ಬುಧವಾರ, ಡಿಸೆಂಬರ್ 11, 2019
24 °C

ಅಮರವೀ ಪ್ರೇಮ...

Published:
Updated:
ಅಮರವೀ ಪ್ರೇಮ...

ಪ್ರೇಮಾಗ್ನಿಯ ಬೆಳಕು

ಶಾಲೆಯಿಂದಲೂ ಟುರಿಯಾ ಹಾಗೂ ಮೈಕೆಲ್ ಒಳ್ಳೆ ಸ್ನೇಹಿತರು. ಯೌವನಕ್ಕೆ ಕಾಲಿಟ್ಟಾಗ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಯಿತು. ಆಸ್ಟ್ರೇಲಿಯಾದಲ್ಲಿ ರೂಪದರ್ಶಿ, ಕ್ರೀಡಾಪಟು ಕೂಡ ಆಗಿದ್ದ ಟುರಿಯಾ, ಒಮ್ಮೆ ನೂರು ಕಿಲೋ ಮೀಟರ್‌ನ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಕಿಂಬರ್ಲಿಯ ಆ ಕಾಡಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಆವರಿಸಿಕೊಂಡಿತ್ತು. ಅಲ್ಲೇ ಮ್ಯಾರಥಾನ್‌ನಲ್ಲಿದ್ದ ಟುರಿಯಾ ಬೆಂಕಿಯ ಜ್ವಾಲೆಗೆ ಸಿಲುಕಿ ಗುರುತೇ ಸಿಗದಂತೆ ಬೆಂಕಿಯಲ್ಲಿ ನಲುಗಿದ್ದರು.

65% ದೇಹ ಸುಟ್ಟುಹೋಗಿತ್ತು. ಬಲಗೈನ ಬೆರಳುಗಳನ್ನು ಕಳೆದುಕೊಳ್ಳಬೇಕಾಯಿತು. ಐದು ತಿಂಗಳು ಆಸ್ಪತ್ರೆಯಲ್ಲಿ ನರಳಾಟ. ಸತತ 200 ಸರ್ಜರಿಗಳು...

ಇವೆಲ್ಲದರಿಂದ ದೇಹ ಬಿಟ್ಟೂ ಬಿಡದಂತೆ ನರಳುತ್ತಿದ್ದರೂ, ಟುರಿಯಾಗೆ ಧೈರ್ಯ ನೀಡಿದ್ದು ಮೈಕೆಲ್‌ನ ಪಿಸುಮಾತು. ಐಸಿಯುನಲ್ಲೇ ಅವರಿಬ್ಬರ ನಿಶ್ಚಿತಾರ್ಥವೂ ನಡೆಯಿತು. ಸೌಂದರ್ಯ ಇರುವುದು ಮನಸ್ಸಿನಲ್ಲಿ ಅನ್ನುವುದನ್ನು ಈ ಜೋಡಿ ಮತ್ತೆ ಸಾಬೀತು ಮಾಡಿತು.

*ಗಟ್ಟಿಗೊಂಡಿತು ಪ್ರೀತಿ

ಉದಯಪುರದ ಕಲ್ಮೇಶ್ ವೈಷ್ಣವ್‌ಗೆ ಬಾಲ್ಯದೊಂದಿಗೆ ಪೋಲಿಯೊ ಕೂಡ ಜೊತೆಯಾಗಿತ್ತು. 11ನೇ ವಯಸ್ಸಿಗೆ ವೀಲ್‌ಚೇರ್ ಸಂಗಾತಿಯಾಯಿತು. ನಂತರ ಬದುಕಿಗೆ ಜೊತೆಯಾಗಿದ್ದು ಗೀತಾ. ಸದಾ ಫತೇಹ್ ಸಾಗರದ ಸೌಂದರ್ಯ ಸವಿಯುತ್ತಾ ಕುಳಿತುಕೊಳ್ಳುವ ಈ ಜೋಡಿಗೆ ಇದು ನೂರಾರು ನೆನಪುಗಳನ್ನು ಮೊಗೆದುಕೊಡುವ ಜಾಗ.

