ರ‍್ಯಾಗಿಂಗ್‌: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

7

ರ‍್ಯಾಗಿಂಗ್‌: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

Published:
Updated:

ಬೆಂಗಳೂರು: ಕುಮಾರಸ್ವಾಮಿ ಲೇಔಟ್‍ನ ದಯಾನಂದ್ ಸಾಗರ ಕಾಲೇಜಿನ ವಿದ್ಯಾರ್ಥಿನಿ ಮೇಘನಾ (18) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಾಜರಾಜೇಶ್ವರಿನಗರ ಬಳಿಯ ಚನ್ನಸಂದ್ರದ ‘ಶಬರಿ ಅಪಾರ್ಟ್‌ಮೆಂಟ್‌’ನಲ್ಲಿ ಪೋಷಕರ ಜತೆ ವಾಸವಿದ್ದ ‌‌ಆಕೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

‘ಮೇಘನಾ ಸಾವಿಗೆ ಕಾಲೇಜಿನ ಸಿಬ್ಬಂದಿ ಹಾಗೂ ಸಹಪಾಠಿಗಳ ರ‍್ಯಾಗಿಂಗ್‌ ಕಾರಣ’ ಎಂದು ತಾಯಿ ಲತಾ ದೂರು ನೀಡಿದ್ದಾರೆ. ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ರಾಜ್‌ಕುಮಾರ್‌ ಹಾಗೂ ನಾಲ್ವರು ಸಹಪಾಠಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಚುನಾವಣೆ ಬಳಿಕ ವೈರತ್ವ: ಮಧ್ಯಮ ವರ್ಗದ ಕುಟುಂಬದ ಮೇಘನಾ, ಪಿ.ಯು ನಂತರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಉತ್ತಮ ರ‍್ಯಾಂಕ್‌ ಪಡೆದಿದ್ದಳು. ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ವರ್ಷದ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಳು.

‘ತರಗತಿ ಪ್ರತಿನಿಧಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮೇಘನಾ ಸೋತಿದ್ದಳು. ಅದೇ ಕಾರಣಕ್ಕೆ ಎದುರಾಳಿ ತಂಡದವರು ರ‍್ಯಾಗಿಂಗ್ ಮಾಡಲಾರಂಭಿಸಿದ್ದರು. ಅದರಿಂದ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದಳು’ ಎಂದು ಪೋಷಕರು ದೂರಿರುವುದಾಗಿ ಪೊಲೀಸರು ಹೇಳಿದರು.

ವಿದ್ಯಾರ್ಥಿನಿಯ ತಾಯಿ ಲತಾ, ‘ಚುನಾವಣೆ ಬಳಿಕ ಮಗಳು ಹಾಗೂ ಎದುರಾಳಿ ತಂಡದವರ ನಡುವೆ ವೈರತ್ವ ಬೆಳೆದಿತ್ತು. ಈ ಬಗ್ಗೆ ಮಗಳು ನನ್ನ ಬಳಿ ಹೇಳಿ ಕಣ್ಣೀರಿಟ್ಟಿದ್ದಳು’ ಎಂದರು.

’ಪ್ರತಿಸ್ಪರ್ಧಿ ವಿದ್ಯಾರ್ಥಿನಿಯು ಮಗಳನ್ನು ಹೀಯಾಳಿಸುತ್ತಿದ್ದಳು. ಮೇಘನಾ ನಡತೆ ಸರಿ ಇಲ್ಲ. ಆಕೆಯ ಜತೆ ಸೇರಬೇಡಿ ಎಂದು ತರಗತಿಯಲ್ಲಿದ್ದ 70 ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಿದ್ದಳು. ಅದನ್ನು ಓದಿದ ಸಹಪಾಠಿಗಳು, ಮಗಳ ಜತೆ ಮಾತನಾಡುತ್ತಿರಲಿಲ್ಲ.’

‘ನನ್ನ ಮಗಳು ರ‍್ಯಾಂಕ್ ವಿದ್ಯಾರ್ಥಿನಿ. ಅವಳು ನೋಟ್ಸ್ ಕೇಳಿದರೂ ಯಾರೂ ಕೊಡುತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಲು ವಿಭಾಗದ ಮುಖ್ಯಸ್ಥ ರಾಜ್‍ಕುಮಾರ್‌ ಅವರ ಬಳಿ ಹೋಗಿದ್ದೆ. ನಮ್ಮ ಮಾತುಗಳನ್ನು ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ಮಗಳದ್ದು ಸಿಇಟಿ ಕೋಟಾನಾ ಅಥವಾ ಪೇಮೆಂಟ್ ಕೋಟಾನಾ ಎಂದು ಪದೇ ಪದೇ ಕೇಳುತ್ತಿದ್ದರು. ಸಿಇಟಿ ಕೋಟಾ ಎಂದೊಡನೆ, ಸ್ವಲ್ಪ ಅನುಸರಿಸಿಕೊಂಡು ಹೋಗಬೇಕೆಂದು ಹೇಳಿ ಕಳುಹಿಸಿದ್ದರು’ ಎಂದು ತಾಯಿ ದೂರಿದರು.

