ಶುಕ್ರವಾರ, ಡಿಸೆಂಬರ್ 6, 2019
26 °C

ಮುಖ್ಯಮಂತ್ರಿ ಬಳಿಗೆ ರೈತರ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಬಳಿಗೆ ರೈತರ ನಿಯೋಗ

ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಆರು ಅಡಿ ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಸಿಂಗಟಾಲೂರು ಏತನೀರಾವರಿ ಯೋಜನೆಗೆ ಕೊಡುವುದನ್ನು ವಿರೋಧಿಸಿ ಮೂರು ಜಿಲ್ಲೆಗಳ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ತೆರಳಿ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಂಧನೂರಿನಲ್ಲಿ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ವಿವಿಧ ಪಕ್ಷ ಹಾಗೂ ರೈತ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಫೆ.13 ರೊಳಗಾಗಿ ನೀರಾವರಿ ತಜ್ಞರ ಸಮಿತಿಯನ್ನು ರಚಿಸಿ ಚರ್ಚೆ ನಡೆಸಲಾಗುವುದು. ಜಲಾಶಯ ಸಂಬಂಧ ಹಳೆಯ ಮಾಹಿತಿಗಳನ್ನೆಲ್ಲ ಕ್ರೋಢೀಕರಿಸಿ ಮುನಿರಾಬಾದ್‌ನಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಲಾಗುವುದು’ ಎಂದು ಹೇಳಿದರು.

ಮುಖ್ಯವಾಗಿ ಪಾವಗಡಕ್ಕೆ ಸರ್ಕಾರ 2.5 ಟಿಎಂಸಿ ಅಡಿ ನೀರನ್ನು ಕೊಡಲು ತೀರ್ಮಾನಿಸಿರುವುದು ಸರಿಯಲ್ಲ. ಹಿನ್ನೀರಿನ ಬದಲಾಗಿ ಮುನ್ನೀರು ಬಳಸಬಹುದು. ಬ್ರಿಜೇಶ್ ಪಟೇಲ್ ವರದಿ ಪ್ರಕಾರ 139 ಟಿಎಂಸಿ ಅಡಿ ನಮ್ಮ ಪಾಲಿನ ನೀರಿನ ಹಕ್ಕು ಇದೆ. ಆದರೆ 39 ಟಿಎಂಸಿ ಹೂಳು ತುಂಬಿದೆ. ಅಲ್ಲದೆ ಸಿಂಗಟಾಲೂರು ಸೇರಿದಂತೆ ಮೇಲ್ಭಾಗದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಆರಂಭಿಸಿರುವುದರಿಂದ ನಮ್ಮ ಪಾಲಿನ ನೀರಿನಲ್ಲಿ ಕಡಿತಗೊಳ್ಳಲಿದೆ. ಇದಲ್ಲದೆ ಕಾರ್ಖಾನೆಗಳಿಗೆ, ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಪರಮೇಶ್ವರ ಸಮಿತಿ ಪುನಶ್ಚೇತನಗೊಳಿಸಿ ಅದರಲ್ಲಿ ನೀರಾವರಿ ತಜ್ಞರನ್ನು ಸೇರಿಸುವಂತೆ ಒತ್ತಾಯಿಸಲಾಗುವುದು’ ಎಂದುಹೇಳಿದರು.

ಐಸಿಸಿ ಸಭೆಯ ತೀರ್ಮಾನದಂತೆ ಫೆಬ್ರುವರಿ 28ಕ್ಕೆ ಎಡದಂಡೆ ನಾಲೆಗೆ ನೀರು ಸ್ಥಗಿತಗೊಳ್ಳುತ್ತದೆ. ಆದರೆ ಶಾಸಕ ಹಂಪನಗೌಡ ಬಾದರ್ಲಿ ತೆಲಂಗಾಣಕ್ಕೆ ನೀರಾವರಿ ಸಚಿವರೊಂದಿಗೆ ತೆರಳಿ ನೀರು ಬಿಡಿಸುವುದಾಗಿ ಹೇಳಿದ್ದರು. ಅವರ ಮಾತನ್ನು ನಂಬಿ ಈ ಭಾಗದ ಲಕ್ಷಾಂತರ ಎಕರೆ ಜಮೀನಿನಲ್ಲಿ ರೈತರು ಭತ್ತ ನಾಟಿ ಮಾಡಿದ್ದಾರೆ. ತೆಲಂಗಾಣದಿಂದ ನೀರು ಬರುವ ಬಗ್ಗೆ ಇದುವರೆಗೂ ಯಾವುದೇ ಮುನ್ಸೂಚನೆಗಳು ಕಂಡು ಬಂದಿಲ್ಲ. ಇದಕ್ಕೆಲ್ಲ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಅವರ ಸರ್ಕಾರವೇ ಕಾರಣವಾಗಿದೆ. ನೀರು ಬರದಿದ್ದರೆ ಬೆಳೆಹಾನಿ ಆಗುವುದು ನಿಶ್ಚಿತ. ಆದ್ದರಿಂದ ಸರ್ವೆ ಕಾರ್ಯ ನಡೆಸಿ ಹಾನಿಗೊಳಗಾಗುವ ರೈತರಿಗೆ ಬೆಳೆ ಪರಿಹಾರ ಕೊಡಿಸಬೇಕು’ ಎಂದು ಆಗ್ರಹಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಪಿ.ಗೋಪಾಲರಾವ್ ಇದ್ದರು.

* * 

ತೆಲಂಗಾಣದಿಂದ ನೀರು ಬಿಡುವ ಕುರಿತು ಯಾವುದೇ ಮಾಹಿತಿ ಇಲ್ಲ. ಶಾಸಕರ ಮಾತು ನಂಬಿ ರೈತರು ಭತ್ತ ನಾಟಿದ್ದು, ಈಗ ನೀರು ಬರದಿದ್ದರೆ ಬೆಳೆಹಾನಿಯಾಗುವ ಸಂಭವವಿದೆ.

ಕೆ.ವಿರೂಪಾಕ್ಷಪ್ಪ, ಮಾಜಿ ಸಂಸದ

ಪ್ರತಿಕ್ರಿಯಿಸಿ (+)