ಇವರ ಮೊದಲ ಭೇಟಿಯಾಗಿದ್ದು ಆಸ್ಪತ್ರೆಯೊಂದರಲ್ಲಿ. ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು ವೈಷ್ಣವ್. ಅಲ್ಲಿಗೇ ಗೀತಾ ಕೂಡ ಪೋಲಿಯೊ ಸಮಸ್ಯೆ ಹೊತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಣ್ಣ ನೋಟಗಳಿಗಿಂತ ಇವರನ್ನು ಸೆಳೆದಿದ್ದು ನೋವು. ಸಮಾನ ದುಃಖ ಇಬ್ಬರನ್ನೂ ಒಂದಾಗಿಸಿತ್ತು. ಬದುಕಿನ ನೋವು ನಲಿವುಗಳು ಇವರ ಪ್ರೀತಿಯನ್ನು ಗಟ್ಟಿಗೊಳಿಸಿತ್ತು.

‌ಸಹಜವಾಗಿ ಇವರ ಪ್ರೀತಿಗೂ ವಿರೋಧವೇ ಎದುರಾಯಿತು. ಆದರೂ ಎಲ್ಲವನ್ನೂ ಮೆಟ್ಟಿ ನಿಲ್ಲುವ ಧೈರ್ಯವನ್ನು ಪ್ರೀತಿ ನೀಡಿತ್ತು. ಇಬ್ಬರೂ ಮದುವೆಯಾದರು. ಕೆಲ ಸಮಯದ ನಂತರ ಮನೆಯವರೂ ಹತ್ತಿರವಾದರು. ‘ಆಸ್ಪತ್ರೆಯ ಯೂನಿಫಾರಂನಲ್ಲೂ ಗೀತಾ ಸುಂದರವಾಗಿ ಕಾಣುತ್ತಿದ್ದಳು’ ಎಂದು ತಮ್ಮ ಪ್ರೇಮದ ಮೊದಲ ನೋಟವನ್ನು ನೆನೆಸಿಕೊಳ್ಳುತ್ತಾರೆ ವೈಷ್ಣವ್. ಪ್ರೇಮಕ್ಕೆ ಇದಕ್ಕಿಂತ ವ್ಯಾಖ್ಯಾನ ಬೇಕೇ ಎಂದೂ ಮೌನದಲ್ಲೇ ಪ್ರಶ್ನಿಸುತ್ತಾರೆ.

*ಪತ್ನಿಗಾಗಿ ಪ್ರತಿಕೃತಿ ಕಟ್ಟಿದ

ಪ್ರೀತಿಯ ವಿಷಯ ಬಂದಾಕ್ಷಣ ಶಹಜಹಾನ್ ಕಟ್ಟಿದ ತಾಜ್‌ ಮಹಲ್ ಅನ್ನು ನೆನಪಿಸಿಕೊಳ್ಳದವರೇ ಇಲ್ಲವೇನೋ? ಪ್ರೀತಿಯ ದೃಷ್ಟಾಂತವಾಗಿ ಇಂದಿಗೂ ಎಂದೆಂದಿಗೂ ಉಳಿದು ಹೋದ ತಾಜ್‌ಮಹಲ್ ಅನ್ನು ಕೇವಲ ಶಹಜಹಾನ್ ಅಲ್ಲ, ನಾನೂ ಕಟ್ಟಬಲ್ಲೆ ಎಂದವರು 72 ವಯಸ್ಸಿನ ಫೈಜಲ್ ಹೂಸನ್.

ಉತ್ತರ ಪ್ರದೇಶದ ನಿವೃತ್ತ ಪೋಸ್ಟ್ ಮಾಸ್ಟರ್ ಫೈಜಲ್ ತನ್ನ ಹೆಂಡತಿ ತಾಜ್‌ಅಮ್ಮುಲಿ ನೆನಪಿಗಾಗಿ ಈ ತಾಜ್ ಮಹಲ್ ಹೋಲುವ ಪ್ರತಿಕೃತಿಯನ್ನು ನಿರ್ಮಿಸಿದ್ದು.