‘ತರಗತಿ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿನಿ, ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ನನ್ನ ಮಗಳ ನಂಬರ್‌ ತೆಗೆದುಹಾಕಿದ್ದಳು. ಯಾವುದೇ ನೋಟ್ಸ್ ಸಿಗದಂತೆ ಮಾಡಿದ್ದಳು. ಅಂದಿನಿಂದ ಮಗಳು ತೀವ್ರ ನೊಂದಿದ್ದಳು. ಅದೇ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಕಾರಣರಾದ ಕಾಲೇಜಿನವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ತಂದೆ ಚಂದ್ರಶೇಖರ್‌, ‘ಕಾಲೇಜಿನ ವಾತಾವರಣ ಸರಿ ಇಲ್ಲವೆಂದು ಮಗಳು ಹೇಳಿದ್ದಳು. ಎಂಜಿನಿಯರಿಂಗ್‌ ಬಿಟ್ಟು ಬೇರೆ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಸೇರುವಂತೆ ಹೇಳಿದ್ದೆ. ಕಾಲೇಜು ಬಿಟ್ಟು ಒಂದು ತಿಂಗಳು ಮನೆಯಲ್ಲಿದ್ದ ಮಗಳು, ಪುನಃ ಕಾಲೇಜಿಗೆ ಹೋಗಲಾರಂಭಿಸಿದ್ದಳು. ಆಗಲೂ ಸಹಪಾಠಿಗಳು ಹಾಗೂ ಸಿಬ್ಬಂದಿ ಆಕೆ ಜತೆ ಮಾತನಾಡುತ್ತಿರಲಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು’ ಎಂದು ದೂರಿದರು.

ಪ್ರಕರಣದ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ದಯಾನಂದ್‌ ಸಾಗರ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್, ‘ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರಿಂದ ಮೇಘನಾಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಹೇಳಿದ್ದಾರೆ.

‘ನಮ್ಮಲ್ಲಿ ಯಾವುದೇ ವಿದ್ಯಾರ್ಥಿಯೂ ರ‍್ಯಾಗಿಂಗ್‌ ನಡೆಸಿಲ್ಲ. ತರಗತಿ ಪ್ರತಿನಿಧಿ ಆಯ್ಕೆಗೆ ಚುನಾವಣೆ ನಡೆದಿಲ್ಲ. ಆದರೆ, ಮೊದಲ ಸೆಮಿಸ್ಟರ್‌ನ ಎರಡು ವಿಷಯಗಳಲ್ಲಿ ಮೇಘನಾ ಅನುತ್ತೀರ್ಣಳಾಗಿದ್ದಳು ಎಂದಷ್ಟೇ ಹೇಳಬಲ್ಲೆ’ ಎಂದರು.

‘ವಿಭಾಗದ ಮುಖ್ಯಸ್ಥ ರಾಜ್‌ಕುಮಾರ್ 31 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅವರ ವಿರುದ್ಧ ಇದುವರೆಗೂ ಯಾವುದೇ ಆರೋಪಗಳು ಬಂದಿಲ್ಲ. ಕಾಲೇಜು ಆವರಣದ ಹೊರಗಡೆ ಏನಾದರೂ ಗಲಾಟೆಗಳು ಆಗಿದ್ದರೆ, ಅದು ನಮಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಅಂಧ ತಂದೆ; ಕಣ್ಣು ದಾನ

ಮೇಘನಾ ತಂದೆ ಚಂದ್ರಶೇಖರ್ ಅಂಧರು. ಅಂಧನ ಸಮಸ್ಯೆಯನ್ನು ಚೆನ್ನಾಗಿ ತಿಳಿದಿರುವ ಕುಟುಂಬವು ಆಕೆಯ  ಕಣ್ಣುಗಳನ್ನು ದಾನ ಮಾಡಿದೆ.

‘ನಿತ್ಯವೂ ಪತಿಯನ್ನು ನಾನೇ ಕೆಲಸಕ್ಕೆ ಬಿಟ್ಟು ಬರುತ್ತೇನೆ. ಮಂಗಳವಾರವೂ ಅವರನ್ನು ಬಿಡಲು ಹೋದಾಗಲೇ ಮಗಳು ಈ ರೀತಿ ಮಾಡಿಕೊಂಡಿದ್ದಾಳೆ. ಸತ್ತ ಬಳಿಕ ಅವಳು ಅಂಧರ ಬಾಳಲ್ಲಿ ಬೆಳಕು ತರಲಿ ಎಂಬ ಕಾರಣಕ್ಕೆ ಕಣ್ಣುಗಳನ್ನು ದಾನ ಮಾಡಿದ್ದೇವೆ’ ಎಂದು ತಾಯಿ ಲತಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry