ಮಂಗಳವಾರ, ಡಿಸೆಂಬರ್ 10, 2019
19 °C

ಪೊಲೀಸರಿಗೆ ಬರಲಿದೆ ಅಲರ್ಟ್‌ ಮೆಸೇಜ್‌!

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಪೊಲೀಸರಿಗೆ ಬರಲಿದೆ ಅಲರ್ಟ್‌ ಮೆಸೇಜ್‌!

ಬೆಳಗಾವಿ: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಪ್ರಚೋದನಾಕಾರಿ ಅಥವಾ ಆಕ್ಷೇಪಾರ್ಹ ಅಂಶಗಳನ್ನು ಪೋಸ್ಟ್‌ ಮಾಡಿದ ತಕ್ಷಣ ಪೊಲೀಸ್‌ ನಿಯಂತ್ರಣ ಕೊಠಡಿಗೆ ಸಂದೇಶ (ಪಾಪ್ಸ್‌ ಅಪ್‌) ರವಾನಿಸುವ ಸಾಫ್ಟ್‌ವೇರ್‌ ಅನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಭಿವೃದ್ಧಿಪಡಿಸಿದ್ದು, ಇದರ ನೆರವು ಪಡೆಯಲು ರಾಜ್ಯ ಪೊಲೀಸ್‌ ಇಲಾಖೆ ಮುಂದಾಗಿದೆ.

ಇತ್ತೀಚಿನ ಕೋಮು ಗಲಭೆ ಹಾಗೂ ರಾಜಕೀಯ ಪ್ರೇರಿತ ದೊಂಬಿಗಳಲ್ಲಿ ಪ್ರಚೋದನೆ ನೀಡಲು, ವದಂತಿಗಳನ್ನು ಹಬ್ಬಿಸಲು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿರುವುದು ಕಂಡುಬಂದಿದೆ. ಹೀಗಾಗಿ ಅದರ ನಿಯಂತ್ರಣಕ್ಕೆ ಎನ್‌ಐಎ ಮೊರೆ ಹೋಗಲು ಇಲಾಖೆಯ ಹಿರಿಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಕಾರ್ಯವಿಧಾನ ಹೇಗೆ?: ಪ್ರಚೋದನೆ ಮೂಡಿಸುವ, ಗಲಭೆ ಹುಟ್ಟುಹಾಕುವ, ಶಾಂತಿಗೆ ಭಂಗ ಉಂಟು ಮಾಡುವ ಹಾಗೂ ಧಾರ್ಮಿಕ ಅವಹೇಳನದ ಶಬ್ದಗಳ ಪಟ್ಟಿಯನ್ನು ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಶಬ್ದಗಳು ಜಾಲತಾಣಗಳಲ್ಲಿ ಹರಿದಾ

ಡಿದಾಗ ಅವುಗಳನ್ನು ಸಾಫ್ಟ್‌ವೇರ್‌ ಪತ್ತೆ ಹಚ್ಚಿ, ಸಂದೇಶ ರವಾನಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಫೇಸ್‌ಬುಕ್‌ ಮೂಲಕ ಯಾರಿಂದ ಯಾರಿಗೆ ಸಂದೇಶಗಳು ರವಾನೆಯಾಗಿವೆ? ಯಾರು ಟ್ವೀಟ್‌ ಮಾಡಿದ್ದಾರೆ? ಎನ್ನುವ ಮಾಹಿತಿಯನ್ನೂ ಪೊಲೀಸ್‌ ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ಇದರ ಆಧಾರದ ಮೇಲೆ ಪೊಲೀಸರು ಸಂಬಂಧಪಟ್ಟವರನ್ನು ಪತ್ತೆ ಹಚ್ಚಿ, ದೂರು ದಾಖಲಿಸುತ್ತಾರೆ. ಅಲ್ಲದೆ, ಅಂತಹ ಆಕ್ಷೇಪಾರ್ಹ ಸಂದೇಶಗಳನ್ನು ನಾಶಪಡಿಸುವ ಕೆಲಸವನ್ನೂ ಪೊಲೀಸರು ಮಾಡಲಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳ ಸರ್ವರ್‌ಗಳು ವಿದೇಶದಲ್ಲಿವೆ. ಹೀಗಾಗಿ ಅವುಗಳ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟ. ಆದರೆ, ಈ ತಾಣಗಳಲ್ಲಿ ವಿನಿಮಯವಾಗುವ ಸಂದೇಶಗಳ ಮೇಲೆ ಕಣ್ಣಿಟ್ಟರೆ ವದಂತಿಗಳಿಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಇಲ್ಲಿನ ಪೊಲೀಸ್‌ ಅಧಿಕಾರಿಯೊಬ್ಬರು.

