ಸೋಮವಾರ, ಡಿಸೆಂಬರ್ 9, 2019
24 °C

ಭಾರತ ವನಿತೆಯರಿಗೆ ಸರಣಿ

Published:
Updated:
ಭಾರತ ವನಿತೆಯರಿಗೆ ಸರಣಿ

ಕಿಂಬರ್ಲಿ, ದಕ್ಷಿಣ ಆಫ್ರಿಕಾ: ಮೋಹಕ ಶತಕ ಸಿಡಿಸಿದ ಸ್ಮೃತಿ ಮಂದಾನ ಭಾರತ ತಂಡದ ಅಮೋಘ ಜಯಕ್ಕೆ ಕಾರಣರಾದರು.

ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಪೂನಮ್ ಯಾದವ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಮಿಥಾಲಿ ರಾಜ್ ಬಳಗ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗೆದ್ದು ಮೂರು ಪಂದ್ಯಗಳ ಸರಣಿಯನ್ನು ಬಗಲಿಗೆ ಹಾಕಿಕೊಂಡಿತು.

ಸರಣಿ ಗೆಲುವಿನ ಮೂಲಕ ಭಾರತ ತಂಡ ಮಹಿಳಾ ವಿಶ್ವಕಪ್‌ಗೆ ನೇರ ಪ್ರವೇಶವ ಗಿಟ್ಟಿಸಿಕೊಂಡಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 302 ರನ್‌ಗಳನ್ನು ಕಲೆ ಹಾಕಿತು. ಮೊದಲ ಪಂದ್ಯದಲ್ಲಿ 84 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದ ಮಂದಾನ ಈ ಪಂದ್ಯದಲ್ಲೂ ಸ್ಫೋಟಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಶತಕ ಸಿಡಿಸಿದರು.

ಕ್ರಮವಾಗಿ 55 ಮತ್ತು 51 ರನ್‌ ಗಳಿಸಿದ ಹರ್ಮನ್‌ಪ್ರೀತ್‌ ಕೌರ್ ಹಾಗೂ ವೇದಾ ಕೃಷ್ಣಮೂರ್ತಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು.

ಆರಂಭಿಕ ಬ್ಯಾಟ್ಸ್‌ವುಮನ್‌ ಪೂನಮ್ ರಾವತ್ ಮತ್ತು ನಾಯಕಿ ಮಿಥಾಲಿ ರಾಜ್ ತಲಾ 20 ರನ್‌ ಗಳಿಸಿ ಔಟಾದರು.

ಜೂಲನ್‌ಗೆ 200 ವಿಕೆಟ್‌

ಮೊದಲ ಪಂದ್ಯದಂತೆ ಈ ಪಂದ್ಯ ದಲ್ಲೂ ಭಾರತದ ಬೌಲರ್‌ಗಳು ಮಿಂಚಿ ದರು. 30.5 ಓವರ್‌ಗಳಲ್ಲಿ 124 ರನ್‌ ಗಳಿಗೆ ಎದುರಾಳಿ ತಂಡವನ್ನು ಕೆಡವಿ 178 ರನ್‌ಗಳ ಜಯವನ್ನು ತಮ್ಮದಾಗಿಸಿಕೊಂಡರು.

ಲೆಗ್ ಸ್ಪಿನ್ನರ್‌ ಪೂನಮ್‌ ರಾವತ್‌ ಒಟ್ಟು ನಾಲ್ಕು ವಿಕೆಟ್ ಕಬಳಿಸಿದರೆ ರಾಜೇಶ್ವರಿ ಗಾಯಕವಾಡ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್‌ ಉರುಳಿಸಿದರು.

ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ 200ನೇ ವಿಕೆಟ್ ಪಡೆದು ಈ ಸಾಧನೆ ಮಾಡಿದ ಮೊದಲ ಮಹಿಳಾ ಆಟಗಾರ್ತಿ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಟ್ ಅವರನ್ನು ಔಟ್ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದರು. ಇದು ಅವರ 166ನೇ ಪಂದ್ಯವಾಗಿತ್ತು.

ಸಂಕ್ಷಿಪ್ತ ಸ್ಕೋರ್‌

ಭಾರತ 50 ಓವರ್‌ಗಳಲ್ಲಿ 3ಕ್ಕೆ 302 (ಸ್ಮೃತಿ ಮಂದಾನ 135, ಹರ್ಮನ್‌ಪ್ರೀತ್‌ ಕೌರ್ 55, ವೇದಾ ಕೃಷ್ಣಮೂರ್ತಿ 51); ದಕ್ಷಿಣ ಆಫ್ರಿಕಾ: 30.5 ಓವರ್‌ಗಳಲ್ಲಿ 124ಕ್ಕೆ ಆಲೌಟ್‌ (ಲಿಜೆಲಿ ಲೀ 73; ಪೂನಮ್ ರಾವತ್‌ 24ಕ್ಕೆ4). ಫಲಿತಾಂಶ: ಭಾರತಕ್ಕೆ 178 ರನ್‌ಗಳ ಜಯ.

ಪ್ರತಿಕ್ರಿಯಿಸಿ (+)