ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲಿಗರಿಗೆ ಟಿಕೆಟ್‌; ಸಹೋದರರ ಮಧ್ಯೆ ಜಿದ್ದು!

Last Updated 7 ಫೆಬ್ರುವರಿ 2018, 9:40 IST
ಅಕ್ಷರ ಗಾತ್ರ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮರಾಠಿ ಪ್ರಾಬಲ್ಯ ಢಾಳವಾಗಿ ಕಾಣುತ್ತದೆ. ಚುನಾವಣೆಯಲ್ಲಿ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲೂ ಇದು ಪ್ರಭಾವ ಬೀರುತ್ತದೆ. ಕಳೆದ ಚುನಾವಣೆಯಲ್ಲಿ ಅರವಿಂದ ಪಾಟೀಲ ಆಯ್ಕೆಯಾಗಲು ಇದೇ ಅಂಶ ಕಾರಣವಾಗಿತ್ತು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಬೆಂಬಲದಿಂದ ಅವರು ಆಯ್ಕೆಯಾಗಿದ್ದರು. ಈ ಸಲವೂ ಅವರು ಚುನಾವಣಾ ಕಣಕ್ಕೆ ಇಳಿಯಲು ಬಯಸಿದ್ದಾರೆ.

ಎಂಇಎಸ್‌ ಆಂತರಿಕ ಬೆಳವಣಿಗೆಯಿಂದ ಬೇಸತ್ತಿರುವ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಹ್ಲಾದ ರೇಮಾಣಿ ಇತ್ತೀಚೆಗೆ ಮೃತರಾದರು. ಹೀಗಾಗಿ ಬಿಜೆಪಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಬಾಬುರಾವ ದೇಸಾಯಿ ಅವರು ಬಿಜೆಪಿ ಸೇರಿದ್ದಾರೆ. ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಅವರ ಜೊತೆ ಪ್ರಮೋದ ಕೊಚೇರಿ, ವಿಠ್ಠಲ ಹಲಗೆಕೇರ ಕೂಡ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ತೀವ್ರ ಕಸರತ್ತು: ಕಳೆದ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅಂಜಲಿ ನಿಂಬಾಳ್ಕರ ಈ ಸಲ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ರಯತ್ನ ನಡೆಸಿದ್ದಾರೆ. ಇವರಿಗೆ ಎಐಸಿಸಿ ಸತೀಶ ಜಾರಕಿಹೊಳಿ ಬೆಂಬಲ ಇದೆ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನೊಂದು ಕುತೂಹಲವೆಂದರೆ, ಸತೀಶ ಅವರ ಅಣ್ಣ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ನಾಸಿರ ಬಾಗವಾನ ಪರವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ನಾಸಿರ ಬಾಗವಾನ ಇತ್ತೀಚೆಗೆ ಜೆಡಿಎಸ್‌ ತೊರೆದು, ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಅವರಿಗೆ ಟಿಕೆಟ್‌ ಭರವಸೆ ನೀಡಿ, ಪಕ್ಷಕ್ಕೆ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗುತ್ತಿದೆ. ಅಭ್ಯರ್ಥಿ ಆಯ್ಕೆ ವಿಷಯವು ಈಗ ಅಣ್ಣ– ತಮ್ಮ ‌ನಡುವಿನ ಜಿದ್ದಾಜಿದ್ದಿ ವಿಷಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಮೂರು ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದ ರಫೀಕ ಖಾನಾಪುರೆ ಪುನಃ ಕಣಕ್ಕಿಳಿಯಲು ಆಸಕ್ತಿ ತೋರಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಪಕ್ಷದ ಸೋಲಿಗೆ ಕಾರಣರಾದವರು ಹಾಗೂ ಇತರ ಪಕ್ಷಗಳಿಂದ ವಲಸೆ ಬಂದವರಿಗೆ ಟಿಕೆಟ್‌ ನೀಡಬಾರದು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡಬೇಕೆಂದು ವರಿಷ್ಠ ಬಳಿ ಬೇಡಿಕೆ ಮಂಡಿಸಿದ್ದಾರೆ. ಇವರ ಜೊತೆಗೆ ಪ್ರಕಾಶ ಪಾಟೀಲ, ಸಿ.ಬಿ. ಅಂಬೋಜಿ ಕೂಡ ರೇಸ್‌ನಲ್ಲಿದ್ದಾರೆ.

ಎಂಇಎಸ್‌ ಪ್ರಭಾವ: ಮರಾಠಿ ಮತದಾರರ ಸಂಖ್ಯೆ ಹೆಚ್ಚಿನ ಸಂಖ್ಯೆ ಯಲ್ಲಿರುವುದರಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಪ್ರಭಾವ ಹೊಂದಿದೆ. ತಮ್ಮ ಬೆಂಬಲದಿಂದ ಎರಡು ಬಾರಿ ಆಯ್ಕೆಯಾಗಿದ್ದ ಅರವಿಂದ ಪಾಟೀಲ ಅವರ ಬಗ್ಗೆ ಎಂಇಎಸ್‌ ಮುಖಂಡರು ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಲ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಖಂಡರು ಯೋಚಿಸುತ್ತಿದ್ದಾರೆ. ಮಾಜಿ ಶಾಸಕ ದಿಗಂಬರ ಪಾಟೀಲ, ಮುರಳಿಧರ ಪಾಟೀಲ, ವಿಲಾಸ ಬೆಳಗಾಂವಕರ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ ಪಾಳೆಯದಲ್ಲಿ ಮಹಾಂತೇಶ ರಾವುತ, ಪ್ರಸನ್ನ ದೊಡ್ಡಬೈತಕರ, ಅಲೀಂ ನಾಯ್ಕ, ಎಚ್‌.ಎನ್‌. ನಾಯ್ಕ, ಮೇಘಾ ಕುಂದರಗಿ ಹೆಸರುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT