಯದಲ್ಲಿ ಪರಿವೀಕ್ಷಣಾ ಮಂದಿರವಿದೆ. ಪಟ್ಟಣದ ಸುತ್ತಮುತ್ತ ಕಲ್ಲು ಕ್ವಾರಿ ಹಾಗೂ ಗ್ರಾನೈಟ್‌ ಘಟಕಗಳಿವೆ. ಕ್ವಾರಿಯಲ್ಲಿ ನೀರು ನಿಂತು ಇಲ್ಲಿ ಕಾಟದ ಸಮಸ್ಯೆ ಇದೆ. ರಾಹುಲ್‌ ಉಳಿದುಕೊಳ್ಳಲಿರುವ ಕೊಠಡಿಗೆ ಮಂಗಳವಾರ ಎ.ಸಿ. ಹಾಗೂ ಶೌಚಾಲಯದ ನೀರಿನ ಪೈಪ್‌ ಅಳವಡಿಕೆ ಕಾಮಗಾರಿ ನಡೆದಿತ್ತು.

'ಸೆಪ್ಟೆಂಬರ್‌ 22, 2017ರಂದು ಉದ್ಘಾಟನೆಗೊಂಡಿದ್ದ ಪರಿವೀಕ್ಷಣಾ ಮಂದಿರದಲ್ಲಿ ವಿದ್ಯುತ್‌ ಸಂಪರ್ಕ ಸಹಿತ ಹಲವು ಕೆಲಸಗಳು ಬಾಕಿ ಉಳಿದಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದ ಕಾರಣ ಅಂದು ಉದ್ಘಾಟನೆ ಮಾಡಿಸಲಾಗಿತ್ತು. ಇದೀಗ ಬಾಕಿ ಕೆಲಸ ಪೂರ್ಣಗೊಳಿಸಲಾಗುತ್ತಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

'ರಾಹುಲ್‌ ಅವರಿಗೆ ಯಾವುದೇ ವಿಶೇಷ ಆಹಾರ ಸಿದ್ಧಪಡಿಸುತ್ತಿಲ್ಲ. ಸ್ಥಳೀಯವಾಗಿ ಲಭ್ಯ ಇರುವ ಉತ್ತರ ಕರ್ನಾಟಕದ ಸಸ್ಯಾಹಾರಿ ಭೋಜನವನ್ನೇ ಒದಗಿಸುತ್ತೇವೆ' ಎಂದು ತಿಳಿಸಿದರು.

ಸದಾನಂದಗೌಡ ಟ್ವಿಟರ್‌ ಟೀಕೆ

'ಕಾಂಗ್ರೆಸ್ ಅಧ್ಯಕ್ಷರ ಭೇಟಿ. ಕೊಪ್ಪಳ ಪ್ರವಾಸಿ ಮಂದಿರ ನವೀಕರಣಕ್ಕೆ ₹ 25 ಲಕ್ಷ ವೆಚ್ಚ. ಸರ್ಕಾರದ ದುಡ್ಡಿನಲ್ಲಿ. ನಮ್ಮ ಆಕ್ಷೇಪ ಇಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರಿಗೆ ಇದರ ಅಗತ್ಯವಿದೆ !!!

ಪ್ರವಾಸಿ ಮಂದಿರ ಉದ್ಘಾಟನೆಯಾಗಿ 2 ತಿಂಗಳು ಕಳೆದಿದೆ ಅಷ್ಟೇ. ಮತ್ತೆ ಈ ದುಂದು ವೆಚ್ಚ!!! ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’

ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

‘ಅತಿಥಿಯನ್ನು ಸತ್ಕರಿಸಬಾರದೇ?’

‘ಪರಿವೀಕ್ಷಣಾ ಮಂದಿರಕ್ಕೆ ಯಾವುದೇ ಹೆಚ್ಚುವರಿ ವೆಚ್ಚ ಮಾಡಿಲ್ಲ. ಶೌಚಗೃಹಗಳಿಗೆ ಕಮೋಡ್‌, ಬಿಸಿನೀರಿಗೆ ಗೀಸರ್‌, ಕೊಠಡಿಗಳಿಗೆ ಹವಾನಿಯಂತ್ರಕ ಅಳವಡಿಕೆ ಬಾಕಿ ಇತ್ತು. ಯಂತ್ರ, ಸಾಮಗ್ರಿಗಳು ಅಲ್ಲೇ ಇದ್ದವು. ಅವುಗಳನ್ನು ಜೋಡಿಸಿದ್ದೇವೆ. ಇಡೀ ಪರಿವೀಕ್ಷಣಾ ಮಂದಿರವನ್ನು ಸ್ವಚ್ಛಗೊಳಿಸಿದ್ದೇವೆ. ಸೊಳ್ಳೆ ಕಾಟಕ್ಕೆ ಸೊಳ್ಳೆ ಪರದೆ ಅಳವಡಿಸುತ್ತಿದ್ದೇವೆ. ಇದನ್ನೂ ಮಾಡಬಾರದೇ? ಒಬ್ಬ ಅತಿಥಿಯನ್ನು ಸತ್ಕರಿಸಬಾರದೇ? ಇದೂ ಕೇಂದ್ರ ಸಚಿವರು ಚರ್ಚಿಸುವ ವಿಷಯವೇ? ಅವರಿಗೆ ಸಂಸ್ಕಾರ ಗೊತ್ತಿಲ್ಲವೇ?’

ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

ಪ್ರತಿಕ್ರಿಯಿಸಿ (+)