ಶುಕ್ರವಾರ, ಡಿಸೆಂಬರ್ 13, 2019
27 °C

ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

ಸಂದೀಪ್‌ ಕೆ. ಎಂ. Updated:

ಅಕ್ಷರ ಗಾತ್ರ : | |

ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

ಬಹುತೇಕ ಮಧುಮೇಹಿಗಳಿಗೆ ಗ್ಲೂಕೋಸ್ ಅಂಶ ನಿಯಂತ್ರಣಕ್ಕೆ ಬರದೇ ಆರೋಗ್ಯದಲ್ಲಿ ಸದಾ ತೊಂದರೆಯಾಗುವ ಸಂದರ್ಭಗಳೇ ಹೆಚ್ಚಿರುತ್ತದೆ.

ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದಕ್ಕಾಗಿ, ಇನ್ಸುಲಿನ್ ಚುಚ್ಚು ಮದ್ದು ಬಳಸುವುದು ಅನಿವಾರ್ಯವಾಗಿರುತ್ತದೆ.

ಸಕ್ಕರೆ ಅಂಶವನ್ನು ಮಾಪನ ಮಾಡಲು ದೇಹದಿಂದ ರಕ್ತವನ್ನು ಹೊರ ತೆಗೆದು ಪರೀಕ್ಷಿಸಿಕೊಳ್ಳುವ ಸಂಪ್ರದಾಯ ಈಗ ಸಾಮಾನ್ಯವಾಗಿಬಿಟ್ಟಿದೆ.

ಆದರೆ ಸೂಜಿರಹಿತವಾಗಿ ಸಕ್ಕರೆ ಅಂಶವನ್ನು ಪತ್ತೆ ಮಾಡಬೇಕೆಂದು ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಲೇ ಇದ್ದಾರೆ.

ಅದರ ಫಲವಾಗಿ ಚರ್ಮಕ್ಕೆ ಪ್ಯಾಚ್ ಮಾಡುವ ಮೂಲಕ ರಕ್ತದ ಕಣಗಳೊಂದಿಗೆ ಸಂಪರ್ಕ ಸಾಧಿಸಿ ಗ್ಲೂಕೋಸ್ ಅಂಶವನ್ನು ನಿಯಂತ್ರಣದಲ್ಲಿಡುವ ಪ್ರಕ್ರಿಯೆ ಕಂಡುಕೊಂಡಿದ್ದರೂ ಅದು ಅಷ್ಟರ ಮಟ್ಟಿಗೆ ಯಶಸ್ವಿಯಾಗಿರಲಿಲ್ಲ.

ಆದರೆ ಕೊರಿಯಾ ದೇಶದ ವಿಜ್ಞಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣೀರನ್ನು ಬಳಸಿ ಗ್ಲೂಕೋಸ್ ಅಂಶ ಪತ್ತೆ ಮಾಡುವುದಲ್ಲದೇ, ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವಿನೂತ ಸಾಧನವನ್ನು ಆವಿಷ್ಕರಿಸಿದ್ದಾರೆ.

ಕೊರಿಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ವಿಜ್ಞಾನಿ ಜಂಗ್ ಉಂಗ್ ಪಾರ್ಕ್, ಕಣ್ಣಿನ ಪಾಪೆ ಮೇಲೆ ಅಳವಡಿಸಬಹುದಾದ ಸೂಕ್ಷ್ಮ ಸಾಧನವನ್ನು ಕಂಡು ಹಿಡಿದು ಅದರ ಮೂಲಕ ಗ್ಲೂಕೋಸ್ ಅಂಶವನ್ನು ಮಾಪನ ಮಾಡುವ ಸಾಧ್ಯತೆಯನ್ನು ಪರಿಚಯಿಸಿದ್ದಾರೆ. ಯಾವುದೇ ಮಾದರಿಯ ಸೂಜಿಯನ್ನು ಬಳಸದೇ ಹಾಗೂ ದೇಹದಿಂದ ಒಂದು ತೊಟ್ಟು ರಕ್ತವನ್ನು ತೆಗೆಯದೇ ಗ್ಲೂಕೋಸ್ ಮಟ್ಟವನ್ನು ಅಳೆಯುವ ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್ ವಿನ್ಯಾಸಗೊಳಿಸಿದ್ದಾರೆ.

ಈ ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್ ಅನ್ನು ನೇರವಾಗಿ ಕಣ್ಣಿನ ಪಾಪೆ ಭಾಗದಲ್ಲಿ ಜೋಡಿಸಬಹುದಾಗಿದೆ. ಕಣ್ಣಿಗೆ ಹಾನಿ ಮಾಡದ, ಮೃದುವಾಗಿರುವ ವಸ್ತುಗಳಿಂದಲೇ ಲೆನ್ಸ್ ತಯಾರಿಸಲಾಗಿದೆ.

ಲೆನ್ಸ್ ಸಂಪೂರ್ಣವಾಗಿ ಪಾರದರ್ಶಕ ಗಾಜಿನಂತಿದ್ದು, ಅದರೊಳಗೆ ಎಲ್‌ಇಡಿ ಬೆಳಕು ಚೆಲ್ಲುವ ಉಪಕರಣ ಮತ್ತು ಗ್ಲೂಕೋಸ್ ಅಳೆಯುವ ಸಂವೇದಕ, ಸಣ್ಣ ಪ್ರಮಾಣದ ಎಲೆಕ್ಟ್ರಿಕ್ ನಿಯಂತ್ರಕವನ್ನು ಇರಿಸಲಾಗಿದೆ.

ನಿರ್ದಿಷ್ಟ ಮಟ್ಟಕ್ಕಿಂತಲೂ ಗ್ಲೂಕೋಸ್ ಕಣ್ಣೀರಿನಲ್ಲಿ ಏರಿಕೆಯಾದರೆ, ಲೆನ್ಸ್‌ನಲ್ಲಿರುವ ಎಲ್‌ಇಡಿ ಉಪಕರಣ ಬೆಳಕು ಚೆಲ್ಲುವ ಮೂಲಕ ಎಚ್ಚರಿಕೆ ನೀಡುವಂತೆ ಪ್ರೋಗ್ರಾಮಿಂಗ್ ಮಾಡಲಾಗಿದೆ.

ಇದರಿಂದ ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುತ್ತದೆ ಹಾಗೂ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ಕಡಿಮೆ ಮಾಡಲು ವ್ಯವಸ್ಥಿತವಾಗಿ ಕಾರ್ಯತಂತ್ರ ರೂಪಿಸಬಹುದಾಗಿದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ.

ಪ್ರಸ್ತುತ ಈ ಲೆನ್ಸ್ ಅನ್ನು ಇಲಿ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿರುವ ವಿಜ್ಞಾನಿಗಳ ತಂಡ, ಇನ್ನಷ್ಟು ಪ್ರಬಲವಾಗಿ ಮಾನವನಿಗೆ ಹೊಂದುವಂತೆ ಲೆನ್ಸ್ ಸಿದ್ಧಪಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು