ಸೋಮವಾರ, ಡಿಸೆಂಬರ್ 9, 2019
24 °C

‘ನಮ್ಮಷ್ಟು ಹಿಂದೂಪರ ಕೆಲಸ ಯಾರೂ ಮಾಡಿಲ್ಲ: ಪ್ರಮೋದ್ ಮಧ್ವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಮ್ಮಷ್ಟು ಹಿಂದೂಪರ ಕೆಲಸ ಯಾರೂ ಮಾಡಿಲ್ಲ: ಪ್ರಮೋದ್ ಮಧ್ವರಾಜ್

ಉಡುಪಿ: ‘ಕಾಂಗ್ರೆಸ್ ಸರ್ಕಾರ ಮಾಡಿದಷ್ಟು ಹಿಂದೂಪರವಾದ ಕೆಲಸವನ್ನು ಬೇರೆ ಯಾವ ಸರ್ಕಾರವೂ ಮಾಡಿಲ್ಲ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ಮೊದಲು ದೇವಸ್ಥಾನಗಳಿಗೆ ಕೇವಲ ₹15 ಸಾವಿರ ಮಾತ್ರ ತಸ್ತೀಕ್ ನೀಡಲಾಗುತ್ತಿತ್ತು, ಆದರೆ ನಮ್ಮ ಸರ್ಕಾರ ಅದನ್ನು ₹48 ಸಾವಿರಕ್ಕೆ ಏರಿಕೆ ಮಾಡಿದೆ. ಮಠಗಳನ್ನು ಸರ್ಕಾರ ಸ್ವಾಧೀನಕ್ಕೆ ಪಡೆಯುವ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಧಾರ್ಮಿಕ ದತ್ತಿ ಕಾಯ್ದೆಯನ್ನು ಪುನರ್ ರೂಪಿಸಿ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಅದಕ್ಕಾಗಿ ಅಭಿಪ್ರಾಯ ಸಂಗ್ರಹಿಸುತ್ತಿರಬಹುದು’ ಎಂದು ಅವರು ಹೇಳಿದರು.

‘ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸೀಮೆಎಣ್ಣೆಯನ್ನು ಮೀನುಗಾರರಿಗೆ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ಮುಕ್ತ ಮಾಡುವ ಉದ್ದೇಶದಿಂದ ರಾಜ್ಯಗಳಿಗೆ ನೀಡುತ್ತಿರುವ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ಇದರಿಂದಾಗಿ ಮೀನುಗಾರರಿಗೆ ಕೊರತೆ ಆಗಿರಬಹುದು. ಆದರೆ ಸೀಮೆಎಣ್ಣೆಯ ಸಬ್ಸಿಡಿ ಹಣವನ್ನು ನೇರವಾಗಿ ಮೀನುಗಾರರ ಖಾತೆಗೆ ಹಾಕಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಮುಖ್ಯಮಂತ್ರಿ ಅವರೂ ಅಂತಹ ಸಲಹೆ ನೀಡಿದ್ದಾರೆ’ ಎಂದರು.

‘ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡುವ ಸುಳ್ಳು ಆರೋಪಗಳಿಗೆ ಸರಿಯಾಗಿ ತಿರುಗೇಟು ನೀಡಿ ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ’ ಎಂದು ಅವರು ಹೇಳಿದರು.

* * 

ಮಠಗಳ ಸ್ವಾಧೀನದ ವಿಷಯದಲ್ಲಿ ಕಾನೂನಾತ್ಮಕ ಹಾಗೂ ಭಕ್ತರ ಭಾವನಾತ್ಮಕ ಎರಡೂ ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ. ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳಬೇಕಾಗುತ್ತದೆ.

ಪ್ರಮೋದ್ ಮಧ್ವರಾಜ್,

ಸಚಿವ

ಪ್ರತಿಕ್ರಿಯಿಸಿ (+)