ಶುಕ್ರವಾರ, ಡಿಸೆಂಬರ್ 6, 2019
24 °C

ಒಡೆದಾಳುವ ಸಂಸ್ಕೃತಿಗೆ ತಿಲಾಂಜಲಿ

Published:
Updated:
ಒಡೆದಾಳುವ ಸಂಸ್ಕೃತಿಗೆ ತಿಲಾಂಜಲಿ

ಪ್ರಜಾವಾಣಿ ಕೇಳಿದ ಆರು ಪ್ರಶ್ನೆಗಳು

* ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಯಾವ ವಿಷಯಕ್ಕೆ ಆದ್ಯತೆ ದೊರೆಯಲಿದೆ?

*ಲೋಕಾಯುಕ್ತ ಬಲಪಡಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗುವುದೇ?

*ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆ ಭರವಸೆ ಕೊಡುತ್ತೀರಾ?

* ಹಿಂದಿನ ಪ್ರಣಾಳಿಕೆಯ ಎಷ್ಟು ಅಂಶಗಳು ಈ ಪ್ರಣಾಳಿಕೆಯಲ್ಲಿ ಪುನರಾವರ್ತನೆ ಆಗಲಿವೆ?

* ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಬಗ್ಗೆ ನಿಮ್ಮ ಪಕ್ಷದ ನಿಲುವೇನು?

* ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ರಾಜಕಾರಣದ ಬಗ್ಗೆ ಏನು ಹೇಳುತ್ತೀರಿ?

============

–ಎಸ್. ಸುರೇಶ್ ಕುಮಾರ್, ಬಿಜೆಪಿ ಪ್ರಣಾಳಿಕೆ ಸಮಿತಿ ಮುಖ್ಯಸ್ಥ

* ಲೋಕಾಯುಕ್ತವನ್ನು ಈಗಿನ ಸರ್ಕಾರ ದುರ್ಬಲಗೊಳಿಸಿದ್ದರಿಂದಾಗಿ ಭ್ರಷ್ಟಾಚಾರ ನಿಗ್ರಹಿಸಲು ಅಂಕುಶವೇ ಇಲ್ಲವಾಗಿದೆ. ಅದಕ್ಕೆ ಶಕ್ತಿ ತುಂಬುವ ವಿಷಯ ಖಂಡಿತಾ ಇರಲಿದೆ.

*ಒಳಮೀಸಲಾತಿ ವಿಷಯ ಸೇರಿಸಬೇಕೇ ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮಹದಾಯಿ ನದಿ ನೀರಿನ ವಿಷಯದಲ್ಲಿ ನ್ಯಾಯಮಂಡಳಿ ಅಂತಿಮ ವಿಚಾರಣೆ ಆರಂಭಿಸಿದೆ. ಕೋರ್ಟ್‌ ಹಾಗೂ ನ್ಯಾಯಮಂಡಳಿ ಹೊರಗೆ, ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ. ಪ್ರಣಾಳಿಕೆ ಬಿಡುಗಡೆಯಾಗುವ ಹೊತ್ತಿಗೆ ಈ ವಿಷಯ ಪ್ರಸ್ತಾಪಿಸುವ ಅವಶ್ಯಕತೆ ಇರಲಿಕ್ಕಿಲ್ಲ.

*ಭ್ರಷ್ಟಾಚಾರ ಆಪಾದನೆ ಸಾಮಾನ್ಯ. ಆದರೆ, ಕೋರ್ಟ್‌ಗಳಲ್ಲಿ ಅದು ಋಜುವಾತಾಗಬೇಕು. ಆರೋಪ ಸಾಬೀತಾಗಿ ಲಾಲು ಪ್ರಸಾದ್ ರೀತಿ ಜೈಲು ಸೇರಿದರೆ ಅದು ತಪ್ಪು ಎನ್ನಬಹುದು. ಇಲ್ಲದಿದ್ದರೆ ಕೇವಲ ರಾಜಕಾರಣದ ಭಾಗವಾಗಿ ನಡೆದ ಪ್ರಕರಣಗಳಾಗುತ್ತವೆ. ನಮ್ಮ ಪಕ್ಷದ ಕೆಲವರ ಮೇಲಿದ್ದ ಆರೋಪಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್  ಆರೋಪ ಮುಕ್ತಗೊಳಿಸಿವೆ. ಹಾಗಿದ್ದರೂ ನಮ್ಮ ನಾಯಕರ ಮೇಲೆ ಅನಗತ್ಯವಾಗಿ ಕಳಂಕ ಉಳಿದಿದೆ. ರಾಜಕೀಯ ಕಾರಣಕ್ಕೆ ಇಂತಹ ಪ್ರಕರಣಗಳನ್ನು ಎದುರಿಸಬೇಕಾಗಿದೆ ಎಂದು ಜನರಿಗೆ ಮನವರಿಕೆ ಮಾಡುವ ದೊಡ್ಡ ಸವಾಲು ಇದೆ.

