ಶುಕ್ರವಾರ, ಡಿಸೆಂಬರ್ 6, 2019
26 °C

ದ್ರಾಕ್ಷಿ ಬೆಳೆಗಾರರಲ್ಲಿ ಆತಂಕದ ಕಾರ್ಮೋಡ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ದ್ರಾಕ್ಷಿ ಬೆಳೆಗಾರರಲ್ಲಿ ಆತಂಕದ ಕಾರ್ಮೋಡ

ವಿಜಯಪುರ: ಸೆಪ್ಟೆಂಬರ್‌ನಲ್ಲಿ ಚಾಟ್ನಿ ಮಾಡಿದ ದ್ರಾಕ್ಷಿ ಪಡಗಳಲ್ಲಿ ಕೊಯ್ಲು ಆರಂಭಗೊಂಡಿದೆ. ಅಕ್ಟೋಬರ್‌ನಲ್ಲಿ ಚಾಟ್ನಿ ನಡೆದ ಪಡಗಳಲ್ಲಿ ದ್ರಾಕ್ಷಿ ಕಾಯಿ ಬಲಿತು ಹಣ್ಣಾಗುವ ಸಮಯವಿದು. ಇನ್ನೂ ಹೊಲಗಳಲ್ಲಿ ಜೋಳದ ಬೆಳೆಯಿದೆ. ರಾಶಿ ಆರಂಭಗೊಳ್ಳಬೇಕಿದೆ. ಕಡಲೆ, ಗೋಧಿಯ ರಾಶಿ ಜಿಲ್ಲೆಯ ಎಲ್ಲೆಡೆ ವ್ಯಾಪಕವಾಗಿ ನಡೆಯುತ್ತಿದೆ. ಈ ಹಂತದಲ್ಲೇ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದ್ದು, ಜಿಲ್ಲೆಯ ಕೃಷಿ–ತೋಟಗಾರಿಕೆ ಬೆಳೆಗಾರರ ಆತಂಕ ಹೆಚ್ಚಿಸಿದೆ.

ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚುವ ದಿನಗಳಲ್ಲೇ, ಮಂಗಳವಾರದಿಂದ ಏಕಾಏಕಿ ಹಮಾವಾನದಲ್ಲಿ ಬದಲಾವಣೆಯಾಗಿದೆ. ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಬುಧವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ನಡುವೆ ಆಗಾಗ್ಗೆ ಅಕಾಲಿಕ ಜಿಟಿಜಿಟಿ ಮಳೆ ಸುರಿದಿದೆ. ಇದು ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

‘ದ್ರಾಕ್ಷಿ ಬೆಳೆಗಾರ ಚಾಟ್ನಿಯ ಹಂತದಿಂದಲೂ ಹಿಡಿದು ಕೊಯ್ಲಿನವರೆಗೂ ಆತಂಕದಲ್ಲೇ ದಿನ ಕಳೆದಿದ್ದಾನೆ. ಇದೀಗ ಒಣ ದ್ರಾಕ್ಷಿ ಉತ್ಪಾದಕರ ಮೊಗದಲ್ಲಿ ಚಿಂತೆಯೇ ಆವರಿಸಿದೆ. ನಮ್ಮ ತ್ರಾಸು ಯಾವಾಗ ತಪ್ಪಲಿದೆ ಎಂಬ ನಿರೀಕ್ಷೆಯಲ್ಲೇ ದಿನ ಕಳೆಯಲಾರಂಭಿಸಿದ್ದಾನೆ’ ಎಂದು ಕೊಲ್ಹಾರ ಪಟ್ಟಣದ ಪ್ರಗತಿಪರ ರೈತ ಸಿದ್ದಪ್ಪ ದುಂಡಪ್ಪ ಬಾಲಗೊಂಡ ‘ಪ್ರಜಾವಾಣಿ’ ಬಳಿ ಆತಂಕ ವ್ಯಕ್ತಪಡಿಸಿದರು.

‘ಜನವರಿ, ಫೆಬ್ರುವರಿ, ಮಾರ್ಚ್‌ ಈ ಮೂರು ತಿಂಗಳು ವಿಜಯಪುರ ಜಿಲ್ಲೆಯ ಕೃಷಿ–ತೋಟಗಾರಿಕೆ ಬೆಳೆಗಾರರ ಪಾಲಿಗೆ ಮಹತ್ವದ ದಿನಗಳು. ಈ ಅವಧಿಯಲ್ಲಿ ವಾತಾವರಣದಲ್ಲಿ ಕೊಂಚ ಏರುಪೇರಾದರೂ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಲಿದೆ.

