ಗುರುವಾರ , ಜೂನ್ 4, 2020
27 °C

ವಿ–ಕ್ರಾಸ್‌ಗೆ ಇನ್ನಷ್ಟು ಶಕ್ತಿ ತುಂಬಿದ ಇಸುಜು

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ವಿ–ಕ್ರಾಸ್‌ಗೆ ಇನ್ನಷ್ಟು ಶಕ್ತಿ ತುಂಬಿದ ಇಸುಜು

ಭಾರತದಲ್ಲಿ ಲೈಫ್‌ಸ್ಟೈಲ್‌ ಪಿಕ್‌ಅಪ್‌ಗಳಿಗೆ ಮಾರುಕಟ್ಟೆ ಹೇಳಿಕೊಳ್ಳುವ ಮಟ್ಟದ್ದೇನಲ್ಲ. ಭಾರತದ್ದೇ ಕಂಪನಿಗಳಾದ ಟಾಟಾ ಮೋಟರ್ಸ್ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ, ತಮ್ಮ ಲೈಫ್‌ಸ್ಟೈಲ್ ಪಿಕ್‌ಅಪ್‌ಗಳನ್ನು ಜನಪ್ರಿಯಗೊಳಿಸಲು ದಶಕಗಳ ಕಾಲ ಪ್ರಯತ್ನ ನಡೆಸಿವೆ.

ಟಾಟಾದವರ ಕ್ಸೆನಾನ್ 2008ರಲ್ಲೇ ನಮ್ಮ ಮಾರುಕಟ್ಟೆಗೆ ಬಂದರೂ ಹೆಚ್ಚು ಜನಪ್ರಿಯತೆ ಗಳಿಸಲಿಲ್ಲ. ಅಂತೆಯೇ ಮಹೀಂದ್ರಾದವರ ಸ್ಕಾರ್ಪಿಯೊ ಗೆಟ್‌ಅವೇ ಪಿಕ್ಅಪ್‌ ಸಹ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ಸೆಳೆಯಲಿಲ್ಲ. ಹಾಗೆಂದು ಇವೆರಡೂ ಕೆಟ್ಟ ಉತ್ಪನ್ನಗಳಲ್ಲ. ಕ್ಸೆನಾನ್ ಈಗಲೂ ಥಾಯ್ಲೆಂಡ್‌ನಲ್ಲಿ ಜನಪ್ರಿಯ ಪಿಕ್‌ಅಪ್ ಎನಿಸಿದೆ.

ಆದರೆ ಜಪಾನ್‌ ಇಸುಜು ಭಾರತದಲ್ಲಿ ವಿ-ಕ್ರಾಸ್ ಪಿಕ್‌ಅಪ್ ಅನ್ನು 2016ರಲ್ಲಿ ಪರಿಚಯಿಸಿತು. ಆದರೆ ನಿರೀಕ್ಷೆಗೂ ಮೀರಿ ವಿ-ಕ್ರಾಸ್ ಜನಪ್ರಿಯತೆಯನ್ನು ಗಳಿಸಿದೆ. ತೀರಾ ಚಿಕ್ಕದಾದ ಡೀಲರ್‌ ಮತ್ತು ಸರ್ವೀಸ್‌ ನೆಟ್‌ವರ್ಕ್‌ ಇದ್ದಾಗ್ಯೂ ಜನರು ವಿ-ಕ್ರಾಸ್ ಅನ್ನು ಕೊಳ್ಳುತ್ತಿದ್ದಾರೆ. ಹತ್ತಿರದ ಪ್ರತಿಸ್ಪರ್ಧಿ ಕ್ಸೆನಾನ್‌ಗಿಂತಲೂ ಕಡಿಮೆ ಸಾಮರ್ಥ್ಯದ ಎಂಜಿನ್ ಇದ್ದರೂ ವಿ-ಕ್ರಾಸ್ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಕಳೆದ ತಿಂಗಳಷ್ಟೇ ವಿ-ಕ್ರಾಸ್‌ನ ಹೊಸ ಅವತರಣಿಕೆಯನ್ನು ಇಸುಜು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಫೇಸ್‌ಲಿಫ್ಟ್ ವಿ-ಕ್ರಾಸ್. ಫೇಸ್‌ಲಿಫ್ಟ್‌ ಕೇವಲ ಅಲಂಕಾರಿಕ ಅಂಶಗಳಿಗಷ್ಟೇ ಸೀಮಿತವಾಗಿಲ್ಲ ಎಂಬುದು ಇಸುಜು ಭಾರತೀಯ ಪಿಕ್ಅಪ್‌ ಪ್ರಿಯರ ನಾಡಿಯನ್ನು ಅರ್ಥಮಾಡಿಕೊಂಡಿರುವುದರ ಸೂಚಿ.