*ಲಿಂಗಾಯತ ಧರ್ಮದ ವಿಷಯ ಪ್ರಣಾಳಿಕೆಯಲ್ಲಿ ಇರುವುದಿಲ್ಲ. ಒಂದಾಗಿದ್ದ ಸಮುದಾಯವನ್ನು ಒಡೆಯುವುದಕ್ಕಾಗಿ ಈ ವಿಷಯವನ್ನು ಮುಂಚೂಣಿಗೆ ತರಲಾಗಿದೆ. ಪ್ರಶಾಂತ ಸರೋವರದಲ್ಲಿ ಕಲ್ಲು ಎಸೆದು ರಾಡಿ ಮಾಡುವ ಕೆಲಸ ಇದು. ವೀರಶೈವ– ಲಿಂಗಾಯತ ಎರಡೂ ಒಂದೇ, ಅವರನ್ನು ಒಡೆಯಬೇಡಿ ಎಂಬುದು ನಮ್ಮ ಪಕ್ಷದ ನಿಲುವು. ಇದು ಪ್ರಣಾಳಿಕೆಯಲ್ಲೂ ಧ್ವನಿಸಲಿದೆ.

*2008ರಲ್ಲಿ ನಾವು ಸರ್ಕಾರ ಮಾಡಿದ್ದೆವು. ಆ ಚುನಾವಣೆಯ ಪ್ರಣಾಳಿಕೆಯಲ್ಲಿದ್ದ ಭರವಸೆಗಳನ್ನು ಆಧರಿಸಿ ಜಾರಿಗೊಳಿಸಿದ ಯೋಜನೆಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ವಿಷಯ ಸೇರಬಹುದು. 2013ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಆಗ ಪ್ರಸ್ತಾಪಿಸಿದ್ದ ವಾಗ್ದಾನಗಳ ಪೈಕಿ ಪ್ರಸ್ತುತ ಎನಿಸುವ ಭರವಸೆಗಳನ್ನು ಉಳಿಸಿಕೊಳ್ಳಲಾಗುವುದು.

*ನಮ್ಮ ಪಕ್ಷಕ್ಕೆ ಒಂದು ಸಿದ್ಧಾಂತ ಇದೆ. ಲೋಕಸಭೆ ಚುನಾವಣೆ ವೇಳೆ ಅಯೋಧ್ಯೆ ಹಾಗೂ ತ್ರಿವಳಿ ತಲಾಖ್ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದನ್ನು ಕೋಮುವಾದ ಎಂದರೆ ನಾವೇನು ಮಾಡಲು ಸಾಧ್ಯ. ಸರ್ವ ಜನಾಂಗದ ಹಿತ, ಒಳಿತಿನ ದೃಷ್ಟಿಯಿಂದ ನಮ್ಮ ಪಕ್ಷ ಕೆಲವೊಂದು ಸಂಗತಿಗಳನ್ನು ನಂಬಿಕೊಂಡು ಬಂದಿದೆ. ಆ ಮೂಲಭೂತ ನಂಬಿಕೆಯ ಪ್ರಸ್ತಾಪ ಪ್ರಣಾಳಿಕೆಯಲ್ಲಿ ಇರಲಿದೆ.

ಇನ್ನಷ್ಟು ಓದು: 

ಜನಪರ ಸರ್ಕಾರಕ್ಕೆ ಒತ್ತು –ರಮೇಶ್‌ ಬಾಬು, ಜೆಡಿಎಸ್‌ ವಕ್ತಾರ

ಸರ್ವರ ಅಭ್ಯುದಯವೇ ಕಾಂಗ್ರೆಸ್‌ ಧ್ಯೇಯ –ವೀರಪ್ಪ ಮೊಯಿಲಿ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)