ಸೋಮವಾರ, ಡಿಸೆಂಬರ್ 9, 2019
21 °C

‘ಮೂಡ್‌ ಇದ್ದರಷ್ಟೇ ಅಡುಗೆ ಮಾಡ್ತೀನಿ’

Published:
Updated:
‘ಮೂಡ್‌ ಇದ್ದರಷ್ಟೇ ಅಡುಗೆ ಮಾಡ್ತೀನಿ’

ನನಗೆ ಶಾಲಾದಿನಗಳಲ್ಲಿಯೇ ಅಡುಗೆ ಅಂದ್ರೆ ಆಸಕ್ತಿ. ಅಮ್ಮ ಅಡುಗೆ ಮಾಡುವಾಗ ಆಸಕ್ತಿಯಿಂದ ನೋಡುತ್ತಿದ್ದೆ. ನಾನು ಅಡುಗೆಯನ್ನು ನೋಡುತ್ತಾನೇ ಕಲಿತಿದ್ದು. ಕಾಲೇಜಿನಲ್ಲಿ ಇರುವಾಗ ಚಿಕನ್‌ ಕರಿ ಮಾಡಿದ್ದು ಮೊದಲ ಪ್ರಯೋಗ. ಚೆನ್ನಾಗೇ ಆಗಿತ್ತು. ಎಲ್ಲರೂ ಹೊಗಳಿದ್ದರು.

ನಾನು ಮಂಗಳೂರಿನವಳು. ಮಾಂಸಾಹಾರ ನನಗೆ ಇಷ್ಟ. ಕೋರಿ ರೊಟ್ಟಿ, ಚಿಕನ್ ಸುಕ್ಕ, ಮೀನುಕರಿ ನನ್ನ ಇಷ್ಟದ ಖಾದ್ಯಗಳು. ಶೂಟಿಂಗ್‌ ಇಲ್ಲದಿದ್ದಾಗ ಮನೆಯಲ್ಲಿ ಕೆಲವೊಮ್ಮೆ ಅಡುಗೆ ನಾನೇ ಮಾಡುತ್ತೇನೆ. ಅಡುಗೆ ಮಾಡೋಕೆ ಒಳ್ಳೇ ಮೂಡ್‌ ಇರಬೇಕು. ಆಗ ನನ್ನಿಷ್ಟದ ಅಡುಗೆಗಳನ್ನು ಮಾಡಿ ಬಡಿಸುತ್ತೇನೆ. ಚಿಕನ್‌ ಕರಿ, ಫಿಶ್‌ ಕರಿ ಇದ್ದಾಗ ರೊಟ್ಟಿ ಜೊತೆ ತಿನ್ನುತ್ತೇನೆ.

ಚಿಕನ್ ಸುಕ್ಕ ಮಾಡುವುದು ಹೀಗೆ...

ಸಾಮಗ್ರಿಗಳು: ಕೋಳಿಮಾಂಸ ಅರ್ಧ ಕೆ.ಜಿ, ಈರುಳ್ಳಿ 2, ಟೊಮೊಟೊ 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ 1 ಟೀ ಚಮಚ, ಚಕ್ಕೆ, ಲವಂಗ, ಏಲಕ್ಕಿ 4, ಕೊತ್ತಂಬರಿ ಬೀಜ 2 ಟೀ ಚಮಚ, ಮೆಂತ್ಯ ಸ್ವಲ್ಪ, ಜೀರಿಗೆ 1 ಟೀ ಚಮಚ, ಬ್ಯಾಡಗಿ ಮತ್ತು ಖಾರ ಮೆಣಸು 7, ತೆಂಗಿನೆಣ್ಣೆ.

ವಿಧಾನ: ಒಂದು ಬಾಣಲೆ ಬಿಸಿಗಿಟ್ಟು ಮಂದವಾದ ಉರಿಯಲ್ಲಿ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಮೆಂತ್ಯ, ಕೊತ್ತಂಬರಿ ಬೀಜ, ಮೆಣಸನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ದಪ್ಪ ತಳದ ಅಗಲವಾದ ಪಾತ್ರೆ ಬಿಸಿಗಿಟ್ಟು, ಎಣ್ಣೆ ಹಾಕಿ. ಕಾದ ನಂತರ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೋಟೊ ಹಾಕಿ ಬೇಯಿಸಿಕೊಳ್ಳಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ. ಅದಕ್ಕೆ ಸ್ವಚ್ಛ ಮಾಡಿದ ಕೋಳಿ ಮಾಂಸವನ್ನು ಹಾಕಿ. ಮಾಂಸ ಬೇಯುತ್ತಿರುವಾಗ ಉಪ್ಪು ಮತ್ತು ಅರಿಸಿನ ಪುಡಿ ಹಾಕಿ. ಬಳಿಕ ಮಾಡಿಟ್ಟುಕೊಂಡ ಮಿಶ್ರಣವನ್ನು ಒಂದೊಂದಾಗಿ ಹಾಕಿಕೊಂಡು ಬರಬೇಕು. ಅದಕ್ಕೆ 2 ಲೋಟ ನೀರನ್ನು ಹಾಕಿ ಮಂದವಾದ ಉರಿಯಲ್ಲಿ ಬೇಯಲು ಬಿಡಿ.

ಮತ್ತೊಂದು ಪಾತ್ರೆಯಲ್ಲಿ ತೆಂಗಿನಕಾಯಿ ತುರಿ ಹಾಗೂ ಬೆಳ್ಳುಳ್ಳಿಯನ್ನು ಮಂದ ಉರಿಯಲ್ಲಿ ಸ್ವಲ್ಪ ಕೆಂಪು ಬಣ್ಣ ಆಗುವವರೆಗೂ ಹುರಿದುಕೊಳ್ಳಿ. ಚಿಕನ್‌ ಬೆಂದಾದ ಮೇಲೆ ಆ ಮಿಶ್ರಣಕ್ಕೆ ಕಾಯಿತುರಿಯನ್ನು ಹಾಕಿ 2–3 ನಿಮಿಷ ಬೇಯಿಸಿ. ಈಗ ಚಿಕನ್‌ ಸುಕ್ಕ ರೆಡಿ. 

ಪ್ರತಿಕ್ರಿಯಿಸಿ (+)