ಭಾನುವಾರ, ಡಿಸೆಂಬರ್ 8, 2019
24 °C
ಮೂರನೇ ಪಂದ್ಯ: ದಾಖಲೆಗಳನ್ನು ಕೆಡವಿದ ನಾಯಕ

ದಾಖಲೆ ಜಯಕ್ಕೆ ಕೊಹ್ಲಿ ಶತಕದ ಬಲ

Published:
Updated:
ದಾಖಲೆ ಜಯಕ್ಕೆ ಕೊಹ್ಲಿ ಶತಕದ ಬಲ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿ ಸರಣಿಯೊಂದರಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಭಾರತದ ದಾಖಲೆಯ ಕನಸು ನನಸಾಯಿತು.

ನಾಯಕ ವಿರಾಟ್ ಕೊಹ್ಲಿ (160; 159ಎ, 2 ಸಿ, 12 ಬೌಂ ) ಗಳಿಸಿದ ಮೋಹಕ ಶತಕದ ನಂತರ ಜಸ್‌ಪ್ರೀತ್ ಬೂಮ್ರಾ ಮತ್ತು ಕುಲದೀಪ್ ಯಾದವ್ ತೋರಿದ ಅಮೋಘ ಸಾಮರ್ಥ್ಯದ ಬಲದಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 124 ರನ್‌ಗಳ ಜಯ ಗಳಿಸಿತು. ಈ ಮೂಲಕ ಆರು ಪಂದ್ಯಗಳ ಸರಣಿಯಲ್ಲಿ ಜಯದತ್ತ ಹೆಜ್ಜೆ ಹಾಕಿತು.

ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 304 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯರು ಕೇವಲ 179 ರನ್‌ಗಳಿಗೆ ಪತನಗೊಂಡಿತು.

ಸರಣಿ ಆರಂಭವಾಗುವ ಮುನ್ನ ಎಬಿ ಡಿವಿಲಿಯರ್ಸ್ ಗಾಯಗೊಂಡು ತಂಡದಿಂದ ದೂರ ಉಳಿಯಬೇಕಾಗಿತ್ತು. ನಂತರ ಫಾಫ್ ಡುಪ್ಲೆಸಿ ಕೂಡ ಇದೇ ಸಮಸ್ಯೆಗೆ ಒಳಗಾಗಿದ್ದರು. ಎರಡನೇ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ಕೂಡ ಗಾಯಗೊಂಡು ಮೂರನೇ ಪಂದ್ಯಕ್ಕೆ ಅಲಭ್ಯವಾಗಿದ್ದರು.

ನಿರ್ಣಾಯಕ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿತ್ತು. ಕ್ವಿಂಟನ್ ಡಿ ಕಾಕ್‌ ಬದಲಿಗೆ ವಿಕೆಟ್‌ ಕೀಪರ್‌ ಹೆನ್ರಿಕ್‌ ಕ್ಲಾಸೆನ್‌ ಕಣಕ್ಕಿಳಿದರೆ ಕ್ರಿಸ್ ಮಾರಿಸ್‌ ಬದಲಿಗೆ ಮಧ್ಯಮ ವೇಗಿ ಲುಂಗಿಸಾನಿ ಗಿಡಿಗೆ ಚೊಚ್ಚಲ ಏಕದಿನ ಪಂದ್ಯ ಆಡಲು ಅವಕಾಶ ನೀಡಲಾಗಿತ್ತು.

ಕೊಹ್ಲಿ–ಶಿಖರ್ ಧವನ್‌ ಭರ್ಜರಿ ಬ್ಯಾಟಿಂಗ್‌: ಟಾಸ್‌ ಗೆದ್ದ ಆತಿಥೇಯ ತಂಡದ ಹಂಗಾಮಿ ನಾಯಕ ಏಡನ್ ಮರ್ಕರಮ್‌ ಬೌಲಿಂಗ್ ಆಯ್ಕೆ ಮಾಡಿ ಕೊಂಡರು.

ರಬಾಡ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ ಅವರ ವಿಕೆಟ್ ಕಬಳಿಸಿದರು. ಮೂರನೇ ಓವರ್‌ನಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯು ಔಟ್‌ ಎಂದು ಅಂಪೈರ್ ಘೋಷಿಸಿದ್ದರು. ಆದರೆ ತೀರ್ಪು ಮರುಪರಿಶೀಲನೆ ಮಾಡಿದ ಭಾರತದ ನಾಯಕ ಬಚಾವಾದರು.

