ಶುಕ್ರವಾರ, ಡಿಸೆಂಬರ್ 6, 2019
25 °C

ಕಾಂಗ್ರೆಸ್‌, ಬಿಜೆಪಿಗೆ ಪ್ರತಿಷ್ಠೆಯ ಕಣವಾದ ಬಳ್ಳಾರಿ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌, ಬಿಜೆಪಿಗೆ ಪ್ರತಿಷ್ಠೆಯ ಕಣವಾದ ಬಳ್ಳಾರಿ

ಬಳ್ಳಾರಿ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಜಿಲ್ಲೆಯು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಎರಡೂ ಪಕ್ಷಗಳು ಎದುರಾಳಿ ವಲಯದಲ್ಲಿರುವ ಮುಖಂಡರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿವೆ. ಇಲ್ಲಿ ‘ಅಕ್ರಮ ಗಣಿಗಾರಿಕೆ’ ವಿಷಯವೇ ಚುನಾವಣೆಯ ಅಜೆಂಡಾ ಆಗುವ ಸಾಧ್ಯತೆಯೂ ಹೆಚ್ಚಿದೆ. ಜಿಲ್ಲೆಯಲ್ಲಿನ ಅಭ್ಯರ್ಥಿಗಳ ಸೋಲು–ಗೆಲುವುಗಳೇ ರಾಜ್ಯದಲ್ಲಿ ಅಧಿಕಾರ ಕಲ್ಪಿಸುವ ಅಥವಾ ತಪ್ಪಿಸುವ ಸಾಧ್ಯತೆ ಇದೆ ಎಂಬ ನಂಬಿಕೆಯು ಎರಡೂ ಪಕ್ಷಗಳಲ್ಲಿದೆ.

ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಇಲ್ಲಿಂದಲೇ ಭದ್ರಪಡಿಸಿಕೊಳ್ಳುವ ಇರಾದೆಯೂ ಇದೆ.

ಅದರ ಅಂಗವಾಗಿಯೇ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜ್ಯ ಪ್ರವಾಸವನ್ನು ಫೆ.10ರಿಂದ ಹೊಸಪೇಟೆಯಿಂದಲೇ ಆರಂಭಿಸಲಿದ್ದಾರೆ. ಚುನಾವಣಾ ಪೂರ್ವ ಚಟುವಟಿಕೆಗಳಿಗೆ ಜಿಲ್ಲೆಯನ್ನು ಪ್ರಮುಖ ಕೇಂದ್ರದಂತೆ ಕಾಂಗ್ರೆಸ್‌ ಪರಿಗಣಿಸಿದೆ.

10ರಂದು ಜಿಲ್ಲಾ ಕೇಂದ್ರದಲ್ಲಿಯೇ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯೂ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಅಲ್ಲಿಯೇ ಘೋಷಣೆಯೂ ಹೊರಬೀಳಲಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಲಾಢ್ಯರಿಗೆ ಬಲೆ: ಹೊಸಪೇಟೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದ, ಜಿಲ್ಲೆಯಲ್ಲಿ ಆ ಪಕ್ಷದ ಏಕೈಕ ಶಾಸಕರಾಗಿದ್ದ ಆನಂದಸಿಂಗ್‌ ಅವರನ್ನು ಕಾಂಗ್ರೆಸ್‌ ತನ್ನೆಡೆಗೆ ಸೆಳೆದುಕೊಂಡಿದ್ದಾಗಿದೆ. ಅಲ್ಲಿಯೇ ಗುರುತಿಸಿಕೊಂಡಿದ್ದ ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ.ನಾಗೇಂದ್ರ 10ರಂದು ರಾಹುಲ್‌ಗಾಂಧಿ ಸಮ್ಮುಖದಲ್ಲೇ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ.

ಡಿ.18ರಂದು ‘ಸಾಧನಾ ಸಮಾವೇಶ’ಕ್ಕೆಂದು ಹಗರಿಬೊಮ್ಮನಹಳ್ಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಜೆಡಿಎಸ್‌ ಪದಚ್ಯುತ ಶಾಸಕ ಎಸ್‌.ಭೀಮಾನಾಯ್ಕ ಅವರನ್ನು ಆಶೀರ್ವದಿಸುವಂತೆ ಜನರಿಗೆ ಮನವಿ ಮಾಡಿದ್ದರು!

ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಕಾಂಗ್ರೆಸ್‌ ಹುರಿಯಾಳುಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದೆ. ಆರಂಭದಿಂದಲೂ ಕಾಂಗ್ರೆಸ್‌ ಜೊತೆಗೆ ನೆಂಟಸ್ತಿಕೆ ಉಳಿಸಿಕೊಂಡಿರುವ ಸಂಡೂರಿನ ಘೋರ್ಪಡೆ ಕುಟುಂಬದ ಗಣಿ ಉದ್ಯಮಿ ಕಾರ್ತಿಕೇಯ ಘೋರ್ಪಡೆ ಸೋಮವಾರ ನವದೆಹಲಿಯಲ್ಲಿ ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್‌ ಮುಖಂಡರಾಗಿದ್ದ ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹೊಸಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎನ್ನಲಾಗಿದ್ದ ಗವಿಯಪ್ಪ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬುದು ಹೊಸ ಬೆಳವಣಿಗೆ. ಜಿಲ್ಲೆಯು ಇಂಥ ಇನ್ನಷ್ಟು ಅದಲು–ಬದಲಿನ ಹೊಸ ಬೆಳವಣಿಗೆಗಳನ್ನು ಎದುರು ನೋಡುವಂತಾಗಿದೆ.

