ಬುಧವಾರ, ಡಿಸೆಂಬರ್ 11, 2019
26 °C

ಶಕ್ತಿಶಾಲಿ ರಾಕೆಟ್ ಉಡಾವಣೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶಕ್ತಿಶಾಲಿ ರಾಕೆಟ್ ಉಡಾವಣೆ

ಕೇಪ್‌ ಕ್ಯಾನವೆರಲ್(ಎಎಫ್‌ಪಿ): ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್‌ ‘ಫಾಲ್ಕನ್ ಹೆವಿ’  ಅನ್ನು ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಈ ರಾಕೆಟ್‌ ಮಂಗಳ ಗ್ರಹಕ್ಕೆ ಸಮೀಪದ ಕಕ್ಷೆ ತಲುಪುವ ಗುರಿ ಹೊಂದಿದೆ. ಇದನ್ನು ಅಮೆರಿಕದ ಖಾಸಗಿ ವಿಮಾನ ತಯಾರಿಕಾ ಸಂಸ್ಥೆ ‘ಸ್ಪೇಸ್‌ಎಕ್ಸ್‌’ (ಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಟೆಕ್ನಾಲಜೀಸ್ ಕಾರ್ಪೊರೇಷನ್‌) ತಯಾರಿಸಿದೆ.

ಸಂಸ್ಥೆಯ ಸಿಇಒ ಎಲೊನ್‌ ಮಸ್ಕ್‌ ಅವರ ಟೆಸ್ಲಾ ಸ್ಪೋರ್ಟ್ಸ್‌ ಕಾರನ್ನು ಪ್ರಾಯೋಗಿಕ ಉಪಕರಣವನ್ನಾಗಿ ಕಳುಹಿಸಲಾಗಿದೆ. ಜತೆಗೆ, ಗಗನಯಾನಿಗಳ ಉಡುಗೆ ತೊಡಿಸಿರುವ ಗೊಂಬೆಯೂ ಈ ರಾಕೆಟ್‌ನಲ್ಲಿದೆ.

‘ಫಾಲ್ಕನ್ ಹೆವಿ’ ಒಟ್ಟು 27 ಎಂಜಿನ್‌ಗಳನ್ನು ಒಳಗೊಂಡಿದೆ. ಜತೆಗೆ ಸಹಾಯಕ ರಾಕೆಟ್‌ಗಳನ್ನೂ ಒಳಗೊಂಡಿದೆ. ‘ಈ ರಾಕೆಟ್‌ ಉಡಾವಣೆಯ ಯಶಸ್ಸು ಅದ್ಭುತ. ಜತೆಗೆ ಸೋಲು ಉಂಟಾದರೆ ಅದು ಸಹ ಅದ್ಭುತ’ ಎಂದು ಸಂಸ್ಥೆಯ ಸಿಇಒ ಮಸ್ಕ್‌ ಪ್ರತಿಕ್ರಿಯಿಸಿದ್ದಾರೆ.

ಈ ರಾಕೆಟ್ ಉಡಾವಣೆ ಯಶಸ್ವಿಯಾದರೆ, ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಶಕ್ತಿಶಾಲಿ ರಾಕೆಟ್‌ ಎನಿಸಲಿದೆ. ಹೆಚ್ಚು ಭಾರ ಹೊರುವ ಸಾಮರ್ಥ್ಯ ತನ್ನದಾಗಿಸಿಕೊಳ್ಳಲಿದೆ. 1967ರಿಂದ 1973ರ ಅವಧಿಯಲ್ಲಿ ಅಮೆರಿಕದ ‘ನಾಸಾ’ ಉಡಾವಣೆ ಮಾಡಿದ್ದ ‘ಸ್ಯಾಟರ್ನ್ 5’ ಸರಣಿಯ ರಾಕೆಟ್‌ಗಳು ಇದುವರೆಗಿನ ಅತ್ಯಂತ ಶಕ್ತಿಶಾಲಿ ರಾಕೆಟ್‌ಗಳು ಎನಿಸಿದ್ದವು.

ಚಂದ್ರ ಅಥವಾ ಮಂಗಳ ಗ್ರಹಕ್ಕೆ ಮಾನವಸಹಿತ ರಾಕೆಟ್‌ ಉಡಾವಣೆ ಮಾಡಲು ಅನುವಾಗುವಂತೆ ಇದನ್ನು ನಿರ್ಮಿಸಲಾಗಿದೆ. ಮರುಬಳಕೆ ತಂತ್ರಜ್ಞಾನವನ್ನೂ ಬಳಸಲಾಗಿದೆ.

ಫಾಲ್ಕನ್‌ ರಾಕೆಟ್‌ ವಿವರ

27

ಎಂಜಿನ್‌ಗಳ ಸಂಖ್ಯೆ

63,500 ಕೆಜಿ ಭಾರ ಹೊರುವ ಸಾಮರ್ಥ್ಯ

₹578 ಕೋಟಿ

ಪ್ರತಿ ಉಡಾವಣೆಗೆ ಆಗುವ ಖರ್ಚು

ಪ್ರತಿಕ್ರಿಯಿಸಿ (+)