ಮಂಗಳವಾರ, ಡಿಸೆಂಬರ್ 10, 2019
21 °C
ನೆಹರೂ, ಗಾಂಧಿ ಕುಟುಂಬದ ವಿರುದ್ಧ ಮೋದಿ ವಾಗ್ದಾಳಿ

‘ಸ್ವಚ್ಛತಾ ಅಭಿಯಾನ ಕಸ ಗುಡಿಸಲಷ್ಟೇ ಮೀಸಲಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸ್ವಚ್ಛತಾ ಅಭಿಯಾನ ಕಸ ಗುಡಿಸಲಷ್ಟೇ ಮೀಸಲಲ್ಲ’

ನವದೆಹಲಿ: ವಸೂಲಾಗದ ಸಾಲದಿಂದಾಗಿ (ಎನ್‌ಪಿಎ) ಬ್ಯಾಂಕುಗಳು ಬಿಕ್ಕಟ್ಟು ಎದುರಿಸುವುದಕ್ಕೆ ಕಾಂಗ್ರೆಸ್‌ ಆಡಳಿತವೇ ಕಾರಣ ಎಂದು ಪ್ರಧಾನಿ ಲೋಕಸಭೆಯಲ್ಲಿ ಆರೋಪಿಸಿದರು. ತಮ್ಮ ವಾದವನ್ನು ಪುಷ್ಟೀಕರಿಸಲು ಅವರು ಅಂಕಿ ಅಂಶಗಳನ್ನೂ ನೀಡಿದರು.

‘ನೀವು ಶೇ 36ರಷ್ಟು ಎನ್‌ಪಿಎ ಇದೆ ಎಂದು ಸುಳ್ಳು ಹೇಳಿದಿರಿ. 2014ರ ಮಾಹಿತಿ ಪ್ರಕಾರ ಅದರ ಪ್ರಮಾಣ ಶೇ 82 ಎಂಬ ಮಹತ್ವದ ಅಂಶ ಬಹಿರಂಗಗೊಂಡಿತು. 2000ನೇ ಸಾಲಿನಲ್ಲಿ ಎನ್‌ಪಿಎ ಒಟ್ಟು ಪ್ರಮಾಣ ₹ 18 ಲಕ್ಷ ಕೋಟಿ ಇದ್ದರೆ, ಅದು 2014ರ ವೇಳೆಗೆ ₹ 52 ಲಕ್ಷ ಕೋಟಿಯಷ್ಟಾಗಿತ್ತು. ಅಷ್ಟರ ಮಟ್ಟಿಗೆ ನೀವು ಬಡವರ ಹಣವನ್ನು ಲೂಟಿ ಮಾಡಿದಿರಿ’ ಎಂದು ಕಾಂಗ್ರೆಸ್ಸನ್ನು ಮೋದಿ ದೂರಿದರು.

‘ನಮ್ಮ ಸರ್ಕಾರ ಆರಂಭಿಸಿರುವ ಸ್ವಚ್ಛತಾ ಅಭಿಯಾನ ಕೇವಲ ಕಸವನ್ನು ಗುಡಿಸುವುದಕ್ಕೆ ಮೀಸಲಾಗಿಲ್ಲ. ಬದಲಿಗೆ, ಬ್ಯಾಂಕಿಂಗ್‌ ಕ್ಷೇತ್ರಕ್ಕೂ ಶಕ್ತಿ ನೀಡಲಾಗಿದೆ. ನೀವು ಮಾಡಿಕೊಂಡ ಅನಿಲ ಖರೀದಿ ಒಪ್ಪಂದದಲ್ಲೂ ಭ್ರಷ್ಟಾಚಾರದ ಹೊಗೆ ಇದೆ. ಕತಾರ್‌ ಜೊತೆ ಮಾಡಿಕೊಂಡ 20 ವರ್ಷದ ಒಪ್ಪಂದದ ಪ್ರಕಾರ ವಿಧಿಸಲಾಗಿದ್ದ ಹೆಚ್ಚುವರಿ ದರವನ್ನು ಕಡಿಮೆ ಮಾಡಿಸಿ ದೇಶಕ್ಕೆ ₹ 8,000 ಕೋಟಿಯಷ್ಟು ಉಳಿತಾಯ ಮಾಡಲಾಗಿದೆ. ಆಸ್ಟ್ರೇಲಿಯಾದಿಂದ ಖರೀದಿಸಿದ ಅನಿಲದ ಬಾಬತ್ತಿನಲ್ಲಿ ₹ 4,000 ಕೋಟಿ ಉಳಿಸಲಾಗಿದೆ. ಹೆಚ್ಚುವರಿ ಬೆಲೆಯನ್ನು ನೀವು ಏಕೆ ಕೊಟ್ಟಿರಿ ಎಂದು ನಾವು ಪ್ರಶ್ನಿಸುವುದಿಲ್ಲ. ನೀವು ಉತ್ತರ ನೀಡುವುದಿಲ್ಲ ಎಂಬುದು ನಮಗೆ ತಿಳಿದಿದೆ. ‘ಚೋಟೆ ಮನ್ ಸೇ ಕೋಯಿ ಬಡಾ ನಹೀ ಹೋತಾ, ಟೂಟೇ ಮನ್ ಸೇ ಕೋಯಿ ಖಡಾ ನಹೀ ಹೋತಾ (ಸಣ್ಣ ಮನಸ್ಸಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಒಡೆದ ಮನಸ್ಸಿನಿಂದ ಯಾರೂ ನಿಲ್ಲಲಾಗುವುದಿಲ್ಲ)’ ಎಂಬ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕವಿತೆಯ ಸಾಲುಗಳನ್ನು ನೆನಪಿಸಿ ಕಾಂಗ್ರೆಸ್ ಮುಖಂಡರನ್ನು ಅವರು ಮೂದಲಿಸಿದರು.

