ಬುಧವಾರ, ಡಿಸೆಂಬರ್ 11, 2019
26 °C

ನಿಯಂತ್ರಣಕ್ಕೆ ಬಾರದ ಮಂಗನ ಕಾಯಿಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಯಂತ್ರಣಕ್ಕೆ ಬಾರದ ಮಂಗನ ಕಾಯಿಲೆ

ಸೊರಬ: ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಹುಟ್ಟಿಕೊಂಡ ಮಂಗನ ಕಾಯಿಲೆ ಜಿಲ್ಲೆಗೆ ವ್ಯಾಪಿಸಿದ್ದು, ಕೇರಳ ಹಾಗೂ ಮಹಾರಾಷ್ಟ್ರದ ಪಶ್ಚಿಮಘಟ್ಟದ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಬಗ್ಗೆ ತಾಲ್ಲೂಕಿನ ವೈದ್ಯರು ತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಓಡಾಡಿ ರೋಗ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ ಎಂದು ವೈದ್ಯರ ಮೇಲೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರ ಸಭೆ ನಡೆಸಿದ ಅವರು, ‘ಉಳವಿ ಹೋಬಳಿ ವ್ಯಾಪ್ತಿಯ ಕಟ್ಟಿನಕೆರೆ ಗ್ರಾಮದಲ್ಲಿ ಮೂರು ಮಂಗಗಳು ಸತ್ತಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಗ್ರಾಮಸ್ಥರಿಗೆ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದೀರಾ ಎಂದು ಉಳವಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಪವಾರ್ ಅವರನ್ನು ಪ್ರಶ್ನಿಸಿದರು.ಅವರಿಂದ ಸರಿಯಾದ ಉತ್ತರ ಬರಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, 10 ವರ್ಷದಿಂದ ವೈದ್ಯ ಸೇವೆಯಲ್ಲಿರುವ ನಿಮಗೆ ಮಂಗನ ಕಾಯಿಲೆ ಬಗ್ಗೆ ಮಾಹಿತಿ ಇಲ್ಲ ಎಂದರೆ ಜನರ ಆರೋಗ್ಯ ಹೇಗೆ ಕಾಪಾಡುತ್ತೀರಿ’ ಎಂದು ಹರಿಹಾಯ್ದರು.

ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಜ್ವರ, ತಲೆ ನೋವು, ತಲೆಸುತ್ತು ಹೆಚ್ಚಾದರೆ ಮಂಗನ ಕಾಯಿಲೆಯ ಲಕ್ಷಣಗಳು ಎಂದು ಗುರುತಿಸಿ, ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಬೇಕು. ಜನರಿಗೆ ಲಸಿಕೆ ಕೊಡುವ ಮೊದಲು ವೈದ್ಯರು ಕೈಗೆ ಗ್ಲೌಸ್ ಹಾಕಿಕೊಂಡು ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಮಂಗನ ಕಾಯಿಲೆಗೆ ನೀಡಬಹುದಾದ ಪ್ರಾಥಮಿಕ ಚಿಕಿತ್ಸೆ ಹಾಗೂ ಕಾಯಿಲೆ ದೃಢಪಡಿಸಿಕೊಳ್ಳುವ ಮತ್ತು ಚಿಕಿತ್ಸೆ ನೀಡಬಹುದಾದ ವಿಧಾನದ ಬಗ್ಗೆ ಸಭೆಯಲ್ಲಿ ಸೇರಿದ್ದ ಬಹುತೇಕ ವೈದ್ಯರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನಗೊಂಡರು. ಮಂಗನ ಕಾಯಿಲೆ ಗಂಭೀರವಾಗಿದ್ದು, ಕಾಯಿಲೆ ಬಗ್ಗೆ ದೃಢಪಡಿಸಿಕೊಂಡು ಹೇಗೆ ಚಿಕಿತ್ಸೆ ನೀಡಬೇಕು. ಗ್ರಾಮದಲ್ಲಿ ಅರಣ್ಯಕ್ಕೆ ಹೋಗುವ ರೈತರಿಗೆ, ಅರಣ್ಯ ರಕ್ಷಕರಿಗೆ ಹಾಗೂ ಮನೆಯಲ್ಲಿರುವ ಹಸುಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ವೈದ್ಯರಿಗೆ ಕೆಲ ಹೊತ್ತು ಪಾಠ ಮಾಡಿದರು.

ಮಂಗನ ಕಾಯಿಲೆಗೆ ಸಂಬಂಧಪಟ್ಟಂತೆ ಔಷಧ ಮತ್ತು ಚುಚ್ಚುಮದ್ದು ನೀಡುವ ಬಗ್ಗೆ ಒಬ್ಬೊಬ್ಬ ವೈದ್ಯರನ್ನು ವಿಚಾರಿಸಿದಾಗ ಯಾರೂ ಸರಿಯಾಗಿ ಹೇಳಲಿಲ್ಲ. ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ‘ಎಬಿಸಿಡಿ ಗೊತ್ತಿಲ್ಲದ ನೀವು ಎಂಬಿಬಿಎಸ್ ಹೇಗೆ ಓದಿ ವೈದ್ಯ ವೃತ್ತಿಗೆ ಬಂದಿದ್ದೀರಿ’ ಎಂದು ಪ್ರಶ್ನಿಸಿದರು.

ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ವೈದ್ಯರು ಭೇಟಿ ನೀಡುವುದಿಲ್ಲ. ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಪಡೆದು ವರದಿ ನೀಡುತ್ತಾರೆ. ಇಂತಹ ವೈದ್ಯರ ಬಗ್ಗೆ ನಿಗಾವಹಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಸರ್ಕಾರ ಅಪೌಷ್ಟಿಕತೆ ಹೋಗಲಾಡಿಸಲು ಅನೇಕ ಯೋಜನೆಗಳನ್ನು ತಂದಿದೆ. ಹೀಗಿದ್ದೂ ಅನೇಕ ಅಂಗನವಾಡಿಗಳಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಬಗ್ಗೆ ವರದಿಯಾಗಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಸೇವೆ ಸಲ್ಲಿಸುವ ವೈದ್ಯರು ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿ ಅಪೌಷ್ಟಿಕತೆ ತಡೆಗಟ್ಟಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹನಮಂತಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯಿತ್ರಿ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲೋಕೇಶ್, ರಾಹುಲ್

ಪಾಂಡೆ, ಕಾಂತರಾಜ್ ಅವರೂ ಹಾಜರಿದ್ದರು.

ಪ್ರತಿಕ್ರಿಯಿಸಿ (+)