ಶುಕ್ರವಾರ, 29 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಿಕಿ 2

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಉತ್ಕಟವಾದ ಪ್ರೇಮ ಮತ್ತು ಅಷ್ಟೇ ತೀವ್ರವಾದ ನೋವು– ಈ ಎರಡು ಅಂಶಗಳನ್ನು ಇಟ್ಟುಕೊಂಡು ರೂಪಿಸಿದ ಒಳ್ಳೆಯ ಸಿನಿಮಾಗಳನ್ನು ಯಾವ ಕಾಲಕ್ಕೂ ಜನರು ಗೆಲ್ಲಿಸಿದ್ದಾರೆ. ‘ಆಶಿಕಿ 2’ ಕೂಡ ಅಂಥದ್ದೇ ಗೆಲುವನ್ನು ಕಂಡ ಸಿನಿಮಾ. 1990ರಲ್ಲಿಯೇ ‘ಆಶಿಕಿ’ ಎಂಬ ಹೆಸರಿನಲ್ಲಿ ಬಂದ ಸಿನಿಮಾ ಕೂಡ ದೊಡ್ಡ ಯಶಸ್ಸು ಕಂಡಿತ್ತು.

ಮೋಹಿತ್‌ ಸೂರಿ ನಿರ್ದೇಶನದ ‘ಆಶಿಕಿ 2’ ಚಿತ್ರ ಬಿಡುಗಡೆಯಾಗಿದ್ದು 2013ರಲ್ಲಿ. ಆದಿತ್ಯ ರಾಯ್‌ ಕಪೂರ್‌ ಮತ್ತು ಶ್ರದ್ಧಾ ಕಪೂರ್‌ ಜೋಡಿ ಆಗ ಸಾಕಷ್ಟು ಸದ್ದು ಮಾಡಿತ್ತು. ದೊಡ್ಡ ಮಟ್ಟದ ವ್ಯಾಪಾರಿ ಯಶಸ್ಸೂ ಈ ಚಿತ್ರಕ್ಕೆ ದೊರೆಯಿತು. ಈಗಲೂ ‘ಸುನ್‌ ರಹಾ ಹೈ ನ ತೂ..’ ಮತ್ತು ‘ತುಮ್‌ ಹಿ ಹೋ’ ಹಾಡುಗಳು ಸಿನಿಪ್ರಿಯರ ಅನುಗಾಲದ ನೆಚ್ಚಿನ ಹಾಡಾಗಿ ಉಳಿದುಕೊಂಡಿದೆ.

ಜನಪ್ರಿಯ ಗಾಯಕನೊಬ್ಬನ ವೈಯಕ್ತಿಕ ಬದುಕಿನ ವೈರುಧ್ಯಗಳನ್ನು ತೀವ್ರವಾಗಿ ಹಿಡಿದಿಡುವ ಈ ಸಿನಿಮಾ, ಸಂಗೀತಾತ್ಮಕ ನಿರೂಪಣಾ ಗುಣದಿಂದಲೂ ಮನಸೆಳೆಯುತ್ತದೆ.