‘ಎಲ್‌ಇಡಿ ಬಲ್ಬ್‌ಗಳ ಖರೀದಿಯಲ್ಲೂ ನಿಮ್ಮ ಭ್ರಷ್ಟಾಚಾರ ಬಯಲಾಗಿದೆ. ನೀವು ₹ 350 ನೀಡಿ ಖರೀದಿಸಿದ್ದ ಬಲ್ಬ್‌ಗಳನ್ನು ಅದೇ ಕಂಪನಿ ಈಗ ₹ 40ಕ್ಕೆ ನೀಡುತ್ತಿದೆ. ನಾನು ನಿಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದಿಲ್ಲ. ಬದಲಿಗೆ ದೇಶವೇ ನಿಮ್ಮ ಬಗ್ಗೆ ಮಾತನಾಡುತ್ತಿದೆ’ ಎಂದು ಅವರು ಕುಟುಕಿದರು.

ಒಂದೂವರೆ ಗಂಟೆ ಕಾಲದ ತಮ್ಮ ಭಾಷಣವನ್ನು ಕಾಂಗ್ರೆಸ್ ಹಾಗೂ ನೆಹರೂ, ಗಾಂಧಿ ಕುಟುಂಬವನ್ನು ಜರಿಯಲು ಮೀಸಲಿಟ್ಟ ಮೋದಿ, ಸರ್ದಾರ್ ವಲ್ಲಭಬಾಯ್ ಪಟೇಲ್‌ ಅವರೇ ಪ್ರಧಾನಿಯಾಗಲಿ ಎಂದು ಕಾಂಗ್ರೆಸ್‌ನ ಬಹುತೇಕರು ಇಚ್ಛಿಸಿದ್ದರೂ, ಅವರನ್ನು ಕಡೆಗಣಿಸಲಾಯಿತು. ಅವರೇ ಪ್ರಧಾನಿ ಸ್ಥಾನ ಅಲಂಕರಿಸಿದ್ದಲ್ಲಿ ಕಾಶ್ಮೀರದ ಒಂದು ಭಾಗ ದೇಶದ ಕೈತಪ್ಪಿ ಹೋಗುತ್ತಿರಲಿಲ್ಲ ಎಂದು ಅವರು ಹೇಳಿದರು.

‘ನಾವು ಅದನ್ನು ಮಾಡಿದ್ದೇವೆ, ಇದನ್ನು ಮಾಡಿದ್ದೇವೆ ಎಂದೆಲ್ಲ ನೀವು ಕೊಚ್ಚಿಕೊಳ್ಳುತ್ತೀರಿ. ದೇಶ ಸ್ವಾತಂತ್ರ್ಯಾನಂತರ ಶರವೇಗದಲ್ಲಿ ಬೆಳೆದಿದೆ, ಬದಲಾವಣೆಯಾಗಿದೆ. ದೇಶವನ್ನು ವಿಭಜಿಸಿ ಛಿದ್ರಗೊಳಿಸಿದ ನಂತರವೂ ಜನ ನಿಮ್ಮೊಂದಿಗೇ ಇದ್ದರು. ಆರಂಭದ ನಾಲ್ಕೈದು ಅವಧಿಗೆ ವಿರೋಧ ಪಕ್ಷಗಳೇ ಇರಲಿಲ್ಲ. ರೇಡಿಯೊ ನಿಮ್ಮ ಗುಣಗಾನವನ್ನೇ ಮಾಡುತ್ತಿತ್ತು. ನಿಮ್ಮ ಕೈಗೊಂಬೆಯಾಗಿದ್ದ ದೂರದರ್ಶನ ನೀವು ಹೇಳಿದ್ದನ್ನೇ ಪ್ರಸಾರ ಮಾಡುತ್ತಿತ್ತು. ನ್ಯಾಯಾಧೀಶರ ನೇಮಕದ ಆದೇಶಗಳೂ ಕಾಂಗ್ರೆಸ್‌ ಕಚೇರಿಯಿಂದಲೇ ಹೊರ ಬೀಳುತ್ತಿದ್ದವು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿರದಿದ್ದ ಮಾಧ್ಯಮ ಕ್ಷೇತ್ರವು ದೇಶದ ಒಳಿತಿನ ಉದ್ದೇಶದಿಂದ ನಿಮ್ಮ ಜೊತೆಗೇ ಇತ್ತು. ಸ್ವಯಂ ಸೇವಾ ಸಂಸ್ಥೆಗಳು ಈಗಿನಂತೆ ನ್ಯಾಯಾ

ಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತಿರಲಿಲ್ಲ. ಪಂಚಾಯಿತಿಯಿಂದ ಸಂಸತ್‌ವರೆಗೆ ನಿಮ್ಮದೇ ಧ್ವಜ ಹಾರಾಡುತ್ತಿತ್ತು. ಆದರೂ ನೀವು ಒಂದೇ ಕುಟುಂಬದ (ನೆಹರೂ, ಗಾಂಧಿ) ಹಾಡನ್ನು ಗುಣುಗುನಿಸುವುದರಲ್ಲೇ ಕಾಲಕಳೆದಿರಿ. ಭಾರತದ ನಂತರ ಸ್ವಾತಂತ್ರ್ಯ ಪಡೆದ ಅನೇಕ ರಾಷ್ಟ್ರಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿವೆ ಎಂಬುದನ್ನು ಮರೆಯಬಾರದು’ ಎಂದು ವ್ಯಂಗ್ಯವಾಡಿದರು.

‘ನಿಮ್ಮ ಪ್ರಕಾರ 1947ರ ಆಗಸ್ಟ್‌ 15ರ ನಂತರವೇ ಭಾರತ ಅಸ್ತಿತ್ವಕ್ಕೆ ಬಂತು. ನೆಹರೂ ಹಾಗೂ ಕಾಂಗ್ರೆಸ್‌ ಪಕ್ಷದವರು ಮಾತ್ರ ಈ ದೇಶಕ್ಕೆ ಸ್ವಾತಂತ್ರ್ಯ ನೀಡಿದರು ಎಂಬಂತೆ ನೀವು ಕೊಚ್ಚಿಕೊಳ್ಳುತ್ತಿದ್ದೀರಿ. ನಮ್ಮ ದೇಶದಲ್ಲಿ ಬುದ್ಧನ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು. ಆಗಲೂ ವಿಚಾರ, ವಿಮರ್ಶೆಗಳಿಗೆ ಸ್ವಾತಂತ್ರ್ಯ ಇತ್ತು. ಚುನಾವಣೆ, ಮತದಾನದ ಬಗ್ಗೆ ನಂಬಿಕೆ ಇತ್ತು ಎಂದು ಅವರು ಹೇಳಿದರು.

ಮಧ್ಯಾಹ್ನದ ನಂತರ ರಾಜ್ಯಸಭೆಯಲ್ಲೂ ಮೋದಿ ಇದೇ ವಿಷಯವಾಗಿ ಮಾತನಾಡಿದರು.

‘ಬಸವಣ್ಣನನ್ನು ಅವಮಾನಿಸಬೇಡಿ’

ಲೋಕಸಭೆಯಲ್ಲಿನ ತಮ್ಮ ಭಾಷಣದ ಮಧ್ಯೆ ಕರ್ನಾಟಕದ ಕುರಿತೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಂಗಳವಾರದ ಭಾಷಣವನ್ನು ನೆನಪಿಸಿದರು.

