ಶುಕ್ರವಾರ, ಡಿಸೆಂಬರ್ 6, 2019
25 °C

ಅರ್ಹತೆಯಿಲ್ಲದ ಕಾಲೇಜುಗಳಿಗೂ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಹತೆಯಿಲ್ಲದ ಕಾಲೇಜುಗಳಿಗೂ ಮಾನ್ಯತೆ

ಮೈಸೂರು: ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನದಂಡಗಳನ್ನು ಪಾಲಿಸದ ಪದವಿ ಕಾಲೇಜುಗಳಿಗೆ ಮೈಸೂರು ವಿಶ್ವವಿದ್ಯಾನಿಲಯವು ಮಾನ್ಯತೆ ನೀಡುವುದರ ಜತೆಗೆ, ಸ್ವಾಯತ್ತ ಸ್ಥಾನಮಾನವನ್ನೂ ನೀಡಿದೆ.

ಪದವಿ ಕಾಲೇಜಿಗೆ ಶಾಶ್ವತ ಪ್ರಾಂಶುಪಾಲರಿರಬೇಕು, ಕಾಲೇಜಿನ ಸಿಬ್ಬಂದಿಯು ನಿರಂತರ ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿರಬೇಕು, ಆಯ್ಕೆ ಆಧಾರಿತ ವಿಷಯ ವ್ಯವಸ್ಥೆಯನ್ನು (ಸಿಬಿಸಿಎಸ್‌) ಅಳವಡಿಸಿಕೊಂಡಿರಬೇಕು ಎಂಬ ಯುಜಿಸಿ ನಿಯಮವಿದೆ. ಈ ನಿಯಮಗಳನ್ನು ಅಳವಡಿಸಿಕೊಳ್ಳದ ವಿವಿಧ ಪದವಿ ಕಾಲೇಜುಗಳಿಗೆ ಮೈಸೂರು ವಿ.ವಿ ಮಾನ್ಯತೆ ನೀಡಿದೆ.

ಈ ಕುರಿತು ಬುಧವಾರ ನಡೆದ ಮೈಸೂರು ವಿ.ವಿ ಶೈಕ್ಷಣಿಕ ಮಂಡಳಿ ಸಭೆಯಲ್ಲೂ ಚರ್ಚೆಯಾಯಿತು. 2017–18ನೇ ಸಾಲಿಗೆ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜು ಹಾಗೂ ಹಾಸನದ ಸರ್ಕಾರಿ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡುವುದರ ಬಗ್ಗೆ ಚರ್ಚೆ ನಡೆಯಿತು. ಈ ಕಾಲೇಜುಗಳಿಗೆ ಸ್ವಾಯತ್ತತೆ ನೀಡುವುದು ಎಷ್ಟು ಸರಿ ಎಂದು ಸದಸ್ಯರು ಕೇಳಿದರು. ನಿಯಮಗಳ ಪಾಲನೆ ಆಗಿಲ್ಲ. ಎಲ್ಲ ಮಾನದಂಡಗಳನ್ನು ಪೂರೈಸಿದ ಮೇಲೆ ಸ್ವಾಯತ್ತತೆ ನೀಡಬೇಕು ಎಂದು ಪಟ್ಟು ಹಿಡಿದರು.

ಆದರೆ, ಸರ್ಕಾರಿ ಕಾಲೇಜುಗಳ ಪೈಕಿ ಶೇ 80ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಶಾಶ್ವತ ಪ್ರಾಂಶುಪಾಲರಿಲ್ಲ ಎಂದು ಸದಸ್ಯರೇ ಚರ್ಚಿಸಿದರು. ಅನೇಕ ಕಾಲೇಜುಗಳಲ್ಲಿ ಯುಜಿಸಿ ಅರ್ಹತೆ ಇರುವ ‍ಪ್ರಾಂಶುಪಾಲರು ಇರುವುದಿಲ್ಲ. ಹೀಗಾಗಿ, ಹಿರಿಯ ಬೋಧಕರನ್ನೇ ‍ಪ್ರಭಾರ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿರುತ್ತದೆ ಎಂದು ಹೇಳಿದರು. ಹೀಗಾಗಿ, ಮಾನ್ಯತೆ ನೀಡುವುದರಲ್ಲಿ ತಪ್ಪಿಲ್ಲ ಎಂದರು.

ಇದಕ್ಕೆ ಉತ್ತರಿಸಿದ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು, ಪರಾಮರ್ಶನ ಸಮಿತಿಯು ಈ ಕಾಲೇಜುಗಳಿಗೆ ಭೇಟಿ ನೀಡಿದಾಗ ಮಾನದಂಡ ಪಾಲನೆ ಆಗದೇ ಇರುವ ಬಗ್ಗೆ ತಿಳಿಯಿತು. ಮುಂದಿನ ಬಾರಿ ಸಮಿತಿಯು ಬರುವಷ್ಟರಲ್ಲಿ ಮಾನದಂಡ ಪಾಲಿಸುವಂತೆ ತಿಳಿಸಲಾಗಿದೆ. ಈ ಷರತ್ತಿನ ಮೇಲೆ ಸ್ವಾಯತ್ತತೆ ನೀಡಲು ಒಪ್ಪಿಗೆ ನೀಡುವಂತೆ ಸಭೆಗೆ ಕೋರಿದರು.

ಅಂತೆಯೇ, ಖಾಸಗಿ ಕಾಲೇಜುಗಳಾದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು, ಬಿ.ಎನ್‌.ರಸ್ತೆಯ ಜೆಎಸ್‌ಎಸ್‌ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು ಸಿಬಿಸಿಎಸ್‌ ಪದ್ಧತಿ ಅಳವಡಿಸಿಕೊಂಡಿಲ್ಲ. ಈ ಕಾಲೇಜುಗಳಿಗೂ ಷರತ್ತುಬದ್ಧವಾಗಿ ಸ್ವಾಯತ್ತ ಸ್ಥಾನಮಾನ ನೀಡಲು ಸಭೆ ಒಪ್ಪಿತು

ಪ್ರತಿಕ್ರಿಯಿಸಿ (+)