ರಾಹುಲ್‌ ಜೈಯ್ಕರ್‌ ಅತ್ಯಂತ ಜನಪ್ರಿಯ ಗಾಯಕ. ಅವನ ಧ್ವನಿ ಕೇಳಿದರೆ ಹದಿಹರೆಯದವರು ಹುಚ್ಚೆದ್ದು ಕುಣಿಯುತ್ತಾರೆ. ಎಲ್ಲರ ಎದೆಯಾಳದ ನೋವನ್ನು ಬಸಿದು ಧ್ವನಿಯಾಗಿ ಉಣಿಸುತ್ತಿರುವನೇನೋ ಎನ್ನುವಂಥ ಅವನ ಹಾಡಿಗೆ ಆರೋಹಿ ಕೂಡ ಅಭಿಮಾನಿಯೇ. ಆರೋಹಿಗೆ ಜನಪ್ರಿಯ ಗಾಯಕಿಯಾಗಬೇಕು ಎಂಬ ಹಂಬಲ. ಸಂಗೀತಜ್ಞಾನ, ಮನಸೆಳೆಯುವ ಧ್ವನಿ ಎಲ್ಲ ಇದ್ದೂ ಅವಳು ಅವಕಾಶ ವಂಚಿತೆ. ಎಷ್ಟೇ ಒಳ್ಳೆಯ ಹಾಡುಗಾರನಾದರೂ ರಾಹುಲ್‌, ಮನಸ್ಸು ವಿಕ್ಷಿಪ್ತ. ಸದಾ ಮದ್ಯದ ಅಮಲಿನಲ್ಲಿಯೇ ಮನಸ್ಸಿನ ಗೊಂದಲಗಳನ್ನು, ನೋವುಗಳನ್ನು ಮೀರಲು ಯತ್ನಿಸುತ್ತಿರುತ್ತಾನೆ. ಜನಪ್ರಿಯತೆ ಅವನಿಗೆ ಪಾಶದಂತೆ ಕಂಡು ಸದಾ ಅದರಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸುತ್ತಿರುತ್ತಾನೆ.

ಬಾರ್‌ ಒಂದರ ಹೊರಗೆ ಆಕಸ್ಮಿಕವಾಗಿ ರಾಹುಲ್‌ ಮತ್ತು ಆರೋಹಿ ಭೇಟಿಯಾಗುತ್ತಾರೆ. ರಾಹುಲ್‌ ಅವಳನ್ನು ಕರೆದುಕೊಂಡು ಹೋಗಿ ಅವಕಾಶ ಕೊಡಿಸುತ್ತಾನೆ. ನಿಧಾನವಾಗಿ ಅವಳ ವೃತ್ತಿಜೀವನದ ಏಳಿಗೆ ಶುರುವಾಗುತ್ತಿರುವಂತೆಯೇ ರಾಹುಲ್‌ ತನ್ನ ವಿಕ್ಷಿಪ್ತ ನಡವಳಿಕೆಯಿಂದಲೇ ವೃತ್ತಿಯಲ್ಲಿ ಕುಸಿಯಲಾರಂಭಿಸುತ್ತಾನೆ. ಅವನ ಜನಪ್ರಿಯತೆಯ ಜಾಗವನ್ನು ಆರೋಹಿ ಆವರಿಸಿಕೊಳ್ಳುತ್ತಾಳೆ.

ಪ್ರೇಮ, ವಿರಹ, ನೋವು, ವಿಷಾದ, ಗೊಂದಲ, ವೈಷಮ್ಯ, ಮಹತ್ವಾಕಾಂಕ್ಷೆ ಎಲ್ಲವನ್ನೂ ಎರಡು ಪಾತ್ರಗಳಲ್ಲಿ ತೀವ್ರವಾಗಿಯೇ ಹೆಣೆದು ಸಿನಿಮಾ ಕಟ್ಟಿದ್ದಾರೆ ಮೋಹಿತ್‌ ಸೂರಿ. ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಛಿದ್ರ ಚಹರೆಗಳಿಗೆ ರೂಪು ಕೊಡುವ ಪ್ರಯತ್ನವನ್ನು ಸೂಕ್ಷ್ಮವಾದ ಕುಸುರಿಯ ಮೂಲಕವೇ ಮಾಡಿದ್ದಾರೆ ನಿರ್ದೇಶಕರು. ಶ್ರದ್ಧಾ ಕಂಗಳು, ಆದಿತ್ಯ ರಾಯ್‌ ಮುಖದ ಮುಗ್ಧತೆ ಮತ್ತು ಅರಿಜಿತ್‌ ಸಿಂಗ್‌ ಕಂಠ ಈ ಮೂರೇ ಅಂಶಗಳು ಸಾಕು ಈ ಸಿನಿಮಾವನ್ನು ಇಷ್ಟಪಡಲು.

https://goo.gl/VShDnK ಈ ಕೊಂಡಿ ಬಳಸಿ ‘ಆಶಿಕಿ 2’ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT