ಪಂತರಪಾಳ್ಯ: ಸರ್ಕಾರಿ ಖರಾಬು ಜಮೀನು ದುರ್ಬಳಕೆ ಆರೋಪ

7

ಪಂತರಪಾಳ್ಯ: ಸರ್ಕಾರಿ ಖರಾಬು ಜಮೀನು ದುರ್ಬಳಕೆ ಆರೋಪ

Published:
Updated:
ಪಂತರಪಾಳ್ಯ: ಸರ್ಕಾರಿ ಖರಾಬು ಜಮೀನು ದುರ್ಬಳಕೆ ಆರೋಪ

ಬೆಂಗಳೂರು: ಕೆಂಗೇರಿ ಹೋಬಳಿಯ ಪಂತರಪಾಳ್ಯದಲ್ಲಿ ಸರ್ಕಾರಿ ಖರಾಬು ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿರುವ ವಿಚಾರ ವಿಧಾನ ಪರಿಷತ್ತಿನಲ್ಲಿ ಬುಧವಾರ ಚರ್ಚೆಗೆ ಗ್ರಾಸವಾಯಿತು.

‘ಸರ್ವೇ ನಂಬರ್‌ 47ರಲ್ಲಿ 24 ಎಕರೆ 37 ಗುಂಟೆ ಬಿ–ಖರಾಬು ಜಮೀನು ಇದೆ. ಇಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಇಲ್ಲ. ಖಾಸಗಿ ವ್ಯಕ್ತಿಯೊಬ್ಬರು ಈ ಜಮೀನನ್ನು ಕಳೆದ 40 ವರ್ಷಗಳಿಂದ ವಾಣಿಜ್ಯ ಚಟುವಟಿಕೆಗೆ ದುರ್ಬಳಕೆ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ಆರೋಪಿಸಿದರು.

ಜಿಲ್ಲಾಡಳಿತವು 2016ರ ಜುಲೈನಲ್ಲಿ ಈ ಜಮೀನನ್ನು ವಶಕ್ಕೆ ಪಡೆದಿತ್ತು. ಆ ವ್ಯಕ್ತಿಯು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್‌ ಆದೇಶ ಮಾಡಿದೆ. ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೂ, ಆ ವ್ಯಕ್ತಿ ಆ ಜಾಗದಲ್ಲಿ ಮಣ್ಣು ತುಂಬಿಸಿದ್ದಾರೆ. ಇಲ್ಲಿ ಅನಿಲ ಸಾಗಿಸುವ ಲಾರಿಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟು ಪ್ರತಿ ಲಾರಿಗೆ ಇಂತಿಷ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಕಾವಲುಗಾರನ್ನು ನೇಮಿಸಿ, ಆತನಿಗೆ ಶೆಡ್‌ ಕಟ್ಟಿಕೊಟ್ಟಿದ್ದಾರೆ. ದಿನವೊಂದಕ್ಕೆ ಏನಿಲ್ಲವೆಂದೂ 2 ಲಕ್ಷ ದಿಂದ 2.5 ಲಕ್ಷದಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ‘ಬಿ–ಖರಾಬು ಜಾಗವನ್ನು ಈ ರೀತಿ ಬಳಸಿಕೊಳ್ಳಲು ಅವಕಾಶವೇ ಇಲ್ಲ. ಇಂದೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಇದನ್ನು ತಡೆಯುವಂತೆ ಸೂಚಿಸುತ್ತೇನೆ’ ಎಂದರು.

‘ಬೆಂಗಳೂರಿನಲ್ಲಿ ಇಂಥಹ ಚಿತ್ರ ಏನೇನೋ ವ್ಯವಹಾರಗಳು ನಡೆಯುತ್ತಿವೆ. ಇಂತಹ ವ್ಯವಹಾರಗಳು ನನಗಂತೂ ಅರ್ಥವಾಗುವುದಿಲ್ಲ. ಕನಿಷ್ಠ ಒಬ್ಬ ಸದಸ್ಯರಾದರೂ ಈ ಬಗ್ಗೆ ಮಾತನಾಡಿದಿರಲ್ಲಾ’ ಎಂದು ಕಾಗೋಡು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry