ಬುಧವಾರ, ಡಿಸೆಂಬರ್ 11, 2019
22 °C

ಪ್ರಧಾನಿ ಸ್ಥಾನದ ಗೌರವ ಕಡಿಮೆ ಮಾಡಿದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಸ್ಥಾನದ ಗೌರವ ಕಡಿಮೆ ಮಾಡಿದ ಮೋದಿ

ದಾವಣಗೆರೆ: ‘ದೇಶದ ಒಕ್ಕೂಟ ವ್ಯವಸ್ಥೆಯ ಸಂರಕ್ಷಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿಚಾರವಾಗಿ ಮಾತನಾಡಬೇಕಿತ್ತು. ಹಾಗೆ ಮಾಡದೆ ಅವರು ತಮ್ಮ ಸ್ಥಾನದ ಗೌರವ ಕಡಿಮೆ ಮಾಡಿದ್ದಾರೆ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಟೀಕಿಸಿದರು.

ಬಿಜೆಪಿಯ ಸಿದ್ಧಾಂತ–ನಿಲುವುಗಳೇನೇ ಇದ್ದರೂ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮೇಲೆ ಪ್ರಧಾನಿ ಜವಾಬ್ದಾರಿಯುತವಾಗಿ ವರ್ತಿಸಬೇಕಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯಾ ನಂತರ ದೇಶ ಮಾದರಿ ಪ್ರಧಾನಿಗಳನ್ನು ಕಂಡಿದೆ. ನೆಹರೂ, ಶಾಸ್ತ್ರಿ, ಮೊರಾರ್ಜಿ ದೇಸಾಯಿ, ವಾಜಪೇಯಿ ಅವರಂಥ ನಾಯಕರು ಸಮಸ್ಯೆಗಳು ಎದುರಾದಾಗ ಪಕ್ಷಭೇದ ಮರೆತು ಮುತ್ಸದ್ದಿತನ ಮೆರೆದಿದ್ದರು. ಹಾಗೆಯೇ ಮೋದಿಯವರೂ ನಡೆದುಕೊಳ್ಳಬೇಕು ಎಂಬುದು ನಮ್ಮ ನಿರೀಕ್ಷೆ’ ಎಂದರು.

ಈಚೆಗೆ ವೀರಶೈವ ಲಿಂಗಾಯತ ಚಳವಳಿ ರಾಜಕೀಯ ಪ್ರೇರಿತ ಎಂಬ ಆರೋಪವಿದೆ. 12ನೇ ಶತಮಾನದಲ್ಲಿ ಬಸವಣ್ಣರಾದಿಯಾಗಿ ಶರಣ–ಶರಣೆಯರು ಜಾತಿ, ಕುಲ, ಪಂಥವನ್ನು ಮೀರಿ ವೈಚಾರಿಕ ಆಂದೋಲನ ಆರಂಭಿಸಿದ್ದರು. ಅವರ ನಂತರ ಆಂದೋಲನ ಅಂತರ್ಗಾಮಿಯಾಗಿತ್ತು. ಬಳಿಕ, ಬ್ರಾಹ್ಮಣ್ಯ ಹಾಗೂ ಮನುವಾದವು ವೀರಶೈವ ಎಂಬ ಪೋಷಾಕು ಧರಿಸಿ ಸಮಾಜವನ್ನು ದಾರಿ ತಪ್ಪಿಸುತ್ತ ಬಂದಿತ್ತು. ಈಗ ಸತ್ಯದ ಘಟ್ಟ ತಲುಪಿದ್ದೇವೆ. ವೈಚಾರಿಕತೆಯ ಹೋರಾಟ ಮತ್ತೆ ಕಾವು ಪಡೆದುಕೊಂಡಿದೆ ಎಂದರು.

ವೀರಶೈವರು ಹಿಂದೂಧರ್ಮದ ಭಾಗ ಎಂದು ಹೇಳಿಕೊಂಡ ಮೇಲೆ, ಅವರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಏಕೆ ಬೇಕು? ಈಚೆಗೆ ನ್ಯಾಯಾಲಯ ಕೂಡ ಇದೇ ಪ್ರಶ್ನೆ ಎತ್ತಿದೆ ಎಂದು ಚಂಪಾ ಹೇಳಿದರು.

ವಿರಕ್ತ ಮಠದ ಸ್ವಾಮೀಜಿಗಳೂ 12ನೇ ಶತಮಾನದ ವೈಚಾರಿಕ ಚಳವಳಿಯ ಉತ್ಪನ್ನಗಳು. ಈ ಸತ್ಯವನ್ನು ಅರಿತು ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನಕ್ಕೆ ಬಂದು ಸೇರಬೇಕು ಎಂದು ಹೇಳಿದರು.

ನಾಡಿನ ಪ್ರಸಿದ್ಧ ಸುತ್ತೂರು ಹಾಗೂ ಸಿದ್ಧಗಂಗಾ ಮಠಗಳು ಬಸವಣ್ಣನ ಹಾದಿಯಲ್ಲೇ ನಡೆಯುತ್ತಿವೆ. ಅಕ್ಷರ, ಅನ್ನದಾಸೋಹ ನಡೆಸುತ್ತಿವೆ. ಉಭಯ ಮಠಗಳ ಶ್ರೀಗಳು ಹೋರಾಟಕ್ಕೆ ಹೊಸ ಆಯಾಮ ನೀಡಬೇಕು ಎಂದು ಚಂಪಾ ಒತ್ತಾಯಿಸಿದರು.

* * 

‘ಒಕ್ಕಲಿಂಗ ಕುರುಕ್ಷೇತ್ರ’

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಜನಸಂಖ್ಯಾ ಬಲದ ಮೇಲೆ ಪ್ರಭಾವ ಬೀರುತ್ತಿರುವುದನ್ನು ಕಾಣಬಹುದು. ಈಗ ನಿಧಾನವಾಗಿ ಕುರುಬ ಸಮಾಜವೂ ಬಲಾಢ್ಯವಾಗುತ್ತ ರಂಗ ಪ್ರವೇಶ ಮಾಡುತ್ತಿದೆ. ಒಟ್ಟಾರೆ ಕರ್ನಾಟಕವು ‘ಒಕ್ಕಲಿಂಗ ಕುರುಕ್ಷೇತ್ರ’ (ಒಕ್ಕಲಿಗರು, ಲಿಂಗಾಯತರು, ಕುರುಬರು) ಆಗಿ ಮಾರ್ಪಟ್ಟಿದೆ ಎಂದರು.

ಪ್ರತಿಕ್ರಿಯಿಸಿ (+)