ಬುಧವಾರ, ಡಿಸೆಂಬರ್ 11, 2019
26 °C

ಮಹದಾಯಿ ನೀರು ಹರಿಯದಿದ್ದರೆ ಹೋರಾಟ ತೀವ್ರ: ರೈತರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದಾಯಿ ನೀರು ಹರಿಯದಿದ್ದರೆ ಹೋರಾಟ ತೀವ್ರ: ರೈತರ ಎಚ್ಚರಿಕೆ

ನರಗುಂದ: ‘ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮಹದಾಯಿ ಯೋಜನೆ ಜಾರಿಯಾಗುತ್ತಿಲ್ಲ. ರೈತರ ಹೋರಾಟವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಗುರವಾಗಿ ಪರಿಗಣಿಸಿವೆ. ಇದೇ ಧೋರಣೆ ಮುಂದುವರಿದರೆ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ರೋಣ ತಾಲ್ಲೂಕಿನ ಕೋಟುಮಚಗಿ ಗ್ರಾಮದ ರೈತ ವಿದ್ಯಾಧರ ದೊಡಮನಿ ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 937ನೇ ದಿನ ಮಂಗಳವಾರ ಅವರು ಮಾತನಾಡಿದರು.

‘ಮಹದಾಯಿಗೆ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಆದರೆ, ಈ ಭಾಗದ ಶಾಸಕರ, ಸಂಸದರ ಹೊಣೆಗೇಡಿತನದಿಂದ ಇದು ಜಾರಿಯಾಗುತ್ತಿಲ್ಲ. ಪ್ರಧಾನಿ ಬೆಂಗಳೂರಿನಲ್ಲಿ ಮಹದಾಯಿ ವಿಷಯ ಪ್ರಸ್ತಾಪಿಸದೇ ಇದ್ದಿದ್ದು ಖಂಡನೀಯ. ಮಹದಾಯಿ ಹಕ್ಕು ರೈತರಿಗೆ ಲಭಿಸದಿದ್ದರೆ, ಹೋರಾಟ ತೀವ್ರಗೊಳ್ಳುತ್ತದೆ, ಸ್ವರೂಪ ಬದಲಾಗುತ್ತದೆ’ ಎಂದು ಎಚ್ಚರಿಸಿದರು.

ಮಹದಾಯಿ ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಮಾತನಾಡಿ, ‘ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿ ಸಂಸದರು ಮಹದಾಯಿ ಬಗ್ಗೆ ಸಂಸತ್‌ ಅಧಿವೇಶನದಲ್ಲಿ ಮಾತನಾಡುತ್ತಿಲ್ಲ. ಹೋರಾಟ ಆರಂಭವಾದ ಮೇಲೆ ಹಲವು ಅಧಿವೇಶನಗಳು ನಡೆದರು ಪ್ರಧಾನಿಗೆ ಇದನ್ನು ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದು ದೂರಿದರು.

‘ಈಗ ಸಂಸತ್‌ ಹಾಗೂ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈಗಲಾದರೂ ನಮ್ಮ ಶಾಸಕರು, ಸಂಸದರು ಮನಸ್ಸು ಮಾಡಿ ಮಹದಾಯಿ ಸಮಸ್ಯೆಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಎಸ್‌.ಕೆ.ಗಿರಿಯಣ್ಣವರ, ಎಸ್‌.ಬಿ.ಜೋಗಣ್ಣವರ, ವೆಂಕಪ್ಪ ಹುಜರತ್ತಿ, ಈರಣ್ಣ ಗಡಗಿಶೆಟ್ಟರ, ಹನುಮಂತ ಪಡೆಸೂರು, ಚನ್ನಬಸವ್ವ ಇದ್ದರು.

ಪ್ರತಿಕ್ರಿಯಿಸಿ (+)