ಬುಧವಾರ, ಡಿಸೆಂಬರ್ 11, 2019
24 °C

ವಸತಿ ನಿಲಯಕ್ಕೆ ಸೌಲಭ್ಯಗಳ ಕೊರತೆ

ಮುಕ್ತೇಶ ಕೂರಗುಂದಮಠ Updated:

ಅಕ್ಷರ ಗಾತ್ರ : | |

ವಸತಿ ನಿಲಯಕ್ಕೆ ಸೌಲಭ್ಯಗಳ ಕೊರತೆ

ರಾಣೆಬೆನ್ನೂರು: ಇಲ್ಲಿನ ಶ್ರೀರಾಮನಗರ ಸಮೀಪದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ನಿತ್ಯವೂ ಪರದಾಡುವಂತಾಗಿದೆ.

ಅಪಾಯದ ಯುಜಿಡಿ ಗುಂಡಿಗಳು: ವಸತಿ ನಿಲಯಕ್ಕೆ ಹೋಗುವ ಸಿದ್ಧಾರೂಢಮಠದ 2ನೇ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಯುಜಿಡಿ ಕಾಮಗಾರಿ ಗುಂಡಿಗಳು ಆಪಾಯಕ್ಕೆ ಆಹ್ವಾನ ನೀಡುತ್ತಿವೆ. ವಸತಿ ನಿಲಯಕ್ಕೆ ಈ ಮಾರ್ಗವಾಗಿ ರಾತ್ರಿ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.

‘ಈ ಮಾರ್ಗವಾಗಿಯೇ ಬನಶಂಕರಿ ನಗರದಿಂದ ಇಟಗಿ–ಮಾಗೋಡ ರಸ್ತೆ, ಶಿವಾಜಿ ನಗರ, ಪೊಲೀಸ್‌ ಕ್ವಾಟರ್ಸ್‌, ಕಮಲಾ ನಗರ ಹಾಗೂ ಹೌಸಿಂಗ್‌ ಕಾಲೊನಿಗೆ ಜನ ಸಂಚರಿಸುತ್ತಾರೆ. ರಾತ್ರಿ ವೇಳೆ ಬೀದಿ ದೀಪಗಳು ಕೂಡಾ ಸರಿಯಾಗಿ ಹತ್ತುವುದಿಲ್ಲ’ ಎಂದು ಕನ್ನಡಪರ ಸಂಘಟನೆಯ ಮುಖಂಡ ನಿತ್ಯಾನಂದ ಕುಂದಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚಿದ ಹಂದಿಗಳ ಹಾವಳಿ: ‘ವಸತಿ ನಿಲಯದ ಹಿಂಭಾಗದಲ್ಲಿ ಹಾಕಿರುವ ತಂತಿಬೇಲಿಯನ್ನು ಹಂದಿಗಳು ದಾಟಿಬರುತ್ತಿದ್ದು, ಚರಂಡಿಯ ಪೈಪ್‌ಲೈನ್‌ನನ್ನು ಒಡೆದು ಹಾಕಿವೆ. ಅಲ್ಲದೇ, ತೊಳೆದು ಹಾಕಿದ್ದ ಬಟ್ಟೆಗಳ ಮೇಲೆ ಅಡ್ಡಾಡಿ ಹೊಸಲು ಮಾಡುತ್ತಿವೆ’ ಎಂದು ವಿದ್ಯಾರ್ಥಿಗಳು ಹೇಳಿದರು.

‘ವಸತಿ ನಿಲಯದ ಚರಂಡಿ ನೀರು ರಸ್ತೆ ಹಾಗೂ ಖಾಲಿ ನಿವೇಶನಗಳಲ್ಲಿ ಹರಡಿಕೊಳ್ಳೊತ್ತಿದೆ. ಸೊಳ್ಳೆ ಹೆಚ್ಚಾಗಿದ್ದು, ಸಂಜೆಯಾಗುತ್ತಿದಂತೆಗೆ ವಸತಿ ನಿಲಯಕ್ಕೆ ನುಗ್ಗುತ್ತಿವೆ.  ನಿಂತ ಚರಂಡಿಯಿಂದ ಬರುವ ದುರ್ವಾಸನೆಯಿಂದ ಜನ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ’ ಎಂದು ಸ್ಥಳೀಯ ನಿವಾಸಿ ಸುಮಾ ಎನ್‌. ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಹಿಂಭಾಗದ ಆವರಣ ಗೋಡೆ ನಿರ್ಮಾಣದ ಮಾಡುವಂತೆ ಶಾಸಕರ ಗಮನಕ್ಕೆ ತರಲಾಗಿದೆ. ಅಲ್ಲದೇ, ಜಿಲ್ಲಾ ಪಂಚಾಯ್ತಿ ಅನುದಾನ ಮಂಜೂರಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಾಲ್ಲೂಕು ವಿಸ್ತೀರ್ಣಾಧಿಕಾರಿ ವಿ.ಎಸ್‌.ಹಿರೇಮಠ ತಿಳಿಸಿದರು.

* * 

ವಸತಿ ನಿಲಯಕ್ಕೆ ಸಂಪರ್ಕಿಸುವ ರಸ್ತೆ ದುರಸ್ತಿ, ಚರಂಡಿ ನಿರ್ಮಾಣ ಹಾಗೂ ಬೀದಿ ದೀಪಗಳನ್ನು ಅಳವಡಿಸುವಂತೆ ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ.

–ಶಾಂತಪ್ಪ ಸಾವುಕಾರ

ಮೇಲ್ವಿಚಾರಕ, ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌  ನಂತರದ ವಸತಿ ನಿಲಯ

 

ಪ್ರತಿಕ್ರಿಯಿಸಿ (+)