ಶೀಘ್ರ ಮಾತುಕತೆ: ‘ಸಾಫ್ಟ್‌ವೇರ್‌ನ ತಾಂತ್ರಿಕ ಮಾಹಿತಿ ನನ್ನ ಬಳಿ ಇಲ್ಲ. ಆದರೆ ಅದರಲ್ಲಿ ಸದ್ಯ ಇಂಗ್ಲಿಷ್‌ನ ಆಕ್ಷೇಪಾರ್ಹ ಶಬ್ದಗಳನ್ನು ಮಾತ್ರ ಅಳವಡಿಸಲಾಗಿದೆ. ಕನ್ನಡದ ಶಬ್ದಗಳನ್ನು ಅಳವಡಿಸಬಹುದೇ ಎನ್ನುವುದರ ಬಗ್ಗೆ ಎನ್‌ಐಎ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಅದು ಸಾಧ್ಯವಾದರೆ ಈ ಸಾಫ್ಟ್‌ವೇರ್‌ ಅನ್ನು ರಾಜ್ಯದಲ್ಲಿ ಕೂಡ ಅಳವಡಿಸಬಹುದು’ ಎಂದು ಉತ್ತರ ವಲಯದ ಐಜಿಪಿ ಅಲೋಕ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ತಾಣಗಳು ಸಾರ್ವಜನಿಕರಿಗೆ (ಫಾಲೋವರ್ಸ್‌) ಮುಕ್ತವಾಗಿವೆ. ಇಲ್ಲಿ ಅಕೌಂಟ್‌ ತೆರೆದು, ಬೇರೆಯವರ ಜೊತೆ ಸಂವಹನ ನಡೆಸಲು ಹಾಗೂ ಅವರ ಸಂದೇಶಗಳನ್ನು ನೋಡಲು ಅವಕಾಶವಿದೆ. ಇಲ್ಲಿ ಖಾಸಗಿತನದ ಪ್ರಶ್ನೆ ಉದ್ಭವಿಸುವುದಿಲ್ಲ’ ಎನ್ನುತ್ತಾರೆ ಅವರು.

‘ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಯಾರಿಗೆ ಕಳುಹಿಸುತ್ತೇವೆಯೊ ಅವರಿಗೇ ಹೋಗುತ್ತವೆ. ಹೀಗಾಗಿ ಇಂತಹ ಸಂದೇಶಗಳ ಮೇಲೆ ನಿಗಾವಹಿಸುವುದು ಕಷ್ಟ. ಆದರೆ, ಸಾರ್ವಜನಿಕರು ಯಾರಾದರೂ ಇಂತಹ ಸಂದೇಶಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅವುಗಳ ಮೇಲೂ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಆರು ತಿಂಗಳಿನಿಂದ ಎನ್‌ಐಎ ಈ ಸಾಫ್ಟ್‌ವೇರ್‌ ಬಳಸುತ್ತಿದೆ. ಇತರ ಕೆಲವು ಸುರಕ್ಷಾ ಏಜೆನ್ಸಿಗಳಿಗೂ ಇದನ್ನು ನೀಡಿದೆ ಎನ್ನುವುದನ್ನು ಕೇಳಿದ್ದೇನೆ. ಶುಲ್ಕ ಪಾವತಿಸಿ ನಾವೂ (ಪೊಲೀಸ್‌ ಇಲಾಖೆ) ಇದನ್ನು ಪಡೆಯಬಹುದಾಗಿದೆ’ ಎಂದು ಅಲೋಕ್‌ಕುಮಾರ್‌ ಹೇಳಿದರು.

ಪ್ರತಿಕ್ರಿಯಿಸಿ (+)