‘ದುಶ್ಮನೀ ಜಮ್ ಕೆ ಕರೋ, ಲೇಕಿನ್ ಏ ಗುಂಜಾಯಿಶ್ ರಹೇ, ಜಬ್ ಕಭೀ ಭೀ ಹಮ್ ದೋಸ್ತ್ ಹೋಜಾಯೇ ತೊ ಶರ್ಮಿಂದಾ ನ ಹೋನಾ ಪಡೆ (ಮನಸೋ ಇಚ್ಚೆ ದ್ವೇಷ ಸಾಧಿಸಿ. ಆದರೆ, ಅದರಲ್ಲೂ ಒಂದು ಅವಕಾಶ ಮುಕ್ತವಾಗಿರಲಿ. ಮುಂದೆ ನಮ್ಮ ಸ್ನೇಹ ಮತ್ತೆ ಚಿಗುರೊಡೆದರೆ ನಾಚಿಕೆ ಪಟ್ಟುಕೊಳ್ಳುವಂತಾಗಬಾರದು)’ ಎಂಬ ಕವಿ ಬಶೀರ್ ಬದ್ರ್ ಅವರ ಕವಿತೆಯ ಸಾಲುಗಳನ್ನು ಓದಿದ್ದ ಖರ್ಗೆ ಅವರ ಭಾಷಣ ನೆನಪಿಸಿದ ಪ್ರಧಾನಿ, ‘ಖರ್ಗೆ ಅವರ ಭಾಷಣವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿಸಿಕೊಂಡಿರಬಹುದು ಎಂದು ಭಾವಿಸಿದ್ದೇನೆ’ ಎಂದು ನುಡಿದರು.

‘ಜೀ ಕರ್ತಾ ಹೈ ಕಿ ಸಚ್ ಬೋಲೆ, ಕ್ಯಾ ಕರೇ ಹೌಸ್ಲಾ ನಹೀ ಹೋತಾ (ಸತ್ಯ ಹೇಳಬೇಕೆಂದು ಮನಸ್ಸು ಹೇಳುತ್ತಿದೆ. ಆದರೆ, ಏನು ಮಾಡಲಿ ಧೈರ್ಯ ಸಾಲುತ್ತಿಲ್ಲ)’ ಎಂಬ ಅದೇ ಕವನದ ಮುಂದಿನ ಸಾಲುಗಳನ್ನೂ ಖರ್ಗೆ ಹೇಳಿದ್ದರೆ ಚೆನ್ನಾಗಿತ್ತು ಎಂದು ಅವರು ಕುಟುಕಿದರು.

‘ಕರ್ನಾಟಕದ ವಿಧಾನಸಭೆ ಚುನಾವಣೆಯ ನಂತರ ಖರ್ಗೆ ಈ ಜಾಗದಲ್ಲಿ ಇರುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಅವರ ಮಂಗಳವಾರದ ಭಾಷಣ ವಿದಾಯ ಭಾಷಣದಂತೆಯೇ ಇತ್ತು’ ಎಂದು ಪ್ರಧಾನಿ ವ್ಯಂಗ್ಯವಾಡಿದರು.

‘ಕರ್ನಾಟಕದವರಾದ ನೀವು ಬಸವಣ್ಣನನ್ನು ಅವಮಾನಿಸಬೇಡಿ’ ಎಂದು ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, ‘ನಿಮಗೆ ಗೊತ್ತಿರಬಹುದು, ಬಸವಣ್ಣ 12ನೇ ಶತಮಾನದಲ್ಲೇ ಅನುಭವ ಮಂಟಪ ಸ್ಥಾಪಿಸಿ ಪ್ರಜಾತಾಂತ್ರಿಕ ವ್ಯವಸ್ಥೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದರು. ಮಹಿಳೆಯರಿಗೂ ಸಂಸತ್‌ನಲ್ಲಿ ಸ್ಥಾನವಿತ್ತು. ಪ್ರಜಾಪ್ರಭುತ್ವ ನಮ್ಮ ಪರಂಪರೆಯಾಗಿದೆ’ ಎಂದರು.

ವಾಜಪೇಯಿ ಪ್ರಧಾನಿಯಾಗಿದ್ದಾಗ ಬೀದರ್‌ ಮತ್ತು ಕಲಬುರ್ಗಿ ನಡುವಣ ರೈಲು ಮಾರ್ಗ ಮಂಜೂರು ಮಾಡಲಾಗಿತ್ತು ಎಂಬುದನ್ನು ಖರ್ಗೆ ಅವರು ಮಂಗಳವಾರ ಹೇಳಲಿಲ್ಲ. ವಾಸ್ತವದಲ್ಲಿ 2004ರಿಂದ 2013ರ ಅವಧಿಯವರೆಗೆ 110 ಕಿಲೋ ಮೀಟರ್‌ ಉದ್ದದ ಈ ಮಾರ್ಗದ ಕಾಮಗಾರಿ 37 ಕಿಲೋಮೀಟರ್‌ವರೆಗೆ ಮಾತ್ರ ಪೂರ್ಣಗೊಂಡಿತ್ತು. ಖರ್ಗೆ ಅವರೇ ರೈಲ್ವೆ ಸಚಿವರಾಗಿದ್ದರೂ ತಮ್ಮ ಕ್ಷೇತ್ರದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಮುಕ್ತಗೊಳಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)