ಸಹಕಾರ ಕ್ಷೇತ್ರಕ್ಕೆ ಬಜೆಟ್‌ನಲ್ಲೇ ಹಣ: ಆಗ್ರಹ

7

ಸಹಕಾರ ಕ್ಷೇತ್ರಕ್ಕೆ ಬಜೆಟ್‌ನಲ್ಲೇ ಹಣ: ಆಗ್ರಹ

Published:
Updated:

ಕಳಸ: ಸಹಕಾರ ಕೇತ್ರದ ಸಾಲಕ್ಕೆ ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಹಣ ಬಿಡುಗಡೆಯಾದರೆ ರೈತರಿಗೆ ಉಪಯೋಗ ಆಗುವುದಿಲ್ಲ. ಆದ್ದರಿಂದ ಪ್ರತಿ ವರ್ಷವೂ ಮಾರ್ಚ್‍ನಲ್ಲೇ ಸಹಕಾರ ಕ್ಷೇತ್ರಕ್ಕೆ ಎಷ್ಟು ಮೊತ್ತ ಅಗತ್ಯ ಇದೆ ಎಂದು ಸರ್ಕಾರ ಸಮೀಕ್ಷೆ ನಡೆಸಿ ಬಜೆಟ್‍ನಲ್ಲೇ ಹಣ ಒದಗಿಸಬೇಕು ಎಂದು ಕಳಸ ಪ್ರಾಥಮಿಕ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಹೇಳಿದರು.

ಕಳಸದ ಮುಖ್ಯ ರಸ್ತೆಯ ಕಾಮತ್ ಟವರ್ಸ್‍ನಲ್ಲಿ ಮಂಗಳವಾರ ಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆಯ ನಂತರ ಕೆಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರಗಳು ಅಗ್ಗದ ಪ್ರಚಾರಕ್ಕಾಗಿ ರೈತರ ಸಾಲ ಮತ್ತು ಸಹಕಾರ ಸಂಘಗಳ ಬಗ್ಗೆ ಮಾತನಾಡುತ್ತವೆ. ಆದರೆ ಯಾವ ಶಾಸಕ ಅಥವಾ ಸಂಸದರೂ ಈ ಬಗ್ಗೆ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಬಾಯಿ ಬಿಡುವುದಿಲ್ಲ ಎಂದರು.

ನಮ್ಮ ಸಂಘದ ಯಂತ್ರೋಪಕರಣಗಳ ನೂತನ ಮಳಿಗೆಯಲ್ಲಿ ವಿವಿಧ ಯಂತ್ರೋಪಕರಣಗಳಿಗೆ ಸಾಲ ಸೌಲಭ್ಯ ಸಿಗುತ್ತದೆ. ದಿನಬಳಕೆಯ ವಸ್ತುಗಳ ಮಳಿಗೆಯನ್ನು ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಳಿಸಬೇಕಾಯಿತು ಎಂದು ಅವರು ಸ್ಪಷ್ಟನೆ ನೀಡಿದರು.

ಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿದ ಭೀಮೇಶ್ವರ ಜೋಷಿ, ‘ಕಳಸದಲ್ಲಿ ಅನೇಕ ಬ್ಯಾಂಕುಗಳು ಇದ್ದರೂ ಎಲ್ಲ ರೈತರಿಗೂ ಸಾಲ ಸೌಲಭ್ಯ ಈವರೆಗೂ ಸಿಕ್ಕಿಲ್ಲ. ಖಾಸಗಿ ಲೇವಾದೇವಿದಾರರ ಬಳಿಯೇ ರೈತರು ಸಾಲ ಪಡೆದು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರದ ಸೌಲಭ್ಯಗಳನ್ನು ಬ್ಯಾಂಕುಗಳು ರೈತರ ಮನೆಗಳಿಗೆ ತಲುಪಿಸಲು ಬದ್ಧತೆ ತೋರಬೇಕು’ ಎಂದು ಅವರು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್. ಎಲ್. ಧರ್ಮೇಗೌಡ ಮಾತನಾಡಿ, ‘ಕಳಸ ಹೋಬಳಿಯ ರೈತರ ಅಗತ್ಯಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಕಳಸದ ಶಾಖೆಯು ಕಾರ್ಯನಿರ್ವಹಿಸುತ್ತದೆ. ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡು ಯಶಸ್ಸು ಗಳಿಸುವ ಗುರಿ ಇದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಲಿಂಗಣ್ಣ, ‘30 ವರ್ಷಗಳಿಂದ ಬ್ಯಾಂಕ್‌ ಹೊಸ ಶಾಖೆ ತೆರೆದಿರಲಿಲ್ಲ. ಆದರೆ ಈಗ ಹೊಸದಾಗಿ 11 ಶಾಖೆ ಆರಂಭಿಸಲು ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕಿನಿಂದ ಅನುಮತಿ ಸಿಕ್ಕಿದೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಲ್. ಸಂದೀಪ್, ತಾಲ್ಲೂಕು ಪಂಚಾಯಿತಿ ಸದಸ್ಯ ರಫೀಕ್, ಜೆಡಿಎಸ್ ಧುರೀಣ ಜ್ವಾಲನಯ್ಯ, ವ್ಯಾಪಾರಿ ರಾಘವೇಂದ್ರ ಭಟ್, ವಿವಿಧ ಸಹಕಾರ ಸಂಘಗಳ ಆಶಾಲತಾ, ಭೋಜರಾಜ್, ಗಜೇಂದ್ರ, ಅನಿಲ್ ಬಕ್ಕಿ,ಜಗದೀಶ್, ಎಂ.ಬಿ.ಸಂತೋಷ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರತಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry