ಭಾನುವಾರ, ಡಿಸೆಂಬರ್ 8, 2019
24 °C

‘ಮಿಸ್ಟರ್ ಎಲ್‌ಎಲ್‌ಬಿ’ ತೆರೆಗೆ ಸಿದ್ಧ

Published:
Updated:
‘ಮಿಸ್ಟರ್ ಎಲ್‌ಎಲ್‌ಬಿ’ ತೆರೆಗೆ ಸಿದ್ಧ

‘ಹೊಟ್ಟೆಯೊಳಗೆ ಮಗು ಇಟ್ಟುಕೊಂಡ್ರೆ ಸತ್ತು ಹೋಗುತ್ತೆ. ಒಂದಿನ ಅದು ಹೊರಗೆ ಬರಬೇಕಲ್ವೆ’ -ಸಿನಿಮಾವೊಂದರ ಬಿಡುಗಡೆಯ ಹಿಂದಿರುವ ಸಂಕಷ್ಟವನ್ನು ನಿರ್ದೇಶಕ ರಘುವರ್ಧನ್‌ ತೋಡಿಕೊಂಡಿದ್ದು ಹೀಗೆ. ಅವರೇ ನಿರ್ದೇಶಿಸಿರುವ ‘ಮಿಸ್ಟರ್‌ ಎಲ್‌ಎಲ್‌ಬಿ’ ಚಿತ್ರಕ್ಕೆ ನವೆಂಬರ್‌ನಲ್ಲಿಯೇ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ಈಗ ಚಿತ್ರದ ಬಿಡುಗಡೆ ಅವರು ಮುಂದಾಗಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಕಾಮಿಡಿ ಮತ್ತು ಪ್ರೀತಿ ಬೆರೆತಿರುವ ಈ ಚಿತ್ರದಲ್ಲಿ ಗ್ರಾಮೀಣ ಸೊಗಡಿದೆ ಎಂದು ಚಿತ್ರತಂಡ ಹೇಳಿಕೊಂಡಿತು. ಪ್ರತಿ ವಾರ ಏಳೆಂಟು ಚಿತ್ರಗಳು ತೆರೆಕಾಣುತ್ತಿವೆ. ಸವಾಲು ಎದುರಿಸುವುದು ಅನಿವಾರ್ಯ ಎಂದ ರಘುವರ್ಧನ್ ಅವರ ಮಾತುಗಳಲ್ಲಿ ಚಿತ್ರಕ್ಕೆ ಹೂಡಿರುವ ಬಂಡವಾಳವನ್ನು ಹಿಂದಕ್ಕೆ ತೆಗೆಯುವುದು ಹೇಗೆ ಎಂಬ ಆತಂಕವೂ ಮನೆ ಮಾಡಿತ್ತು.

‘ಚಿತ್ರದಲ್ಲಿ ಎರಡು ಪಾತ್ರಗಳಿವೆ. ಅವುಗಳದ್ದು ಮೌನ ಪಯಣ. ಕೆಲವೊಮ್ಮೆ ದೂರವಾಗುತ್ತವೆ. ಈ ನಡುವೆ ತಂಪಾದ ಗಾಳಿ ಬೀಸುತ್ತದೆ. ತರಗೆಲೆಗಳು ಹಾರಿಹೋಗುತ್ತವೆ. ಕೊನೆಯವರೆಗೆ ನಾಯಕಿಯು ನಾಯಕನೊಂದಿಗೆ ಉಳಿಯುತ್ತಾಳೆಯೇ ಎಂಬುದು ಕುತೂಹಲ ಮೂಡಿಸುತ್ತದೆ. ಆತನ ಹಿಂದಿರುವ ಪಾತ್ರಗಳು ತಿರುಗಿ ನೋಡಿದಾಗ ಕಾಣಿಸುವುದಿಲ್ಲ’ ಎಂದು ಕಥೆಯ ಎಳೆ ಬಿಚ್ಚಿಟ್ಟರು ರಘುವರ್ಧನ್.

ಕಿರುತೆರೆಯಲ್ಲಿ ಮನೆಮಾತಾಗಿರುವ ಶಿಶಿರ ಅವರಿಗೆ ಇದು ಮೊದಲು ಸಿನಿಮಾ. ಉತ್ತಮವಾಗಿ ನಟಿಸಿರುವ ಖುಷಿ ಅವರ ಮೊಗದಲ್ಲಿತ್ತು. ಹಿರಿತೆರೆಯ ಪ್ರೇಕ್ಷಕರು ನನಗೆ ಒಲವು ನೀಡುತ್ತಾರೆಂಬ ಭರವಸೆ ಅವರ ಕಂಗಳಲ್ಲಿತ್ತು.

‘ಸಿನಿಮಾದಲ್ಲಿ ನಟಿಸಬೇಕೆಂಬುದು ನನ್ನ ಬಹುದಿನದ ಕನಸು. ಇದಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದೇನೆ. ಅವಮಾನ ಕೂಡ ಎದುರಿಸಿದ್ದೇನೆ. ಈ ಚಿತ್ರದ ಮೂಲಕ ನನ್ನಾಸೆ ಈಡೇರಿದೆ’ ಎಂದರು ಶಿಶಿರ.

‘ಚಿತ್ರದಲ್ಲಿ ನನ್ನದು ಹಳ್ಳಿಗೌಡ್ರು ಮಗನ ಪಾತ್ರ. ಗೌಡ್ರು ಮಗನಿಗೆ ಇರುವಷ್ಟೇ ಗರ್ವ ಪಾತ್ರದಲ್ಲಿದೆ. ಮೊದಲ ಸಿನಿಮಾದಲ್ಲಿಯೇ ನಿರ್ದೇಶಕರು ನನಗೆ ಬಿಲ್ಡಪ್‌ ಸಾಂಗ್‌ ಮಾಡಿದ್ದಾರೆ’ ಎಂದು ಸಂತಸ ಹಂಚಿಕೊಂಡರು.

ನಾಯಕಿ ಲೇಖಾ ಚಂದ್ರ ಅವರದ್ದು ನಾಯಕನಿಗೆ ಕ್ವಾಟ್ಲೆ ಕೊಡುವ ಪಾತ್ರವಂತೆ. ನಾಯಕನಷ್ಟೇ ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎಂದು ಅವರೇ ಹೇಳಿಕೊಂಡರು. ‘ಹೀರೊ ಬೇರೆಯವರಿಗೆ ಕಾಟ ಕೊಡುತ್ತಿರುತ್ತಾನೆ. ಅವನಿಗೆ ನಾನು ಸಾಕಷ್ಟು ಕ್ವಾಟ್ಲೆ ಕೊಡುತ್ತೇನೆ’ ಎಂದು ನಕ್ಕರು.

ಮಂಜು ಚರಣ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುರೇಶ್‌ ಬಾಬು ಅವರದ್ದು. ನಾರಾಯಣಸ್ವಾಮಿ, ಸುಜಯ್‌, ಕೆಂಪೇಗೌಡ ತಾರಾಬಳಗದಲ್ಲಿದ್ದಾರೆ. ಚಿತ್ರ ಫೆ.16ಕ್ಕೆ ತೆರೆ ಕಾಣಲಿದೆ.

ಪ್ರತಿಕ್ರಿಯಿಸಿ (+)