ಇದೀಗ ಮೋಡ ಕವಿದ ವಾತಾವರಣವಿದೆ. ಆಗಾಗ್ಗೆ ಜಿಟಿಜಿಟಿ ಮಳೆ ಸುರಿದಿದೆ. ಮೊದಲೇ ತ್ರಾಸಿನಲ್ಲಿರುವ ದ್ರಾಕ್ಷಿ ಬೆಳೆಗಾರ ಮತ್ತಷ್ಟು ಹೈರಾಣ ಆಗಲಿ

ದ್ದಾನೆ. ಕಡಲೆ–ಗೋಧಿಯ ರಾಶಿ ನಡೆಸುತ್ತಿರುವ ಕೃಷಿಕರ ಸಂಕಟ ಹೇಳತೀರದು’ ಎಂದು ಪ್ರಸ್ತುತ ತಾವು ಎದುರಿಸುತ್ತಿರುವ ಅಸಹಾಯಕ ಸ್ಥಿತಿಯ ಅಳಲನ್ನು ತೋಡಿಕೊಂಡರು.

‘ಪ್ರಸ್ತುತ ನಿರ್ಮಾಣಗೊಂಡಿರುವ ವಾತಾವರಣ ಒಣ ದ್ರಾಕ್ಷಿ ಉತ್ಪನ್ನ ತಯಾರಿಕೆಗೆ ಸೂಕ್ತವಾದುದಲ್ಲ. ಮಣೂಕ ಕಪ್ಪಾಗಲಿದೆ. ಕಪ್ಪಾದರೆ ಬೆಲೆಯೇ ಸಿಗಲ್ಲ. ಜತೆಗೆ ತನ್ನ ಉತ್ಕೃಷ್ಟತೆಯನ್ನು ಕಳೆದುಕೊಂಡು, ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಳ್ಳಲಿದೆ.

ಹಸಿ ದ್ರಾಕ್ಷಿ ಬೇಗ ಒಣಗಲ್ಲ. ತನ್ನ ಸಹಜ ಸಿಹಿಯನ್ನು ಹೊಂದಲ್ಲ. ಇದು ಮಣೂಕ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಬಬಲೇಶ್ವರ ತಾಲ್ಲೂಕಿನ ಉಪ್ಪಲದಿನ್ನಿಯ ಸೋಮನಾಥ ಬಿರಾದಾರ ಹೇಳಿದರು.

‘ಪಡಗಳಲ್ಲಿರುವ ಹಸಿ ದ್ರಾಕ್ಷಿಯೂ ಹಾನಿಗೀಡಾಗಲಿದೆ. ಹಣ್ಣು ತನ್ನ ಸಿಹಿ ಅಂಶ ಕಳೆದುಕೊಳ್ಳಲಿದೆ. ಇಳುವರಿ ಕುಂಠಿತಗೊಳ್ಳಲಿದೆ. ಆಲಿಕಲ್ಲು ಮಳೆಯಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ’ ಎಂದು ಅವರು ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮ: ಡಿಡಿ

‘ಮೋಡದ ವಾತಾವರಣ ಒಳ್ಳೆಯದಲ್ಲ. ಜಿಟಿಜಿಟಿ ಮಳೆಯೂ ಬೆಳೆಗೆ ಹಾನಿಕಾರಕ. ಹವಾಮಾನ ಮುನ್ಸೂಚನೆ ಗಮನಿಸಿದ್ದೇವೆ. ಗುರುವಾರ ವಾತಾವರಣದಲ್ಲಿ ಶುಭ್ರ ಆಗಸ ಕಂಡುಬರುವ ನಿರೀಕ್ಷೆಯಿದೆ. ಒಂದು ವೇಳೆ ಮೋಡ–ಮಳೆ ಮುಂದುವರೆದರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ದ್ರಾಕ್ಷಿ ಬೆಳೆಗಾರರಿಗೆ ಸೂಚನೆ ನೀಡಲಾಗುವುದು’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ಮಾಹಿತಿ ನೀಡಿದರು.

‘ಇದೇ ವಾತಾವರಣ ಮುಂದುವರೆದರೆ ಬೆಳೆಗೆ ಹಾನಿಯಾಗಲಿದೆ. ಮಳೆಯಾದರೆ ದ್ರಾಕ್ಷಿ ಹಣ್ಣು ಡ್ಯಾಮೇಜ್‌ ಆಗಲಿದ್ದು, ಮಾರಾಟ ಮೌಲ್ಯ ಕಳೆದುಕೊಳ್ಳಲಿದೆ. ಒಣದ್ರಾಕ್ಷಿ ಉತ್ಪಾದನೆ ಮೇಲೂ ದುಷ್ಪರಿಣಾಮ ಬೀರಲಿದೆ’ ಎಂದು ಹೇಳಿದರು.

* * 

ಹವಾಮಾನ ಜಾಲತಾಣಗಳಲ್ಲಿ ಶನಿವಾರದವರೆಗೂ ಇದೇ ವಾತಾವರಣ ಮುಂದುವರಿಯಲಿದೆ ಎಂಬ ಮಾಹಿತಿಯಿದ್ದು, ಬೆಳೆಗಾರರನ್ನು ಆತಂಕಕ್ಕೆ ದೂಡಿದೆ

ಸಿದ್ದಪ್ಪ ದುಂಡಪ್ಪ ಬಾಲಗೊಂಡ

ಕೊಲ್ಹಾರ

ಪ್ರತಿಕ್ರಿಯಿಸಿ (+)