ಮಂಗಳವಾರ, ಡಿಸೆಂಬರ್ 10, 2019
20 °C

ಪ್ರಧಾನಿಗೆ ತಾಕತ್ತಿದ್ದರೆ ಸರ್ಕಾರ ವಜಾ ಮಾಡಲಿ: ಕೆ.ಎನ್. ರಾಜಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿಗೆ ತಾಕತ್ತಿದ್ದರೆ ಸರ್ಕಾರ ವಜಾ ಮಾಡಲಿ: ಕೆ.ಎನ್. ರಾಜಣ್ಣ

ಬೆಂಗಳೂರು: ಪ್ರಧಾನಿಗೆ ತಾಕತ್ತಿದ್ದರೆ ರಾಜ್ಯ ಸರ್ಕಾರ ವಜಾ ಮಾಡಲಿ ಎಂದು ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ವಿಧಾನಸಭೆಯಲ್ಲಿ ಬುಧವಾರ ಸವಾಲು ಹಾಕಿದರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಜಂಗಲ್ ರಾಜ್‌ ಇದೆ ಎಂದು ಪ್ರಧಾನಿ ಸಂಸತ್‌ನಲ್ಲಿ ಹೇಳಿದ್ದಾರೆ. ಅದನ್ನು ಪ್ರತಿಭಟಿಸುತ್ತೇನೆ. ಅವರ ಬಳಿ ದಾಖಲೆ ಇದ್ದರೆ ಮುಖ್ಯಮಂತ್ರಿ ಸೇರಿದಂತೆ ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಲಿ’ ಎಂದರು.

ಇಂತಹ ಹೇಳಿಕೆ ನೀಡುವ ಮೂಲಕ ಅವರು ಕರ್ನಾಟಕಕ್ಕೆ ಅವಮಾನ ಮಾಡಿದ್ದು, ಕಪ್ಪುಚುಕ್ಕಿ ಅಂಟಿಸಿದ್ದಾರೆ. ಬಂಡವಾಳ ಹೂಡಿಕೆದಾರರು ಬರದಂತೆ, ರಾಜ್ಯ ಉದ್ಧಾರಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ಪ್ರಧಾನಿ ವರ್ತನೆ ನಾಚಿಕೆ ಗೇಡಿನ ಸಂಗತಿ ಎಂದರು.

ಸ್ವಾರಸ್ಯಕರ ಚರ್ಚೆ:

‘ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಮಾತ್ರ ಮತ ವರ್ಗಾಯಿಸುವ ಶಕ್ತಿಯಿದೆ. ನೀವೆಲ್ಲ ಯಡಿಯೂರಪ್ಪ ಫೋಟೊ ಹಿಡಿದುಕೊಂಡು ಭಿಕ್ಷೆಗೆ ಹೋಗಬೇಕು’ ಎಂದು ಹೇಳಿದ ರಾಜಣ್ಣ ಬಿಜೆಪಿ ಸದಸ್ಯರನ್ನು ಕೆಣಕಿದರು.

‘ನಾವು ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದೇವೆ. ಸಿದ್ದರಾಮಯ್ಯ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಿಮಗೆ ಧೈರ್ಯ ಇದ್ದರೆ ಘೋಷಿಸಿ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸವಾಲು ಹಾಕಿದರು.

ಮಧ್ಯಪ್ರವೇಶಿಸಿದ ಸಚಿವ ಎಚ್‌. ಆಂಜನೇಯ, ‘ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವುದು ನಮ್ಮ ಪದ್ಧತಿ’ ಎಂದರು.

‘ಕೂಸು ಹುಟ್ಟುವ ಮೊದಲೇ ಕುಲಾವಿ ಯಾಕೆ ಹೊಲಿಯುತ್ತೀರಿ. ನಮ್ಮ ಕುಮಾರಣ್ಣ ಮುಂದಿನ ಮುಖ್ಯಮಂತ್ರಿ’ ಎಂದು ಜೆಡಿಎಸ್‌ನ ಕೋನರಡ್ಡಿ ಹೇಳಿದರು.

ಪ್ರತಿಕ್ರಿಯಿಸಿ (+)