ಬುಧವಾರ, ಡಿಸೆಂಬರ್ 11, 2019
16 °C

ಸರ್ವರಿಗೂ ಸಮಪಾಲು–ಸಮಬಾಳು: ಕಾಂಗ್ರೆಸ್‌

Published:
Updated:
ಸರ್ವರಿಗೂ ಸಮಪಾಲು–ಸಮಬಾಳು: ಕಾಂಗ್ರೆಸ್‌

ಪ್ರಜಾವಾಣಿ ಕೇಳಿದ ಆರು ಪ್ರಶ್ನೆಗಳು

* ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಯಾವ ವಿಷಯಕ್ಕೆ ಆದ್ಯತೆ ದೊರೆಯಲಿದೆ?

*ಲೋಕಾಯುಕ್ತ ಬಲಪಡಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗುವುದೇ?

*ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆ ಭರವಸೆ ಕೊಡುತ್ತೀರಾ?

* ಹಿಂದಿನ ಪ್ರಣಾಳಿಕೆಯ ಎಷ್ಟು ಅಂಶಗಳು ಈ ಪ್ರಣಾಳಿಕೆಯಲ್ಲಿ ಪುನರಾವರ್ತನೆ ಆಗಲಿವೆ?

* ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಬಗ್ಗೆ ನಿಮ್ಮ ಪಕ್ಷದ ನಿಲುವೇನು?

* ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ರಾಜಕಾರಣದ ಬಗ್ಗೆ ಏನು ಹೇಳುತ್ತೀರಿ?

============

–ವೀರಪ್ಪ ಮೊಯಿಲಿ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ

* ಕಾಂಗ್ರೆಸ್‌ ಪ್ರಣಾಳಿಕೆ ಸಿದ್ಧತೆಗೆ ಪ್ರಮುಖ ಸಮಿತಿ ಇದೆ. ಅಲ್ಲದೆ, ಇದಕ್ಕೆ ಪೂರಕವಾಗಿ 15 ಉಪ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಕ್ಷೇತ್ರದ ಅಗತ್ಯ ಹಾಗೂ ಬೇಡಿಕೆಗಳ ಕುರಿತು ಅಧ್ಯಯನ ನಡೆಸಲಾಗಿದೆ. ವಲಯವಾರು ಸಭೆಗಳನ್ನು ಮಾಡಲಾಗಿದೆ. ಸಚಿವರು, ಶಾಸಕರು, ಜಿಲ್ಲೆ, ತಾಲ್ಲೂಕು, ಬ್ಲಾಕ್‌ ಸಮಿತಿ ಪ್ರಮುಖರು, ವಿವಿಧ ಸಂಘ– ಸಂಸ್ಥೆಗಳ ಸದಸ್ಯರು, ನೀರಾವರಿ ತಜ್ಞರು, ವಾಣಿಜ್ಯೋದ್ಯಮ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣ ತಜ್ಞರು, ವಿ.ವಿಗಳ ಕುಲಪತಿಗಳು, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಮಹಿಳೆಯರು, ಮಕ್ಕಳ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಸಲಹೆ–ಸೂಚನೆಗಳನ್ನು ನೀಡಿದ್ದಾರೆ. ಎಲ್ಲರ ಸಲಹೆಗಳನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ.

* ನಾವು ಖಂಡಿತವಾಗಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವುದಕ್ಕೆ ಒತ್ತು ಕೊಡುತ್ತೇವೆ. ನಿಯಮಿತವಾಗಿ ಈ ಬಗ್ಗೆ ಪರಾಮರ್ಶೆ ನಡೆಸುವುದಕ್ಕೂ ಬದ್ಧರಾಗಿದ್ದೇವೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಯೋಜನಾ ಆಯೋಗದ ಸ್ವರೂಪವನ್ನೇ ಬದಲಿಸಿ ದುರ್ಬಲಗೊಳಿಸಿದೆ. ಕಾಂಗ್ರೆಸ್‌ ನಿಲುವು ಇದಕ್ಕೆ ತದ್ವಿರುದ್ಧವಾಗಿದೆ. ವರ್ಷಕ್ಕೆ ಇಂತಿಷ್ಟು ದಿನ ವಿಧಾನ ಮಂಡಲ ಅಧಿವೇಶನ ನಡೆಯಲೇಬೇಕು ಎಂಬುದೂ ನಮ್ಮ ಅಪೇಕ್ಷೆ. ಇದನ್ನೂ ಕಡ್ಡಾಯ ಮಾಡುವ ಚಿಂತನೆ ಇದೆ.

* ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಇಂದು, ನಿನ್ನೆಯದಲ್ಲ. ಬಹಳ ವರ್ಷಗಳಿಂದಲೂ ಇದೆ. ಈ ಸಮುದಾಯವನ್ನು ಸಿದ್ದರಾಮಯ್ಯ ಇಬ್ಭಾಗ ಮಾಡಲು ಯತ್ನಿಸಲಿಲ್ಲ. ಈ ಎರಡೂ ಪಂಗಡಗಳ ನಡುವೆ ಮೊದಲಿಂದಲೂ ಭಿನ್ನಾಭಿಪ್ರಾಯಗಳಿವೆ

* ಭ್ರಷ್ಟಾಚಾರ ಆರೋಪ ಎದುರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಬಿಜೆಪಿಯ ನಾಲ್ಕೈದು ಸಚಿವರೂ ಸೆರೆವಾಸ ಅನುಭವಿಸಿದರು. ಗಣಿ ಹಗರಣದ ಸೂತ್ರಧಾರ ಜನಾರ್ದನ ರೆಡ್ಡಿ ಬಳ್ಳಾರಿಗೇ ಹೋಗುವಂತಿಲ್ಲ. ಹೀಗಿದ್ದರೂ, ಸಿದ್ದರಾಮಯ್ಯ ಮತ್ತು ಅವರ ಸಚಿವರ ಮೇಲೆ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಿಬಿಐನಂತಹ ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆಯಾಗಿದ್ದಾಗ್ಯೂ ನಮ್ಮ ಯಾವ ನಾಯಕರು ಜೈಲಿಗೆ ಹೋಗಿಲ್ಲ. ರಾಜ್ಯದಲ್ಲಿ ನಮ್ಮ ಆಡಳಿತ ಹೇಗಿದೆ ಎಂದು ಅಳೆಯಲು ಇದೊಂದೇ ಉದಾಹರಣೆ ಸಾಕಲ್ಲವೆ. ನಮ್ಮ ಬೆನ್ನು ನಾವು ತಟ್ಟಿಕೊಳ್ಳದೆ ಇನ್ನೂ ಸ್ವಚ್ಛ ಆಡಳಿತ ಕೊಡುವ ಕಡೆ ಗಮನ ಕೊಡುತ್ತೇವೆ. ಈ ಬಗ್ಗೆ ಪ್ರಣಾಳಿಕೆಯಲ್ಲೂ ವಾಗ್ದಾನ ಮಾಡುತ್ತೇವೆ.

* ನಮ್ಮದು ಸಾಮಾಜಿಕ ಕಳಕಳಿಯ ಜಾತ್ಯತೀತ ಪಕ್ಷ. ಸರ್ವರಿಗೂ ಸಮಪಾಲು– ಸಮಬಾಳು ಎಂಬ ಧ್ಯೇಯ ಹೊಂದಿರುವ ನಾವು ಜಾತಿ, ಧರ್ಮದ ವಿಷಯವನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವುದಿಲ್ಲ. ಎಲ್ಲ ಸಮುದಾಯಗಳ ಅಭಿವೃದ್ಧಿಯೊಂದೇ ನಮ್ಮ ಮೂಲಮಂತ್ರವಾಗಲಿದೆ.

ಇನ್ನಷ್ಟು ಓದು:

ಒಡೆದಾಳುವ ಸಂಸ್ಕೃತಿಗೆ ತಿಲಾಂಜಲಿ –ಎಸ್. ಸುರೇಶ್ ಕುಮಾರ್, ಬಿಜೆಪಿ ಪ್ರಣಾಳಿಕೆ ಸಮಿತಿ ಮುಖ್ಯಸ್ಥ

ಜನಪರ ಸರ್ಕಾರಕ್ಕೆ ಒತ್ತು –ರಮೇಶ್‌ ಬಾಬು, ಜೆಡಿಎಸ್‌ ವಕ್ತಾರ

ಪ್ರತಿಕ್ರಿಯಿಸಿ (+)