ಬುಧವಾರ, ಡಿಸೆಂಬರ್ 11, 2019
24 °C

ತಾಯಿ–ಮಗ ಸಾವು ಪ್ರಕರಣ: ಕಲ್ಯಾಣಿ ಮೋಟರ್ಸ್ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಯಿ–ಮಗ ಸಾವು ಪ್ರಕರಣ: ಕಲ್ಯಾಣಿ ಮೋಟರ್ಸ್ ವಿರುದ್ಧ ಎಫ್‌ಐಆರ್‌

ಬೆಂಗಳೂರು: ನೆಲ್ಲೂರಹಳ್ಳಿಯ ‘ಸುಮಧುರಂ ಆನಂದಂ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪಾರ್ಕಿಂಗ್‌ನಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ತಾಯಿ– ಮಗ ಮೃತಪಟ್ಟ ಪ್ರಕರಣ ಸಂಬಂಧ ಕುಂದಲಹಳ್ಳಿಯ ‘ಕಲ್ಯಾಣಿ ಮೋಟರ್ಸ್‌ ಶೋರೂಂ’ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಫೆ. 2ರಂದು ಸಂಭವಿಸಿದ್ದ ಘಟನೆಯಲ್ಲಿ ನೇಹಾ ವರ್ಮಾ (30) ಹಾಗೂ ಅವರ ನಾಲ್ಕು ವರ್ಷದ ಮಗ ಪರಮ್ ಸಜೀವ ದಹನವಾಗಿದ್ದರು. ಈ ಸಂಬಂಧ ಪತಿ ರಾಜೇಶ್‌ ನೀಡಿದ್ದ ದೂರಿನನ್ವಯ ನಿರ್ಲಕ್ಷ್ಯದ ಸಾವು (ಐಪಿಸಿ 304ಎ) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ದೊಮಲ್ಲೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಹತ್ತು ವರ್ಷಗಳ ಹಿಂದೆ ನೇಹಾ ಅವರನ್ನು ಮದುವೆಯಾಗಿದ್ದೆ. ಅವರು ಹಾಗೂ ಮಗನೊಂದಿಗೆ ‘ಸುಮಧುರಂ ಆನಂದಂ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಿದ್ದೆ’ ಎಂದು ರಾಜೇಶ್‌ ದೂರಿನಲ್ಲಿ ಬರೆದಿದ್ದಾರೆ.

‘ಪತ್ನಿ ನೇಹಾ, ಹೊರಗಡೆ ಹೋಗಿ ಬರಲು ಮಾರುತಿ ಕಾರು (ಕೆಎ 53 ಪಿ 644) ಉಪಯೋಗಿಸುತ್ತಿದ್ದರು. ಈ ಕಾರನ್ನು 6 ತಿಂಗಳ ಹಿಂದಷ್ಟೇ ಕುಂದಲಹಳ್ಳಿ ಬಳಿಯ ಕಲ್ಯಾಣಿ ಮೋಟರ್ಸ್‌ ಶೋರೂಂನಲ್ಲಿ ಸರ್ವೀಸ್‌ ಮಾಡಿಸಿದ್ದೆ.’

‘ಫೆ. 2ರಂದು ಬೆಳಿಗ್ಗೆ 7.30 ಗಂಟೆಗೆ ಕೆಲಸಕ್ಕೆ ಹೋಗಿದ್ದೆ. ಪಕ್ಕದ ಮನೆಯ ವಾಸಿ ಆಶೀಸ್‌ ಎಂಬುವರು ಸಂಜೆ 4.40 ಗಂಟೆಗೆ ನನಗೆ ಕರೆ ಮಾಡಿ, ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಬೇಗ ಬನ್ನಿ ಎಂದಿದ್ದರು. ಕೂಡಲೇ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಬಂದು ನೋಡಲಾಗಿ, ಕಾರು ಸಂಪೂರ್ಣ ಸುಟ್ಟಿತ್ತು. ಪತ್ನಿ ಹಾಗೂ ಮಗ ಸಜೀವವಾಗಿ ದಹನವಾಗಿದ್ದರು. ಈ ಸಾವಿಗೆ ಕಲ್ಯಾಣಿ ಮೋಟರ್ಸ್‌ ಶೋರೂಂನವರು ಕಾರಣ’ ಎಂದು ಅವರು ಬರೆದಿದ್ದಾರೆ.

ಶೋರೂಂ ಅಧಿಕಾರಿಗಳಿಗೆ ನೋಟಿಸ್‌: ‘ಘಟನೆ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಶೋರೂಂ ಅಧಿಕಾರಿಗಳಿಗೆ ನೋಟಿಸ್‌ ನೀಡಲಿದ್ದೇವೆ. ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಕಾರಿನ ಸರ್ವೀಸ್‌ನಲ್ಲಿ ಲೋಪ ಉಂಟಾಗಿದ್ದರಿಂದಲೇ ಬೆಂಕಿ ಕಾಣಿಸಿಕೊಂಡಿರುವುದಾಗಿ ದೂರುದಾರರು ಹೇಳುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ಅದು ಕೈ ಸೇರಿದ ಬಳಿಕ ನಿಖರ ಮಾಹಿತಿ ತಿಳಿಯಲಿದೆ’ ಎಂದರು.

ಪ್ರತಿಕ್ರಿಯಿಸಿ (+)