ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಮನಮೋಹಕ ಶತಕ

ಕರ್ನಾಟಕ ಶುಭಾರಂಭ; ಬರೋಡಾಕ್ಕೆ ನಿರಾಸೆ
Last Updated 7 ಫೆಬ್ರುವರಿ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ಮಯಂಕ್ ಅಗರವಾಲ್ ಗಳಿಸಿದ ಮೋಹಕ ಶತಕದ ಬಲದಿಂದ ಕರ್ನಾಟಕ ತಂಡವು ಬುಧವಾರ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬರೋಡಾ ವಿರುದ್ಧ 85 ರನ್‌ಗಳಿಂದ ಜಯಿಸಿತು.

ಈ ಬಾರಿಯ ರಣಜಿ ಟೂರ್ನಿಯಲ್ಲಿ 1160 ರನ್‌ಗಳನ್ನು ಗಳಿಸಿದ್ದ ಮಯಂಕ್ (109; 90ಎ, 14ಬೌಂ, 2ಸಿ). ಏಕದಿನ ಟೂರ್ನಿಯ ಅಭಿಯಾನವನ್ನು ಶತಕದೊಂದಿಗೆ ಆರಂಭಿಸಿದರು. ರಾಜಾನುಕುಂಟೆಯ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದೀಪಕ್ ಹೂಡಾ ಬಳಗದ ಲೆಕ್ಕಾಚಾರ ಬುಡಮೇಲಾಯಿತು.

ವಿನಯ್ ಬಳಗವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 312 ರನ್‌ಗಳನ್ನು ಗಳಿಸಿತು. ಗುರಿ ಬೆನ್ನತ್ತಿದ ಪ್ರವಾಸಿ ತಂಡಕ್ಕೆ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ (42ಕ್ಕೆ4) ಮತ್ತು ಸಂಜೆ ಸುರಿದ ಮಳೆ ಅಡ್ಡಿಯಾದವು. ತಂಡವು 37 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 180 ರನ್‌ ಗಳಿಸಿದ್ದಾಗ ಮಳೆ ಆರಂಭವಾಯಿತು. ನಂತರ ಆಟವನ್ನು ರದ್ದುಗೊಳಿಸಲಾಯಿತು. ದೇಶಿ ಕ್ರಿಕೆಟ್‌ನಲ್ಲಿ ಬಳಸಲಾಗುವ ವಿ. ಜಯದೇವನ್ (ವಿ.ಜೆ.ಡಿ) ನಿಯಮದನ್ವಯ ಕರ್ನಾಟಕ ತಂಡವನ್ನು ವಿಜಯೀ ಎಂದು ಘೋಷಿಸಲಾಯಿತು.

