ಶುಕ್ರವಾರ, ಡಿಸೆಂಬರ್ 13, 2019
27 °C

ವೈಷಮ್ಯ; ಸಹೋದರರಿಬ್ಬರು ಕೊಲೆ ಮಾಡಿರುವ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಷಮ್ಯ; ಸಹೋದರರಿಬ್ಬರು ಕೊಲೆ ಮಾಡಿರುವ ಶಂಕೆ

ಬೆಂಗಳೂರು: ಪಾಲಿಕೆ ಸದಸ್ಯೆ ರೇಖಾ ಅವರ ಪತಿ ಕದಿರೇಶ್‌ ಅವರನ್ನು ಸಹೋದರರಿಬ್ಬರು ಹತ್ಯೆ ಮಾಡಿರುವ ಶಂಕೆ ಇದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಆಂಜನಪ್ಪ ಗಾರ್ಡನ್‌ನಲ್ಲಿ ವಾಸವಿದ್ದ ನವೀನ್‌ ಹಾಗೂ ಅವರ ತಮ್ಮ ವಿನಯ್‌, ಎರಡು ತಿಂಗಳ ಹಿಂದಷ್ಟೇ ಬಕ್ಷಿ ಗಾರ್ಡನ್‌ಗೆ ವಾಸ ಬದಲಿಸಿದ್ದರು. ಅವರಿಬ್ಬರು ಸೇರಿ ಈ ಹತ್ಯೆ ಮಾಡಿದ್ದಾರೆ ಎಂದು ಮೃತರ ಸಹೋದರ ಸುರೇಶ್‌ ಕಾಟನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

‘ಅವರಿಬ್ಬರು ಮಚ್ಚು ಹಿಡಿದು ಕೊಂಡು ಬಂದು ಹೊಡೆದಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಅವರು ಹತ್ಯೆ ಮಾಡಲು ಕಾರಣವೇನು ಎಂಬುದು ನಮಗೂ ಗೊತ್ತಿಲ್ಲ. ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು’ ಎಂದು ದೂರಿನಲ್ಲಿ ಬರೆದಿದ್ದಾರೆ.

‘ನಗರದ ಎಟಿಎಂ ಘಟಕದಲ್ಲಿ ಗ್ರಾಹಕರೊಬ್ಬರ ಹಣ ಕಳ್ಳತನ ಮಾಡಿದ್ದ ಆರೋಪದಡಿ ನವೀನ್‌ನನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಗೆ ಬಂದಿದ್ದ ಆತ, ಆ ಬಳಿಕವೂ ಕೆಲವು ಗಲಾಟೆ ‍ಪ್ರಕರಣಗಳಲ್ಲಿ ಭಾಗಿ

ಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ಕದಿರೇಶ್‌ ಅವರ ಮನೆಯ ಸಮೀಪದಲ್ಲಿ ನವೀನ್‌ ವಾಸವಿದ್ದ. ಬಕ್ಷಿ ಗಾರ್ಡನ್‌ಗೆ ಹೋದ ಬಳಿಕ ಅವರ ಹಾಗೂ ಮತ್ತೊಂದು ಕುಟುಂಬದ ನಡುವೆ ಜಗಳ ಶುರುವಾಗಿತ್ತು. ಅದರ ರಾಜಿಗಾಗಿ ಕದಿರೇಶ್‌ ಹೋಗಿದ್ದರು ಎಂಬುದು ಗೊತ್ತಾಗಿದೆ. ರಾಜಿ ವೇಳೆ ಮಾತಿಗೆ ಮಾತು ಬೆಳೆದು ವೈಷಮ್ಯ ಏರ್ಪಟ್ಟಿತ್ತು. ಅದೇ ಕಾರಣಕ್ಕೆ ಹೊಂಚು ಹಾಕಿ ಸಹೋದರರಿಬ್ಬರು ಈ ಹತ್ಯೆ ಮಾಡಿರುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

‘ದೇವಸ್ಥಾನ ಎದುರು ಕನ್ನಡ ಹಾಗೂ ತಮಿಳು ಹಿರಿಯ ಪ್ರಾಥಮಿಕ ಶಾಲೆ ಇದೆ. ಅಲ್ಲಿಯ ಕೆಲ ಮಕ್ಕಳು ಈ ಘಟನೆಯನ್ನು ನೋಡಿ ಭಯಭೀತರಾಗಿದ್ದಾರೆ. ಘಟನಾ ಸ್ಥಳಕ್ಕೆ ಹೋದಾಗ ಕೆಲ ಪೋಷಕರು ಈ ವಿಷಯ ತಿಳಿಸಿದರು. ಕೆಲ ಮಕ್ಕಳು ಸಹ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದರು.’

