ಶುಕ್ರವಾರ, ಡಿಸೆಂಬರ್ 13, 2019
27 °C

ಬಡವರ ಆರೋಗ್ಯ ಕಾಪಾಡುವ ಆಶ್ರಯಧಾಮ...

ಸಂಧ್ಯಾರಾಣಿ Updated:

ಅಕ್ಷರ ಗಾತ್ರ : | |

ಬಡವರ ಆರೋಗ್ಯ ಕಾಪಾಡುವ ಆಶ್ರಯಧಾಮ...

ವರೂರು(ಹುಬ್ಬಳ್ಳಿ): ಆರೋಗ್ಯ ಖಲು ಧರ್ಮ ಸಾಧನಂ (ಆರೋಗ್ಯ ಸರಿ ಇಲ್ಲದಿದ್ದರೆ, ಜೀವನ ಸುಗಮ ವಾಗುವುದಿಲ್ಲ) ಜಗತ್ತಿನ ಎಲ್ಲ ಸುಖ ಕ್ಕಿಂತ ಪ್ರಮುಖವಾದದ್ದು ಆರೋಗ್ಯ. ಹೀಗಾಗಿ ಸ್ವಸ್ಥ, ಸುಂದರ ಹಾಗೂ ಸುಖಕರ ಜೀವನಕ್ಕೆ ಆರೋಗ್ಯದಿಂದ ಇರುವುದು ಬಹಳ ಮುಖ್ಯ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡಿರುವ ವರೂರು ನವಗ್ರಹ ತೀರ್ಥವು ಇಷ್ಟು ದಿವಸ ಹೊರಸಂಚಾರದ ಸ್ಥಳ ವಾಗಿತ್ತು. ಆದರೆ ಈಗ ಬಡವರ, ದೀನ ದಲಿತರ ಆರೋಗ್ಯ ಕಾಪಾಡುವ ಆಶ್ರಯ ಧಾಮವಾಗಿದೆ. ಸುತ್ತಲ 67 ಹಳ್ಳಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಜೈನ ಎ.ಜಿ.ಎಂ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆರಂಭವಾಗಿದೆ. ಈ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಭಕ್ತರಿಂದ ಬಂದ ಹಣವನ್ನು ಭಕ್ತರ ಸೇವೆಗಾಗಿ ಇಲ್ಲಿ ವಿನಿಯೋಗಿಸಲಾಗುತ್ತಿದೆ.

ಸ್ವಸ್ಥ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಮಾರ್ಗದರ್ಶಕರಾದ ಶ್ರೀ 108 ಗುಣಧರನಂದಿ ಮಹಾರಾಜರು ‘ಆರೋಗ್ಯಧಾಮ’ ನಿರ್ಮಾಣ ಮಾಡುವ ಯೋಚನೆ ಮಾಡಿದ್ದಾರೆ. ಅದರಂತೆ ಈಗಾಗಲೇ 60 ಹಾಸಿಗೆಯುಳ್ಳ ಆಸ್ಪತ್ರೆ ಕಟ್ಟಡವು ಆರಂಭವಾಗಿದ್ದು, ಬಂದಂತಹ ರೋಗಿಗಳಿಗೆ ಉಚಿತ ಶುಶ್ರೂಷೆ ಮಾಡಲಾಗುತ್ತಿದೆ. ಒಟ್ಟು 5 ಎಕರೆ ವಿಸ್ತೀರ್ಣದ ಈ ಆಸ್ಪತ್ರೆಯಲ್ಲಿ ಒಂದು ಎಕರೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಶುದ್ಧ ಹಾಗೂ ಶಾಂತ ಪರಿಸರದಲ್ಲಿ ರೋಗಿಯ ಆರೈಕೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಇಲ್ಲಿ ಪ್ರಮುಖವಾಗಿ ಸಂಧಿ ನೋವು, ಕೀಲುನೋವು, ದಂತ ತಪಾಸಣೆ, ಕಣ್ಣಿನ ತಪಾಸಣೆ, ಸ್ತ್ರೀಯರಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಜ್ವರ, ನೆಗಡಿಗೆ ಪಂಚಕರ್ಮ ಪದ್ಧತಿ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಉಚಿತ ಚಿಕಿತ್ಸೆಯ ಜೊತೆಗೆ ಉಚಿತ ಔಷಧೋ ಪಚಾರವನ್ನು ಆಸ್ಪತ್ರೆ ಯವರೇ ನೋಡಿಕೊಳ್ಳುತ್ತಾರೆ. 2018 ರ ಡಿಸೆಂಬರ್‌ವರೆಗೂ ಎಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಫೆ. 20 ರ ನಂತರ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ.

ರಕ್ತ ಪರೀಕ್ಷೆ, ಇ.ಸಿ.ಜಿ, ಮೂಲ ವ್ಯಾಧಿ, ಅಪೆಂಡಿಕ್ಸ್, ಹೆರಿಗೆ, ಗರ್ಭ ಕಂಠ, ಹರ್ನಿಯಾ ಹಾಗೂ ಎಲ್ಲ ಬಗೆಯ ಪರೀಕ್ಷೆಗಳನ್ನು ಇಲ್ಲಿ ಉಚಿತವಾಗಿಯೇ ಮಾಡಲಾಗುತ್ತದೆ. ಈ ಆಸ್ಪತ್ರೆಯಲ್ಲಿ 16 ಜನ ವಿಶೇಷ ತಜ್ಞರಿದ್ದು, ಹೊರ ರೋಗಿಗಳ ವಿಭಾಗದಲ್ಲಿ ಎಲ್ಲ ಬಗೆಯ ರೋಗಿಗಳನ್ನು ಪರೀಕ್ಷೆಯನ್ನು ಮಾಡಲಾಗುತ್ತದೆ. ನಂತರ ತಜ್ಞರ ಬಳಿ ತಪಾಸಣೆ ನಡೆಸಿ, ರೋಗಿಗೆ ಕೊಡಬಹುದಾದ ಚಿಕಿತ್ಸೆಯ ಬಗ್ಗೆ ಯೋಚನೆ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಐ.ಸಿ.ಯು ಹಾಗೂ ಆಂಬುಲೆನ್ಸ್ ಸೇವೆಯನ್ನು ಕೂಡ ಮಾಡಲಾಗಿದ್ದು, ತುರ್ತು ಚಿಕಿತ್ಸೆಗೆ ತ್ವರಿತ ಸೇವೆಯನ್ನು ನೀಡಲಾಗುತ್ತದೆ.

ಆಸ್ಪತ್ರೆ ನಿರ್ಮಾಣಕ್ಕಾಗಿ ₹ 2 ಕೋಟಿ ಸಾಲ ಮಾಡಲಾಗಿದೆ. ಭಕ್ತರು ಆಸ್ಪತ್ರೆಗಾಗಿ ನೀಡಿದ ಕಾಣಿಕೆಯನ್ನು ವೈದ್ಯಕೀಯ ಸೇವೆಗಾಗಿ ಮೀಸಲಿಟ್ಟು ಆ ಮೂಲಕ ಜನರಿಂದ ಬಂದಿದ್ದನ್ನು ಜನರಿಗೇ ನೀಡಾಗುತ್ತಿದೆ ಎಂದು ಸಂಸ್ಥೆಯ ಮಾರ್ಗದರ್ಶಕರು ಹೇಳುತ್ತಾರೆ.

ಸ್ವಚ್ಛ ಪರಿಸರ, ಶುದ್ಧ ವಾತಾವರಣ ದಲ್ಲಿ ಒಬ್ಬ ರೋಗಿ ಗುಣಮುಖನಾಗಲು ಸಾಕಷ್ಟು ಸಮಯ ಬೇಕಿಲ್ಲ. ಅಂತಹ ಒಳ್ಳೆಯ ವಾತಾವರಣವನ್ನು ಈ ಸ್ಥಳ ನೀಡುತ್ತದೆ. ಉಚಿತ ವೈದ್ಯಕೀಯ ಸೇವೆಯಿಂದ ಸ್ವಸ್ಥ ಜೀವನದ ಭಾಗ್ಯ ಇಲ್ಲಿಗೆ ಬರುವವರ ಪಾಲಿಗೆ ಸಿಗಲಿದೆ. ಸರ್ವೇಜನಾಃ ಸುಖಿನೋಭವಂತು ಎನ್ನುವ ಕಾಯಕದ

ಮಂತ್ರದಿಂದ ನಿರ್ಮಾಣವಾಗಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಬಡವರ ಪಾಲಿನ ದಾರಿ ದೀಪವಾಗಲಿದೆ ಎನ್ನುತ್ತಾರೆ ಈ ಸಂಸ್ಥೆಯ ಮುಖ್ಯಸ್ಥರು. ಒಟ್ಟಿನಲ್ಲಿ ಹುಬ್ಬಳ್ಳಿ ಮಾತ್ರವಲ್ಲದೇ ಹಾವೇರಿ ಭಾಗದ ಜನರಿಗೂ ‘ಆಶ್ರಯಧಾಮ’ ನಿಜ ಅರ್ಥದಲ್ಲಿ ಆರೋಗ್ಯದ ಆಶಯ ಪೂರೈಸುವಂತಿದೆ.

* * 

ಈ ಆಸ್ಪತ್ರೆಗೆ ಬಂದು ಐದು ದಿನಗಳಾಗಿದ್ದು, ಕಾಲು ಊತದಿಂದ ಬಳಲುತ್ತಿದ್ದೆ. ಆಪರೇಷನ್ ಮಾಡಿದ್ದಾರೆ. ಔಷಧಿಯನ್ನು ಅವರೇ ಉಚಿತವಾಗಿ ನೀಡುತ್ತಿದ್ದಾರೆ

ಫಾತಿಮಾ ಛಬ್ಬಿ ಗ್ರಾಮಸ್ಥೆ

 

ಪ್ರತಿಕ್ರಿಯಿಸಿ (+)