ಮಯಂಕ್ ಶತಕದ ಸೊಬಗು: ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡಿದ ಪಿಚ್‌ನಲ್ಲಿ ಕೆ.ಎಲ್. ರಾಹುಲ್ ಅವರೊಂದಿಗೆ ಕಣಕ್ಕಿಳಿದ ಮಯಂಕ್ ಆರಂಭದಿಂದಲೇ ಆತ್ಮವಿಶ್ವಾಸದಿಂದ ಆಡಿದರು. ಆದರೆ ರಾಹುಲ್ ಲಯ ಕಂಡುಕೊಳ್ಳಲಿಲ್ಲ. 18 ಎಸೆತಗಳನ್ನು ಎದುರಿಸಿ ಮೂರು ರನ್ ಗಳಿಸಿದರು. ಐದನೇ ಓವರ್‌ನಲ್ಲಿ ಅತಿಥ್ ಶೇಟ್ ಅವರ ಎಸೆತವನ್ನು ಕೆಣಕಿ ವಿಕೆಟ್‌ಕೀಪರ್ ಊರ್ವಿಲ್ ಪಟೇಲ್‌ಗೆ ಕ್ಯಾಚಿತ್ತರು. ನಂತರ ಕರುಣ್ ನಾಯರ್ ಜೊತೆಗೂಡಿದ ಮಯಂಕ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 63 ರನ್‌ ಸೇರಿಸಿದರು. 16ನೇ ಓವರ್‌ನಲ್ಲಿ ಮಧ್ಯಮವೇಗಿ ಅತಿಥ್ ಅರೊತೆ ಎಸೆತದಲ್ಲಿ ಕರುಣ್ ನಾಯರ್ (19 ರನ್) ವಿಕೆಟ್‌ಕೀಪರ್‌ಗೆ ಕ್ಯಾಚಿತ್ತಾಗ ಜೊತೆಯಾಟ ಮುರಿಯಿತು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಆರ್. ಸಮರ್ಥ್ (77; 69ಎ, 7ಬೌಂ 1ಸಿ) ತಮ್ಮ ಎಂದಿನ ಲಯಬದ್ಧ ಆಟಕ್ಕೆ ಕುದುರಿ ಕೊಂಡರು. ಮಯಂಕ್ ಜೊತೆಗೆ ಸುಂದರ ಇನಿಂಗ್ಸ್ ಕಟ್ಟಿದರು. ಮಯಂಕ್ 79 ಎಸೆತಗಳಲ್ಲಿ ಶತಕ ಪೂರೈಸಿದರು. ಕೃಣಾಲ್ ಪಾಂಡ್ಯ ಅವರ ಒಂದೇ ಓವರ್‌ನಲ್ಲಿ 16 ರನ್ ಗಳಿಸಿದ ಮಯಂಕ್ ಮಿಂಚಿದರು. ಆಕರ್ಷಕ ಡ್ರೈವ್‌ಗಳ ಮೂಲಕ ಬೌಂಡರಿಗಳನ್ನು ಗಳಿಸಿ ಫೀಲ್ಡರ್‌ಗಳ ಮೇಲೆ ಒತ್ತಡ ಹೇರಿದರು. ಇನ್ನೊಂದೆಡೆ ಸಮರ್ಥ್ 53 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿ ಸಂಭ್ರಮಿಸಿದರು. ಇವರಿಬ್ಬರೂ  ಮೂರನೇ ವಿಕೆಟ್ ಜೊತೆಯಾಟದಲ್ಲಿ 95 ರನ್ ಪೇರಿಸಿದರು. 30ನೇ ಓವರ್‌ ನಲ್ಲಿ ಮಯಂಕ್ ಚೆಂಡನ್ನು ಬೌಂಡರಿಗೆ ಕಳಿಸಲು ಬ್ಯಾಟ್ ಬೀಸಿ ದಂಡ ತೆತ್ತರು. ಸುಂದರ ಇನಿಂಗ್ಸ್‌ಗೆ ತೆರೆ ಬಿತ್ತು.

(ಆರ್. ಸಮರ್ಥ್)

ಪವನ್–ಸಮರ್ಥ್ ಆಟ: ಧಾರವಾಡದ ಪವನ್ ದೇಶಪಾಂಡೆ ಮತ್ತು ಸಮರ್ಥ್ ಜೊತೆಗೂಡಿ ತಂಡದ ಮೊತ್ತ ಗಳಿಕೆಯ ವೇಗ ಹೆಚ್ಚಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಪೇರಿಸಿದರು. ಎಡಗೈ ಆಟಗಾರ ಪವನ್ (27; 30ಎ) ಬೀಸಾಟವಾಡಿದರು. ಅವರು ಔಟಾದ ನಂತರ  ಸಿ.ಎಂ. ಗೌತಮ್ ಮತ್ತು ಸಮರ್ಥ್ ಬೇಗನೆ ಪೆವಿಲಿಯನ್ ಸೇರಿದರು. ಕ್ರೀಸ್‌ಗೆ ಬಂದ ನಾಯಕ ವಿನಯಕುಮಾರ್ ( ಔಟಾಗದೆ 34; 21ಎ, 4ಬೌಂ, 1ಸಿ) ಮತ್ತು ಶ್ರೇಯಸ್ ಗೋಪಾಲ್ ಸೇರಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ರಣಜಿ ಟೂರ್ನಿಯಲ್ಲಿ 34 ವಿಕೆಟ್ ಗಳಿಸಿ ಮಿಂಚಿದ್ದ ಕೃಷ್ಣಪ್ಪ ಗೌತಮ್ ಇಲ್ಲಿಯೂ ಕೈಚಳಕ ತೋರಿದರು. ಉತ್ತಮವಾಗಿ ಆರಂಭ ಮಾಡಿದ್ದ ದೀಪಕ್ ಹೂಡಾ ಬಳಗದ ಗೆಲುವಿನ ಕನಸಿಗೆ ಅಡ್ಡಿಯಾದರು. ಎಸ್. ಅರವಿಂದ್ ಬದಲು ಸ್ಥಾನ ಪಡೆದಿದ್ದ ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಕೂಡ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT