ಸೆಕ್ಯುರಿಟಿ ಗಾರ್ಡ್‌, ಆಟೋ ಚಾಲಕರಾದ ರೈತರು !

7

ಸೆಕ್ಯುರಿಟಿ ಗಾರ್ಡ್‌, ಆಟೋ ಚಾಲಕರಾದ ರೈತರು !

Published:
Updated:

ಬೆಂಗಳೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ರೈತರು ನೀರು ಸಿಗದ ಕಾರಣ ಕೃಷಿ ಮಾಡಲಾಗದೇ ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್‌, ಆಟೋ ಚಾಲನೆ, ತರಕಾರಿ ಮಾರಾಟದಂತಹ ವೃತ್ತಿಯಲ್ಲಿ ತೊಡಗಿದ್ದಾರೆ ಎಂದು ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಎಸ್‌.ರವಿ ಹೇಳಿದರು.

ಈ ರೀತಿ ಸಣ್ಣ– ಪುಟ್ಟ ಕೆಲಸಗಳಲ್ಲಿ ತೊಡಗಿರುವ ರೈತರ ಸಂಖ್ಯೆ 40 ಸಾವಿರಕ್ಕೂ ಅಧಿಕ ಎಂದು ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಆರಂಭಿಸಿ ತಿಳಿಸಿದರು.

ಈ ಭಾಗದಲ್ಲಿ ರೈತರು ಕೃಷಿಗಾಗಿ ಎರಡು– ಮೂರು ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಸಾಲ ಮಾಡಿ ಒಂದು ಬೋರ್‌ವೆಲ್‌ ಕೊರೆಸಬಹುದು. ನೀರು ಸಿಗದೇ ಎರಡು ಅಥವಾ ಮೂರು ಬೋರ್‌ವೆಲ್‌ ಕೊರೆಸಲು ಹೋದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಬೋರ್‌ವೆಲ್‌ ವಿಫಲವಾದಾಗ ಹಣವಿಲ್ಲದೆ ಬೆಂಗಳೂರಿನಲ್ಲಿ ಬಾರ್‌ಗಳಲ್ಲಿ ಗ್ಲಾಸ್‌ ತೊಳೆಯಲು, ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡಲು ಬರುತ್ತಿದ್ದಾರೆ. ಇವರಿಗೆಲ್ಲ ಊರಿನಲ್ಲಿ 4–5 ಎಕರೆ ಕೃಷಿ ಭೂಮಿ ಇದೆ ಎಂದರು.

‘ಎತ್ತಿನ ಹೊಳೆ ಯೋಜನೆ ನಮ್ಮ ಭಾಗದ ರೈತರಿಗೆ ವರದಾನವಾಗಲಿದೆ. ಈ ಯೋಜನೆ ಬಗ್ಗೆ ಯಾರು ಏನು ಬೇಕಾದರೂ ಮಾತನಾಡಲಿ, ಪರವಾಗಿಲ್ಲ. ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ’ ಎಂದು ರವಿ ಹೇಳಿದರು.

ಮೋರಿ ನೀರಿನಲ್ಲಿ ತರಕಾರಿ:

ಬೆಂಗಳೂರಿನ ಮೋರಿ ನೀರು ಬಳಸಿ ತಮಿಳುನಾಡು ರೈತರು ತರಕಾರಿ ಬೆಳೆಯುತ್ತಿದ್ದಾರೆ. ಇದೇ ತರಕಾರಿಗಳನ್ನು ನಗರದಲ್ಲಿ ಶೇ 50 ರಷ್ಟು ಭಾಗ ಪೂರೈಕೆ ಮಾಡುತ್ತಿದ್ದಾರೆ ಎಂದು ರವಿ ಸದನದ ಗಮನ ಸೆಳೆದರು.

ಗಡಿ ಭಾಗದಲ್ಲಿರುವ ತಮಿಳುನಾಡಿನ 3– 4 ತಾಲ್ಲೂಕುಗಳಲ್ಲಿ ಈ ರೀತಿ ತರಕಾರಿ ಬೆಳೆಯಲಾಗುತ್ತಿದೆ. ನಗರದ ಮೋರಿ ನೀರು ಅಲ್ಲಿ ಹರಿದು ಕಾವೇರಿ ಸೇರುತ್ತದೆ. ಈ ಮೋರಿ ನೀರಿಗೆ ಪಂಪ್‌ಸೆಟ್‌ ಹಾಕಿ ತರಕಾರಿ ಬೆಳೆಯುತ್ತಿದ್ದಾರೆ. ರಾಜ್ಯ ಸರ್ಕಾರ ಈ ಮೋರಿ ನೀರನ್ನು ಶುದ್ಧೀಕರಿಸಿ ಅದನ್ನು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹರಿಸಲು ಉದ್ದೇಶಿಸಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry