ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ್ಗುಲಿನ ಮುಳ್ಳೇ ಚುಚ್ಚುವ ಆತಂಕ!

Last Updated 7 ಫೆಬ್ರುವರಿ 2018, 10:33 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ ಜಿಲ್ಲೆ): ಸಂಬಂಧಿ ಟಿಪ್ಪು ಸುಲ್ತಾನ್‌ನನ್ನು ನಿರ್ಲಕ್ಷಿಸಿ, ಮರಾಠ ಪೇಶ್ವೆಗಳ ಜೊತೆ ಸವಣೂರಿನ ನವಾಬರು ಕೈ ಜೋಡಿಸುತ್ತಾರೆ. ಕೈ ಕೊಟ್ಟ ನವಾಬರು ತನ್ನ ಸಂಬಂಧಿಕರು ಎಂಬ ಅನುಕಂಪವನ್ನೂ ತೋರದ ಟಿಪ್ಪು ಸುಲ್ತಾನ್, ಅವರ ವಿರುದ್ಧ ದಂಡೆತ್ತಿ ಬಂದು ಗೆಲ್ಲುತ್ತಾನೆ. ಶಿಗ್ಗಾವಿ–ಸವಣೂರಿನ ಕೆಲ ಶತಮಾನಗಳ ಹಿಂದಿನ ರಾಜಕೀಯ ಇತಿಹಾಸದ ಕಥನವೊಂದು ಹೀಗೆ ಸಾಗುತ್ತದೆ. ಸಂಬಂಧಿಕರೇ ಶತ್ರುಗಳಾಗಿ, ಶತ್ರುಗಳ ಜೊತೆಗೇ ಮಿತ್ರತ್ವ ಬೆಳೆಸಿ, ಸ್ಪರ್ಧೆಗಳ ನಡುವೆಯೂ ಸಾಮರಸ್ಯ ತೋರಿಸಿದ ಇಂತಹ ಹಲವಾರು ಐತಿಹಾಸಿಕ ನಿದರ್ಶನಗಳು ಇಲ್ಲಿವೆ.

ಇಂತಹ ಕಥನಗಳಿಗೆ ಪ್ರಸ್ತುತ ರಾಜಕಾರಣವೂ ಹೊರತಾಗಿಲ್ಲ. ಮೂರು ಪ್ರಮುಖ ಪಕ್ಷಗಳ (ಬಿಜೆಪಿ, ಕಾಂಗ್ರೆಸ್, ಜೆಡಿಎಸ್) ಅಭ್ಯರ್ಥಿಗಳನ್ನು ಮುಖಂಡರು ಘೋಷಿಸಿದ್ದರೂ, ‘ಆಕಾಂಕ್ಷಿ’ಗಳ ಪೈಪೋಟಿ ನಿಂತಿಲ್ಲ. ‘ಮಗ್ಗುಲ ಮುಳ್ಳು’ ಚುಚ್ಚುವ ಆತಂಕವೂ ಪ್ರಮುಖ ಪಕ್ಷಗಳಲ್ಲಿವೆ.

ಬಿಜೆಪಿ: ಎರಡು ಬಾರಿ ಶಾಸಕರಾದ ಬಸವರಾಜ ಬೊಮ್ಮಾಯಿ ಈ ಬಾರಿಯೂ ಅಭ್ಯರ್ಥಿ ಎಂದು ಶಿಗ್ಗಾವಿಯಲ್ಲಿ ನಡೆದಿದ್ದ ‘ಪರಿವರ್ತನಾ ಯಾತ್ರೆ’ಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದರು. ಘೋಷಣೆ ಮಾಡಿದ ಬಿ.ಎಸ್. ಯಡಿಯೂರಪ್ಪ ಅವರು ಇನ್ನೂ ಜಿಲ್ಲೆ ಬಿಟ್ಟಿರಲಿಲ್ಲ. ‘ನಾನೂ ಆಕಾಂಕ್ಷಿ’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಘೋಷಣೆ ಮಾಡಿದ್ದರು. ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಬಣದ ಮೂಲಕ ಸತತ ಪ್ರಯತ್ನದಲ್ಲಿ ತೊಡಗಿರುವುದು ಗುಟ್ಟಾಗಿ ಉಳಿದಿಲ್ಲ.

ಕಳೆದೆರಡು ವಿಧಾನಸಭಾ ಚುನಾ ವಣೆಗಳಲ್ಲಿ ಬೊಮ್ಮಾಯಿ ಹಾಗೂ ಬೇವಿನಮರದ ಜೊತೆಯಾಗಿ ಇದ್ದರು. ಕೆಜೆಪಿ ಹುಟ್ಟಿದ ಜಿಲ್ಲೆಯಲ್ಲಿ ಬಿಜೆಪಿ ಒಂದು ಕ್ಷೇತ್ರವನ್ನಾದರೂ ಉಳಿಸಿಕೊಂಡಿತ್ತು. ಉಳಿದಂತೆ ಗುಡ್ಡಪ್ಪ ಮರ್ತೂರ, ಮಹೇಶ ಸಾಲಿಮಠ ಮತ್ತಿತರರು ಆಕಾಂಕ್ಷಿಗಳು ಎಂದಿದ್ದಾರೆ. ಒಟ್ಟಾರೆ, ಕ್ಷೇತ್ರದಲ್ಲಿ ರಾಜಶೇಖರ ಸಿಂಧೂರ ಅವರ ಪ್ರಭಾವ ಅಲ್ಲಗಳೆಯುವಂತಿಲ್ಲ. ಇದು, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರವಾಗಿದೆ.

ಕಾಂಗ್ರೆಸ್: ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಜ್ಜಂಪೀರ್ ಖಾದ್ರಿಯನ್ನು ಈ ಕ್ಷೇತ್ರದ ಅಭ್ಯರ್ಥಿ ಯನ್ನಾಗಿ ಘೋಷಿಸಿದ್ದಾರೆ. ಸತತ ಮೂರು ಬಾರಿ ಸೋಲುಂಡರೂ, ಈ ಬಾರಿಯ ಜಿಲ್ಲಾ ಪಂಚಾಯ್ತಿ ಚುನಾವಣೆ ಬಳಿಕ ಅವರು ಚುರುಕುಗೊಂಡಿದ್ದಾರೆ. ಸಾಮಾಜಿಕ ನ್ಯಾಯದ ನೀತಿಯನ್ನು ಅನುಸರಿಸಿಕೊಂಡು ಬಂದ ಕಾಂಗ್ರೆಸ್, ಅಲ್ಪಸಂಖ್ಯಾತರಿಗೆ ಮೀಸಲು ಅವಕಾಶ ಕಲ್ಪಿಸುತ್ತಾ ಬಂದಿದೆ. ಇನ್ನೊಂದೆಡೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಳಿಕ ಯುವಕರಲ್ಲಿ ಹುರುಪು ತಂದಿದ್ದಾರೆ. ಜೊತೆಗೆ ಸಾಮರಸ್ಯದ ಹೆಜ್ಜೆಗಳನ್ನು ಇಡುತ್ತಿದ್ದು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರ ಆಯ್ಕೆಯು ಈ ಚಿತ್ರಣ ನೀಡಿದೆ.

ಆದರೆ, ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ಚುರುಕು ನೀಡಿ ರಾಜ್ಯ ಮುಖಂಡರ ಗಮನ ಸೆಳೆದ ರಾಜೇಶ್ವರಿ ಪಾಟೀಲ್‌ (ಮಾಮಲೇ ದೇಸಾಯಿ) ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಎಐಸಿಸಿ ಮಟ್ಟದಲ್ಲಿ ತಮ್ಮ ಪ್ರಯತ್ನ ಮುಂದು ವರಿಸಿದ್ದಾರೆ. ವಿಭಿನ್ನಾ ಛಾಪು ಮೂಡಿಸಿದ್ದಾರೆ.

ಮಾಜಿ ಸಂಸದ ಮಂಜುನಾಥ ಕುನ್ನೂರ ಅಥವಾ ರಾಜೂ ಕುನ್ನೂರ ಪೈಕಿ ಒಬ್ಬರು ಟಿಕೆಟ್ ಪಡೆಯಬೇಕು ಎಂಬ ಪಣ ತೊಟ್ಟಿದ್ದಾರೆ. ಇವರ ಪ್ರಯತ್ನವು ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ಸಂದರ್ಭ ಬೆಳಕಿಗೆ ಬಂದಿತ್ತು. ಕುನ್ನೂರ ರಾಷ್ಟ್ರಮಟ್ಟದ ಪ್ರಭಾವ ಹೊಂದಿದ್ದಾರೆ.