‘ಘಟನಾ ಸ್ಥಳ ಹಾಗೂ ಸುತ್ತಮುತ್ತ ಕೆಲವೆಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಅದರಲ್ಲಿ ಆರೋಪಿಗಳ ಮುಖಚಹರೆ ಸೆರೆಯಾಗಿದೆ. ಅದರ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದರು.

ಆಸ್ಪತ್ರೆಯಲ್ಲಿ ಆಕ್ರಂದನ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪತ್ನಿ ರೇಖಾ, ಮಕ್ಕಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಲೆಯ ವಿಷಯ ತಿಳಿದು ನೇರವಾಗಿ ಆಸ್ಪತ್ರೆಗೆ ಬಂದ ಪತ್ನಿ ಹಾಗೂ ಮಕ್ಕಳು ಕಣ್ಣೀರಿಟ್ಟರು. ಸಂಬಂಧಿಕರು ಅವರನ್ನು ಸಮಾಧಾನಪಡಿಸಿದರು.

‘ಗುರುವಾರ ಬೆಳಿಗ್ಗೆ ಛಲವಾದಿ ಪಾಳ್ಯದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಗುವುದು’ ಎಂದು ಕುಟುಂಬದವರು ತಿಳಿಸಿದರು.

ಮೃತರ ಬಾಮೈದ ಅಪ್ಪು,‘ನವೀನ್‌, ವಿನಯ್‌ ಹಾಗೂ ಅವರಿಬ್ಬರ ಸಹಚರರೇ ಈ ಕೃತ್ಯ ಎಸಗಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಕದಿರೇಶ್‌ರನ್ನು ಆಟೊದಲ್ಲಿ ಕರೆತರುವಾಗ ನಾನು ಇದ್ದೆ’ ಎಂದರು.

‘ಅಣ್ಣನ ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ಕಂಡು ಹಿಡಿಯಬೇಕು‘ ಎಂದು ಮೃತರ ಸಹೋದರಿ ಶೀಲಾ ಒತ್ತಾಯಿಸಿದರು.

***

ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದವರೇ ಈ ಹತ್ಯೆಗೆ ಕಾರಣ

-ಎನ್‌.ಆರ್‌.ರಮೇಶ್‌, ಬಿಜೆಪಿ ನಗರ ಜಿಲ್ಲಾ ವಕ್ತಾರ

**

ಕಾಟನ್‌ಪೇಟೆ ರೌಡಿಶೀಟರ್‌

‘ಕಾಟನ್‌ಪೇಟೆ ರೌಡಿಗಳ ಪಟ್ಟಿಯಲ್ಲಿ ಕದಿರೇಶ್‌ ಹೆಸರು ಇದೆ’ ಎಂದು ಪೊಲೀಸರು ತಿಳಿಸಿದರು.

‘ಕೊಲೆ, ಕೊಲೆಗೆ ಯತ್ನ, ಹಲ್ಲೆ, ಜೀವಬೆದರಿಕೆ ಆರೋಪಗಳಡಿ ಅವರ ವಿರುದ್ಧ 15 ಪ್ರಕರಣಗಳು ದಾಖಲಾಗಿವೆ. ಶ್ರೀನಿವಾಸ್‌ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಅವರು, ಸಹಚರರಾದ ಪಳನಿ, ಕಮಲ್ ಹಾಗೂ ಕಾರ್ತಿಕ್ ಜತೆ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಅದೇ ಕಾರಣಕ್ಕೆ 2002ರಲ್ಲಿ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದ್ದೆವು’ ಎಂದು ಮಾಹಿತಿ ನೀಡಿದರು.

**

ಬಿಜೆಪಿ ಯಾತ್ರೆಗಾಗಿ ಮೆರವಣಿಗೆ

‘ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಿಮಿತ್ತ ಕದಿರೇಶ್‌, ಛಲವಾದಿಪಾಳ್ಯದಲ್ಲೆಲ್ಲ ಪಕ್ಷದ ಕಟೌಟ್‌ ಹಾಗೂ ಬ್ಯಾನರ್‌ ಹಾಕಿದ್ದರು. ಸಮಾರಂಭಕ್ಕೆ ಹೋಗುವ ವೇಳೆಯಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮೆರವಣಿಗೆ ಮಾಡಿಸಿದ್ದರು’ ಎಂದು ಸಹೋದರ ಸುರೇಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)