ಫೈಜಲ್–ತಾಜ್‌ಅಮ್ಮುಲಿ ಮದುವೆಯಾಗಿ 58 ವರ್ಷಗಳ ಕಾಲ ದಾಂಪತ್ಯ ನಡೆಸಿದವರು. ಕ್ಯಾನ್ಸರ್‌ನಿಂದ ಸಾವಿನ ಮನೆಗ ಹೊರಟ ತನ್ನ ಹೆಂಡತಿಯ ನೆನಪಿಗೆ ಈ ಭೂಮಿಯಲ್ಲಿ ಏನಾದರೂ ಉಳಿಸಲೇಬೇಕು ಎಂದು ತೀರ್ಮಾನಿಸಿದ್ದು ಫೈಜಲ್.

ಹೆಂಡತಿ ಸತ್ತ ನಂತರ ತನ್ನ ಎಲ್ಲಾ ಉಳಿತಾಯವನ್ನೂ ತಾಜ್‌ಮಹಲ್ ಪ್ರತಿಕೃತಿ ಕಟ್ಟಲೆಂದೇ ಕೂಡಿಟ್ಟರು. 14 ಲಕ್ಷದವರೆಗೂ ಇದಕ್ಕೆ ಖರ್ಚಾಗಿದೆ.

‘ಕೆಲಸ ಇನ್ನೂ ಬಾಕಿಯಿದೆ. ನೆನಪುಗಳೂ ಅಷ್ಟೇ. ಪ್ರೇಮವೂ ಮಿಕ್ಕಿ ಮೀರಲೇಬೇಕು’ ಎಂದಿದ್ದಾರೆ ಫೈಜಲ್.

*ಸ್ವೀಡನ್‌ಗೆ ಸೈಕಲ್‌ ಯಾನ

1975. ಭಾರತಕ್ಕೆ ಭೇಟಿ ನೀಡಿದ್ದ ಶ್ಶಾರೊಲೆ ವೊನ್, ಕಲಾವಿದನಿಗೆ ತನ್ನನ್ನೇ ಸವಾಲಾಗಿ ನೀಡಿದ್ದಳು. ತನ್ನ ಮುಖವನ್ನು ಚಾಚೂ ತಪ್ಪದೇ ಕುಂಚದಲ್ಲಿ ಮೂಡಿಸಿದ ದೆಹಲಿಯ ಪ್ರದ್ಯುಮ್ನ ಕುಮಾರ್ ಅವರ ಮೋಡಿಗೆ ಆಕೆಯ ಮನಸ್ಸು ಮಿಡಿಯಿತು.

ಮೊದಲ ನೋಟದಲ್ಲೇ ಪ್ರೀತಿ ಅಂಕುರಿಸಿತ್ತು. ಮದುವೆಯೂ ನಡೆಯಿತು. ಆದರೆ ಶ್ಶಾರೊಲೆ ಸ್ವೀಡನ್‌ಗೆ ಹೋಗುವ ಸಮಯ ಬಂದೇ ಬಿಟ್ಟಿತ್ತು. ತನ್ನ ಕಲಾ ಶಿಕ್ಷಣದ ಕೊನೇ ವರ್ಷವನ್ನು ಇನ್ನೂ ಪೂರೈಸಬೇಕಿರುವುದು ಪ್ರದ್ಯುಮ್ನ ಸ್ವೀಡನ್‌ಗೆ ಹೋಗುವುದನ್ನು ತಡೆದಿತ್ತು.

ಪ್ರದ್ಯುಮ್ನ, ಸ್ವೀಡನ್‌ಗೆ ಬಂದೇ ಬರುವುದಾಗಿ ಭಾಷೆ ಇತ್ತರು. ಅಧ್ಯಯನ ಮುಗಿಯಿತು. ಆದರೆ ಸ್ವೀಡನ್‌? ಎಷ್ಟೇ ಪ್ರಯತ್ನ ಪಟ್ಟರೂ ಅಲ್ಲಿಗೆ ಹೋಗಲು ದುಡ್ಡು ಕೈ ಸೇರಲಿಲ್ಲ. ಪದೇ ಪದೇ ಇತ್ತ ಭಾಷೆಯೇ ನೆನಪಾಗುತ್ತಿತ್ತು.