ಬಿಜೆಪಿಯಲ್ಲೂ ಸಿದ್ಧತೆ: ರಾಹುಲ್‌ಗಾಂಧಿ ಭೇಟಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯೂ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರಮೋದಿ ಅವರನ್ನು ಹೊಸಪೇಟೆಗೆ ಕರೆತರುವ ಚಿಂತನೆ ನಡೆಸಿದೆ.

ಗವಿಯಪ್ಪ ಮತ್ತು ಕಾರ್ತಿಕೇಯ ಸೇರ್ಪಡೆ ಸಂದರ್ಭದಲ್ಲೇ ಈ ಬಗ್ಗೆ ಚರ್ಚೆಯೂ ನಡೆದಿದೆ. ಮೊದಲ ಹಂತದಲ್ಲಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ನೇತೃತ್ವದಲ್ಲಿ ಫೆ.28ರಂದು ಹೊಸಪೇಟೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲು ಪಕ್ಷ ನಿರ್ಧರಿಸಿದೆ. ಮಾರ್ಚ್‌ನಲ್ಲಿ ಅಮಿತ್‌ ಶಾ ಮತ್ತು ಮೋದಿ ಭೇಟಿ ನೀಡಲಿದ್ದಾರೆ.

* ಬಿಜೆಪಿಯ ಎಷ್ಟೇ ದೊಡ್ಡ ಮುಖಂಡರೂ ಬಳ್ಳಾರಿ ಜಿಲ್ಲೆಗೆ ಬಂದರೂ ಪಕ್ಷದ ಮೇಲೆ ಯಾವ ಪರಿಣಾಮವೂ ಆಗದು.

–ಮೊಹ್ಮದ್‌ ರಫೀಕ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

* ನಾವೂ ಕಡಿಮೆ ಏನಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಸಪೇಟೆಗೆ ಕರೆಸಲಿದ್ದೇವೆ

–ಪಿ.ಚೆನ್ನಬಸವನಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

10ರಂದು ‘ಗೋ ಬ್ಯಾಕ್‌ ರಾಹುಲ್‌ ಗಾಂಧಿ’ ಚಳವಳಿ

ಬಳ್ಳಾರಿ: ‘ನ್ಯಾ.ಎ.ಜೆ. ಸದಾಶಿವ ವರದಿ ಜಾರಿಯಾಗುವವರೆಗೂ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬರಬಾರದು ಎಂದು ಆಗ್ರಹಿಸಿ ಫೆ.10ರಂದು ‘ಗೋ ಬ್ಯಾಕ್‌ ರಾಹುಲ್‌ಗಾಂಧಿ’ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು’ ಎಂದು ವರದಿ ಜಾರಿ ಹೋರಾಟ ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ, ಉಪಾಧ್ಯಕ್ಷರಾದ ಎನ್‌.ಮೂರ್ತಿ ಮತ್ತು ಎಚ್‌.ಹನುಮಂತಪ್ಪ ತಿಳಿಸಿದರು.

‘ರಾಹುಲ್‌ ಗಾಂಧಿ ತಮ್ಮ ರಾಜ್ಯ ಪ್ರವಾಸವನ್ನು ಹೊಸಪೇಟೆಯಿಂದ ಆರಂಭಿಸಲಿದ್ದಾರೆ. ಅಲ್ಲಿ ಹಾಗೂ ಅವರು ಭೇಟಿ ನೀಡಲಿರುವ ಎಲ್ಲ ಸ್ಥಳಗಳಲ್ಲೂ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ಅದೇ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಧರಣಿ ನಡೆಸುತ್ತೇವೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೇಜವಾಬ್ದಾರಿ ಮಖ್ಯಮಂತ್ರಿ’: ‘ವರದಿ ಜಾರಿ ಕುರಿತು ಚರ್ಚಿಸಲು ಫೆ.3ರಂದು ಆಹ್ವಾನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯಿಂದ ಮಾತನಾಡಿದರು. ಅದಕ್ಕಾಗಿ ಆ ಸಭೆಯನ್ನು ಧಿಕ್ಕರಿಸಿ ಹೊರ ಬಂದ ಬಳಿಕ ಧರಣಿ ನಡೆಸಲು ನಿರ್ಧರಿಸಿದೆವು. ವರದಿ ಜಾರಿಗೆ ಶಿಫಾರಸು ಮಾಡದಿದ್ದರೆ ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಚಾರ ನಡೆಸುವೆವು. ಅಧಿಕಾರದಲ್ಲಿದ್ದಾಗ ವರದಿ ಜಾರಿಗೊಳಿಸದ ಬಿಜೆಪಿಗೂ ಏನು ಮಾಡಬೇಕು ಎಂಬುದು ನಮಗೆ ಗೊತ್ತು’ ಎಂದರು.

‘ಚುನಾವಣೆ ಘೋಷಣೆಗೆ ಮುನ್ನ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯದಲ್ಲಿ ಬಿಎಸ್‌ಪಿ ಜೊತೆಗೆ ತೃತೀಯ ರಂಗವನ್ನು ರಚಿಸುತ್ತೇವೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)