ಆಕಾಂಕ್ಷಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟರೆ ಎಲ್ಲರ ಜೊತೆ ಬೆರೆತುಕೊಂಡು ಹೋಗಬಲ್ಲ, ಸಂಜೀವ ಕುಮಾರ್ ನೀರಲಗಿ (ಪಾಟೀಲ್) ಅವರನ್ನು ಕಣಕ್ಕಿಳಿಸುವ ಚರ್ಚೆಯು ಈ ಹಿಂದೆ ನಡೆದಿತ್ತು. ಪ್ರಮುಖ ಸಮುದಾಯ, ಧರ್ಮಗಳ ಮತ ಸೆಳೆಯಲು ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯ ಕೇಳಿಬಂದಿತ್ತು.

ಜೆಡಿಎಸ್: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ಅವರನ್ನು ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಘೋಷಿಸಿದ್ದಾರೆ. ಕಳೆದೊಂದು ವರ್ಷದಿಂದ ಅವರು ಸತತ ಸಿದ್ಧತೆಯಲ್ಲಿ ಇದ್ದಾರೆ. ಬಂಕಾಪುರ ಪುರಸಭೆ ಸದಸ್ಯ ಮಹ್ಮದ್‌ ಗೌಸ್ ಗುಲ್ಮಿ ಹಾಗೂ ಎಂ.ಎಚ್. ಪಠಾಣ್ ಆಕಾಂಕ್ಷಿಗಳಾಗಿದ್ದಾರೆ.

ಕೆರೆ ಹೂಳೆತ್ತುವುದು, ಬರ ಸಂದರ್ಭ ನೀರು ದಾನ, ಸರ್ವಧರ್ಮ ವಿವಾಹ ಮತ್ತಿತರ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದ ಶ್ರೀಕಾಂತ ದುಂಡಿಗೌಡ್ರ ಸ್ಪರ್ಧಿಸುವ ಆಕಾಂಕ್ಷೆ ತೋರಿದ್ದಾರೆ. ಮೂರು ಪಕ್ಷದ ಪ್ರಮುಖರು ಅಭ್ಯರ್ಥಿಗಳ ಘೋಷಣೆ ಮಾಡಿದ ಬಳಿಕವೂ ಆಕಾಂಕ್ಷಿಗಳ ಪೈಪೋಟಿ ನಿಂತಿಲ್ಲ.

ಶಿಗ್ಗಾವಿ ವಿಧಾನ ಸಭಾ ಕ್ಷೇತ್ರ
2013ರ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಪಡೆದ ಮತ ಪ್ರಮಾಣ
ಬಸವರಾಜ ಬೊಮ್ಮಾಯಿ (ಬಿಜೆಪಿ)– 73,007
ಸೈಯ್ಯದ್ ಅಜ್ಜಂಪೀರ್ ಖಾದ್ರಿ (ಕಾಂಗ್ರೆಸ್)– 63,504
ಬಾಪುಗೌಡ್ರ ಕಾಶೀನಾಥ ಗೌಡ್ರ ಪಾಟೀಲ್ (ಕೆಜೆಪಿ)– 7,810
ಸುಮಂಗಲಾ ಕಡಪ್ಪ ಮೈಸೂರು (ಜೆಡಿಎಸ್)– 1,531
ಚಲಾವಣೆಯಾದ ಒಟ್ಟು ಮತಗಳು– 1,50,102

ಮತದಾರರ ವಿವರಗಳು (ಈ ಪೈಕಿ ಮಹಿಳಾ ಮತದಾರರು)
2013 ರಲ್ಲಿ ಮತದಾರರು– 1,78,459 (83,278)
2018ರಲ್ಲಿ ಮತದಾರರು– 2,06,859 (98,843)
ಒಟ್ಟು ಮತದಾರರ ಹೆಚ್ಚಳ– 28,400 (15,565)
(*2018 ಮತದಾರರ ಪಟ್ಟಿಯು ಅಂತಿಮ ಪರಿಷ್ಕರಣೆಗೆ ಒಳಪಡಲಿದೆ)

ಕ್ಷೇತ್ರದ ವಿವಿಧ ಅಂಕಿ ಅಂಶಗಳು
ಒಟ್ಟು ಮತಗಟ್ಟೆಗಳು–237
ಗ್ರಾಮ ಪಂಚಾಯ್ತಿಗಳು–37
ಒಟ್ಟು ಗ್ರಾಮಗಳು–122
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು–06
ತಾಲ್ಲೂಕು ಪಂಚಾಯ್ತಿಗಳು–02
ಎಪಿಎಂಸಿಗಳು–02
ಪುರಸಭೆ– 03

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT