104 ಸಹಾಯವಾಣಿ: ಮೊದಲ ದಿನವೇ 6 ಸಾವಿರ ಕರೆ

7

104 ಸಹಾಯವಾಣಿ: ಮೊದಲ ದಿನವೇ 6 ಸಾವಿರ ಕರೆ

Published:
Updated:

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿ.ವಿ.ರಾಮನ್ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಪ್ರಾರಂಭಿಸಿದ 104 ಆರೋಗ್ಯ ಸಹಾಯವಾಣಿ ಕೇಂದ್ರಕ್ಕೆ ಮೊದಲ ದಿನವೇ 6,000 ಕರೆಗಳು ಬಂದಿವೆ.

ಔಷಧಿಗಳ ಬಳಸುವ ಬಗ್ಗೆ ತಿಳಿದುಕೊಳ್ಳಲು, ವೈದ್ಯಕೀಯ ವೃತ್ತಿನಿರತರ ವಿರದ್ಧ ದೂರು ದಾಖಲಿಸಲು, ಒತ್ತಡ ನಿವಾರಣೆಗೆ ಏನು ಮಾಡಬೇಕು... ಹೀಗೆ ವಿವಿಧ ವೈದ್ಯಕೀಯ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಕುರಿತು ಜನ ಪ್ರಶ್ನೆಗಳನ್ನು ಕೇಳಿದ್ದಾರೆ.

ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಆರೋಗ್ಯ ಸಚಿವ ಕೆ.ಆರ್. ರಮೇಶ್‌ ಕುಮಾರ್‌,‘ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಪ್ರೀತಿಯಿಂದ, ಗೌರವಯುತವಾಗಿ ಚಿಕಿತ್ಸೆ ನೀಡಿದರೆ ಖಾಸಗಿ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಸಹಜವಾಗಿ ಕಡಿಮೆಯಾಗುತ್ತದೆ’ ಎಂದು ತಿಳಿಸಿದರು.

‘ಹುಬ್ಬಳ್ಳಿ ಕೇಂದ್ರದಲ್ಲಿ ಕರೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರಿನಲ್ಲಿ ಕೇಂದ್ರ ಪ್ರಾರಂಭಿಸಿದ್ದೇವೆ. ಶೀಘ್ರದಲ್ಲಿ ರಾಯಚೂರಿನಲ್ಲಿಯೂ ಕೇಂದ್ರ ಆರಂಭಗೊಳ್ಳಲಿದೆ. ಸಣ್ಣಪುಟ್ಟ ಕಾಯಿಲೆಗಳ ಕುರಿತು ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಕುರಿತು ಮಾಹಿತಿ, ವೈದ್ಯಕೀಯ ಅದಾಲತ್‌, ಆಪ್ತ ಸಮಾಲೋಚನೆ ಹಾಗೂ ಆರೋಗ್ಯ ಕಾರ್ಯಕ್ರಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗುತ್ತದೆ’ ಎಂದರು.

ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯುತ್ತಿದೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಎಂಆರ್‌ಟಿ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಜೋಡಿಸುವ ಜತೆಗೆ ಲ್ಯಾಬ್‌ಗಳನ್ನು ಉನ್ನತೀಕರಿಸಿ, ಬೇಕಾದ ಪರಿಕರಗಳನ್ನು ನೀಡಲಿದ್ದೇವೆ ಎಂಬ ಭರವಸೆ ನೀಡಿದರು.

ಅಂಕಿ ಅಂಶ

25 ಸಾವಿರ -ಹುಬ್ಬಳ್ಳಿ ಸಹಾಯವಾಣಿಗೆ ಪ್ರತಿದಿನ ಬರುವ ಕರೆಗಳ ಸಂಖ್ಯೆ

2.80 ಕೋಟಿ -ಎರಡು ವರ್ಷಗಳಲ್ಲಿ ಸ್ವೀಕರಿಸಿರುವ ಕರೆಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry