ಗುರುವಾರ , ಡಿಸೆಂಬರ್ 12, 2019
25 °C

ಆರ್‌ಬಿಐ ಬಡ್ಡಿ ದರ ಯಥಾಸ್ಥಿತಿ

Published:
Updated:
ಆರ್‌ಬಿಐ ಬಡ್ಡಿ ದರ ಯಥಾಸ್ಥಿತಿ

ಮುಂಬೈ: ಅಲ್ಪಾವಧಿ ಬಡ್ಡಿ ದರಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರೀಕ್ಷೆಯಂತೆ ಈ ಬಾರಿಯೂ ಯಥಾಸ್ಥಿತಿ ಕಾಯ್ದುಕೊಂಡಿದೆ.

ಬಡ್ಡಿ ದರ ಬದಲಾಯಿಸದಿರುವುದಕ್ಕೆ ಹಣದುಬ್ಬರ ಹೆಚ್ಚಳ ಮತ್ತು ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಏರಿಕೆಯ ಕಾರಣಗಳನ್ನು ನೀಡಲಾಗಿದೆ.

ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರವಾಗಿರುವ ರೆಪೊ ದರವನ್ನು ಶೇ 6 ಮತ್ತು  ವ್ಯವಸ್ಥೆಯಲ್ಲಿನ ಹೆಚ್ಚುವರಿ ನಗದು ಪ್ರಮಾಣ ತಗ್ಗಿಸಲು ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ (ರಿವರ್ಸ್‌ ರೆಪೊ) ಶೇ 5.75ರಲ್ಲಿ ಸತತ ಮೂರನೇ ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ.

‘ಹಣದುಬ್ಬರ ಹೆಚ್ಚಳದ ಮೇಲೆ ಹಲವಾರು ಅನಿಶ್ಚಿತತೆಗಳ ಕಾರ್ಮೋಡ ಕವಿದಿದೆ. 7ನೇ ವೇತನ ಆಯೋಗದ ಜಾರಿ, ಕಚ್ಚಾ ತೈಲ ಬೆಲೆ ಏರಿಕೆ, ಕಸ್ಟಮ್ಸ್‌ ಸುಂಕ ಹೆಚ್ಚಳ ಮತ್ತು ಕೇಂದ್ರ ಸರ್ಕಾರವು ತನ್ನ ವಿತ್ತೀಯ ಕೊರತೆಯನ್ನು ಶೇ 3.5ಕ್ಕೆ ನಿಗದಿಪಡಿಸಿರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ’ ಎಂದು 6 ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಹೇಳಿದೆ.

ಎರಡು ದಿನಗಳವರೆಗೆ ಸಭೆ ಸೇರಿದ ಚರ್ಚಿಸಿದ ‘ಎಂಪಿಸಿ’, ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಬುಧವಾರ ಇಲ್ಲಿ ಪ್ರಕಟಿಸಿತು.

ವಿತ್ತೀಯ ಕೊರತೆ ಹೆಚ್ಚಳದ ಕಾರಣಕ್ಕೆ ಸಾಲದ ಮೇಲಿನ ವೆಚ್ಚ ಏರಿಕೆಯಾಗಿ ಹಣದುಬ್ಬರಕ್ಕೆ ಇಂಬು ನೀಡುತ್ತದೆ. ಆಹಾರ ಧಾನ್ಯಗಳ ಖರೀದಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾರದ ಪರಿಣಾಮಗಳನ್ನು ಅಂದಾಜಿಸುವುದು ಸದ್ಯಕ್ಕೆ ಅವಸರದ ತೀರ್ಮಾನ ಆಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಹಣದುಬ್ಬರ ಹೆಚ್ಚಳ:

2017–18ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಹಣದುಬ್ಬರ ಶೇ 5.1ರಷ್ಟು ಇರಲಿದೆ. ಮುಂದಿನ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 5.6ರವರೆಗೆ ಏರಿಕೆ ಕಾಣಲಿದೆ ಎಂದೂ ಆರ್‌ಬಿಐ ಅಂದಾಜಿಸಿದೆ.

ವೃದ್ಧಿ ದರ ಇಳಿಕೆ: ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನೂ (ಜಿಡಿಪಿ) ಆರ್‌ಬಿಐ, ಈ ಮೊದಲಿನ ಶೇ 6.7 ರಿಂದ ಶೇ 6.6ಕ್ಕೆ ತಗ್ಗಿಸಿದೆ. 2018–19ರಲ್ಲಿ ಇದು ಶೇ 7.2ಕ್ಕೆ ಏರಿಕೆಯಾಗಲಿದೆ ಎಂದೂ ಹೇಳಿದೆ.

ಪ್ರತಿಕ್ರಿಯಿಸಿ (+)