ಪ್ರೀತಿಗಿತ್ತ ಭಾಷೆಯನ್ನು ಉಳಿಸಿಕೊಳ್ಳಲು ಒಂದು ತೀರ್ಮಾನ ಕೈಗೊಂಡರು ಅವರು. ಸೈಕಲ್ ಏರಿ ಹೊರಡಲು ಸಿದ್ಧವಾಗೇಬಿಟ್ಟರು. ಸತತ ಐದು ತಿಂಗಳಲ್ಲಿ ಸ್ವೀಡನ್ ತಲುಪಿಯಾಗಿತ್ತು. ಮದುವೆಯ ಸಾಕ್ಷಿ ತೋರಿದ ನಂತರ ಬಾರ್ಡರ್ ಸೆಕ್ಯುರಿಟಿ ಸಿಬ್ಬಂದಿ ಇವರನ್ನು ಒಳಬಿಟ್ಟರು. ಗಡಿಮೀರಿದ ಪ್ರೀತಿಗೆ ಬೆರಗಾದರು.

*60 ವರ್ಷದ ನಂತರ ಒಂದಾದರು

ಅನ್ನಾ ಮತ್ತು ಬೋರಿಸ್ ರಷ್ಯಾದವರು. ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾದರು. ಆದರೆ ಜೊತೆಗಿರುವ ಭಾಗ್ಯ ಒದಗಿದ್ದು ಮೂರೇ ದಿನ. ಬೋರಿಸ್, ರೆಡ್ ಆರ್ಮಿ ಯುನಿಟ್‌ಗೆ ಸೇರಿಕೊಳ್ಳಬೇಕಾಯಿತು. ಅನ್ನಾ ಮತ್ತು ಆಕೆಯ ಕುಟುಂಬ ಗಡಿಪಾರು ಆಗುವ ಸಂದರ್ಭ ಬಂತು.

ಆಗಲೇ ಅವರ ನಡುವಿನ ಎಲ್ಲಾ ಸಂಪರ್ಕವೂ ಕಡಿದುಹೋಯಿತು. ದಿನಗಳು ಉರುಳಿದವು, ತಿಂಗಳುಗಳು ಕಳೆದವು, ವರ್ಷಗಳು ಜಾರಿ ಹೋದವು. ಮತ್ತೆ ಒಬ್ಬರನ್ನೊಬ್ಬರು ನೋಡಲು ಸಾಧ್ಯವಾಗಲೇ ಇಲ್ಲ. ಇಬ್ಬರಲ್ಲೂ ಹುಡುಕುವ ಪ್ರಯತ್ನ ನಡೆದರೂ ಒಬ್ಬರಿಗೊಬ್ಬರು ನೋಡಲೇ ಇಲ್ಲ. ಇಬ್ಬರಿಗೂ ಆತ್ಮಹತ್ಯೆಗೆ ಶರಣಾಗುವ ಆಲೋಚನೆಯೂ ಬಂತು.

ಆದರೆ ಒಂದಲ್ಲಾ ಒಂದು ದಿನ ಇಬ್ಬರೂ ಸಿಕ್ಕೇ ಸಿಗುತ್ತೇವೆ ಎಂಬ ಭರವಸೆ ಅವರನ್ನು ತಡೆದು ನಿಲ್ಲಿಸಿತ್ತು. ಆ ದಿನ ಹತ್ತಿರವೂ ಬಂತು.

ಹೀಗೇ ಒಂದು ದಿನ ಅನ್ನಾ, ಸೈಬೀರಿಯಾದಲ್ಲಿ ರಸ್ತೆಯಲ್ಲಿ ಕಾರು ಇಳಿದು ಹೋಗುತ್ತಿದ್ದವನ ಮುಖ ನೋಡಿಯೇ ದಂಗಾದರು. ಸಂತೋಷಕ್ಕೆ ಕಣ್ಣು ತುಂಬಿಬಂದಿತ್ತು. ಹೃದಯ ಕುಣಿಯಲು ಆರಂಭಿಸಿತ್ತು. ಆಗ ಬದಲಾಗಿದ್ದದ್ದು ವಯಸ್ಸು ಮಾತ್ರ.

60 ವರ್ಷಗಳ ನಂತರ ಆ ಜೋಡಿ ಮತ್ತೆ ಒಂದಾಗಿತ್ತು.

ಪ್ರತಿಕ್ರಿಯಿಸಿ (+)