ಜಪಾನ್ ಮತ್ತು ಥಾಯ್ಲೆಂಡ್‌ನಲ್ಲಿ ಮಾರಾಟವಾಗುವ ವಿ-ಕ್ರಾಸ್‌ನಲ್ಲಿರುವ ಅನೇಕ ಮೆಕ್ಯಾನಿಕಲ್ ಸವಲತ್ತುಗಳು ಭಾರತೀಯ ಅವತರಣಿಕೆಯಲ್ಲಿ ಇಲ್ಲ. ಅದರಲ್ಲಿ ಮುಖ್ಯವಾದುದು ಹಿಂಬದಿಯ ಡಿಫರೆನ್ಷಿಯಲ್ ಲಾಕ್‌ಗಳು. ಕಚ್ಚಾ ರಸ್ತೆಯ (ಆಫ್‌ ರೋಡಿಂಗ್) ಚಾಲನೆಯಲ್ಲಿ ಇದು ಹೆಚ್ಚು ಉಪಯೋಗಕ್ಕೆ ಬರುತ್ತದೆ. ಡಿಫರೆನ್ಷಿಯಲ್ ಲಾಕ್‌ ಸಂಪೂರ್ಣ ಚಾಲಕನ ನಿಯಂತ್ರಣದಲ್ಲಿರುತ್ತದೆ. ಭಾರತೀಯ ಅವತರಣಿಕೆಯಲ್ಲಿ ಇದು ಇಲ್ಲದೇ ಇದ್ದದ್ದು ದೊಡ್ಡ ಕೊರತೆಯಾಗಿತ್ತು. ಆದರೆ ಹೊಸ ಅವತರಣಿಕೆಯಲ್ಲಿ ಇದರ ಬದಲಿಗೆ ಟ್ರಾಕ್ಷನ್ ಕಂಟ್ರೋಲ್ ನೀಡಲಾಗಿದೆ.

ಟ್ರಾಕ್ಷನ್‌ ಕಂಟ್ರೋಲ್ ಸವಲತ್ತು ಡಿಫರೆನ್ಷಿಯಲ್ ಲಾಕ್‌ಗೆ ಸರಿಸಮ ಅಲ್ಲದಿದ್ದರೂ, ಅದು ಬಹುಪಯೋಗಿ. ಹೆದ್ದಾರಿಯ ವೇಗದ ಚಾಲನೆಯಲ್ಲೂ ಟ್ರಾಕ್ಷನ್ ಕಂಟ್ರೋಲ್ ಅನುಕೂಲಕ್ಕೆ ಬರುತ್ತದೆ. ಮಳೆ-ನೀರು, ಮರಳು ತುಂಬಿದ ರಸ್ತೆಗಳಲ್ಲಿ ವಿ-ಕ್ರಾಸ್ ಅತ್ತಿತ್ತ ಸರಿದಾಡದಂತೆ ಈ ಸವಲತ್ತು ನೆರವಾಗುತ್ತದೆ. ಹೀಗಾಗಿ ಇದೊಂದು ಉತ್ತಮ ಫೇಸ್‌ಲಿಫ್ಟ್.

ಇನ್ನು ಹೊಸ ಅವತರಣಿಕೆಯಲ್ಲಿ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಸಹ ನೀಡಲಾಗಿದೆ. ವಿ-ಕ್ರಾಸ್‌ನಂತಹ ದೊಡ್ಡ ವಾಹನಕ್ಕೆ ಇರಲೇಬೇಕಾದಂತಹ ಸವಲತ್ತು ಇದು. ತಿರುವುಗಳಲ್ಲಿ ವೇಗದ ಚಾಲನೆಯಲ್ಲಿದ್ದಾಗಲೂ ವಾಹನ ಒಂದೆಡೆಗೇ ಜಾರದಂತೆ ಮತ್ತು ಸರಿಯದಂತೆ ಇದು ತಡೆಯುತ್ತದೆ. ತುರ್ತು ಸಂದರ್ಭದಲ್ಲಿ ದಿಢೀರ್ ಎಂದು ಚಲನೆಯ ದಿಕ್ಕು ಬದಲಿಸಿದಾಗಲೂ ವಾಹನದ ಮೇಲೆ ಚಾಲಕ ನಿಯಂತ್ರಣ ಕಳೆದುಕೊಳ್ಳದಂತೆ ಇದು ಎಚ್ಚರಿಕೆ ವಹಿಸುತ್ತದೆ. ಇದರ ಜತೆಯಲ್ಲೇ ಕ್ರೂಸ್ ಕಂಟ್ರೋಲ್‌ ಅನ್ನೂ ಹೊಸ ಅವತರಣಿಕೆ ಹೊಂದಿದೆ. ಇದು ಹೆದ್ದಾರಿ ಚಾಲನೆಯನ್ನು ಸುಲಭವಾಗಿಸುತ್ತದೆ. ಈ ಮೂರೂ ಸವಲತ್ತುಗಳು ವಿ-ಕ್ರಾಸ್‌ನ ಶಕ್ತಿಯನ್ನು ಹೆಚ್ಚಿಸಿದೆ.

ಇವುಗಳ ಜತೆಯಲ್ಲೇ ಕೆಲವು ಆಲಂಕಾರಿಕ ಎಲಿಮೆಂಟ್‌ಗಳನ್ನೂ ಬದಲಿಸಲಾಗಿದೆ. ಮುಂಬದಿಯಲ್ಲಿ ಫಾಗ್‌ಲ್ಯಾಂಪ್‌ಗಳ ಬದಲಿಗೆ ಡೇಟೈಂ ರನ್ನಿಂಗ್ ಲೈಟ್ ನೀಡಲಾಗಿದೆ. ಸೈಡ್‌ಸ್ಟೆಪ್‌ಗಳ ವಿನ್ಯಾಸ ಬದಲಿಸಲಾಗಿದೆ. ಹಿಂಬದಿಯ ಕಪ್ಪು ಬಣ್ಣದ ಬಂಪರ್‌ಗೆ ಕ್ರೋಮ್‌ ಲೇಪನ ನೀಡಲಾಗಿದೆ. ರಿವರ್ಸ್ ಕ್ಯಾಮೆರಾ, ಹೊಸ ಮ್ಯೂಸಿಕ್ ಸಿಸ್ಟಂ ಮತ್ತು ಕಪ್ಪು ಬಣ್ಣದ ಲೆದರ್ ಸೀಟ್‌ಗಳು ಈ ಅವತರಣಿಕೆಯ ಇತರ ಹೊಸತುಗಳು. ಈ ಅವತರಣಿಕೆಗೆ ಇಸುಜು ವಿ-ಕ್ರಾಸ್ ಹೈ ಎಂದು ಹೆಸರಿಟ್ಟಿದೆ.

ಇವುಗಳ ಜತೆಯಲ್ಲೇ ವಿ-ಕ್ರಾಸ್‌ಗೆ ದೊಡ್ಡ ಎಂಜಿನ್ ಇರಬೇಕಿತ್ತು ಎಂಬ ಪಿಕ್‌ಪ್ರಿಯರ ನಿರೀಕ್ಷೆಯನ್ನು ಇಸುಜು ಈ ಬಾರಿ ಹುಸಿಗೊಳಿಸಿದೆ. ಅಪಾರ ಶಕ್ತಿಯ ದೊಡ್ಡ ಎಂಜಿನ್ ದೊರೆತರೆ ವಿ-ಕ್ರಾಸ್, ಭಾರತದಲ್ಲಿ ಪ್ರತಿಸ್ಪರ್ಧಿಯೇ ಇಲ್ಲದ ಪಿಕ್‌ಅಪ್ ಎನಿಸಿಕೊಳ್ಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.