ನಂತರ ಅಮೋಘ ಬ್ಯಾಟಿಂಗ್ ಮಾಡಿದ ಅವರು ಬೌಲರ್‌ಗಳನ್ನು ನಿರಾಯಾಸವಾಗಿ ದಂಡಿಸಿದರು. ಶಿಖರ್ ಧವನ್‌ (76; 63 ಎ, 12 ಬೌಂ) ಜೊತೆಗೂಡಿ ಎರಡನೇ ವಿಕೆಟ್‌ಗೆ 140 ರನ್‌ಗಳನ್ನು ಸೇರಿಸಿದರು. ಸರಣಿಯ ಎರಡನೇ ಶತಕ ಗಳಿಸಿದ ಅವರಿಗೆ ಒಟ್ಟಾರೆ ಇದು 34ನೇ ಶತಕ. 159 ಎಸೆತಗಳಲ್ಲಿ 160 ರನ್ ಸಿಡಿಸಿದ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ವೈಯಕ್ತಿಕ ಮೊತ್ತ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದು ಅವರ ಎರಡನೇ ಅತ್ಯಧಿಕ ವೈಯಕ್ತಿಕ ಮೊತ್ತವೂ ಆಗಿದೆ. ಪಾಕಿಸ್ತಾನ ವಿರುದ್ಧ 2012ರಲ್ಲಿ ಅವರು 183 ರನ್‌ ಗಳಿಸಿದ್ದರು. ಅತಿ ಹೆಚ್ಚು ಶತಕ ಗಳಿಸಿದ ಭಾರತದ ನಾಯಕ ಎಂಬ ದಾಖಲೆಯೂ ಅವರ ಹೆಸರಿಗೆ ಸೇರಿತು. ನಾಯಕನಾಗಿ ಇದು ಅವರ 12ನೇ ಶತಕ.

ಸೌರವ್ ಗಂಗೂಲಿ 11 ಶತಕ ಗಳಿಸಿದ್ದಾರೆ. ಕೊಹ್ಲಿಗೆ ಉತ್ತಮ ಸಹಕಾರ ನೀಡಿದ ಶಿಖರ್‌ 63 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 76 ರನ್‌ ಗಳಿಸಿದರು.

ಧವನ್ ಔಟಾದ ನಂತರ ಇತರ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೂ ತಂಡದ ಮೊತ್ತ 300ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್

ಭಾರತ: 50 ಓವರ್‌ಗಳಲ್ಲಿ 6ಕ್ಕೆ 303 (ಶಿಖರ್ ಧವನ್‌ 76, ವಿರಾಟ್ ಕೊಹ್ಲಿ 160; ಜೆ.ಪಿ.ಡುಮಿನಿ 19ಕ್ಕೆ2); ದಕ್ಷಿಣ ಆಫ್ರಿಕಾ: 40 ಓವರ್‌ಗಳಲ್ಲಿ 179 (ಏಡನ್ ಮರ್ಕರಮ್‌ 32, ಜೆ.ಪಿ.ಡುಮಿನಿ 51, ಡೇವಿಡ್‌ ಮಿಲ್ಲರ್‌ 25; ಜಸ್‌ಪ್ರೀತ್ ಬೂಮ್ರಾ 32ಕ್ಕೆ2, ಯಜುವೇಂದ್ರ ಚಾಹಲ್‌ 46ಕ್ಕೆ4, ಕುಲದೀಪ್ ಯಾದವ್‌ 23ಕ್ಕೆ4). ಫಲಿತಾಂಶ: ಭಾರತಕ್ಕೆ 124 ರನ್‌ಗಳ ಜಯ; 6 ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ. ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ. ಮುಂದಿನ ಪಂದ್ಯ: ಫೆಬ್ರುವರಿ 10ರಂದು, ನ್ಯೂ ವಾಂಡರರ್ಸ್‌ ಕ್ರೀಡಾಂಗಣ.

ವೃತ್ತಿ ಜೀವನದ 34ನೇ ಶತಕ ಗಳಿಸಿದ ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ಹೆಚ್ಚು ವೈಯಕ್ತಿಕ ಮೊತ್ತ

ನಾಯಕನಾಗಿ ಹೆಚ್ಚು ಶತಕ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ

ಪ್ರತಿಕ್ರಿಯಿಸಿ (+)