ಬುಧವಾರ, ಡಿಸೆಂಬರ್ 11, 2019
24 °C

ರಸ್ತೆ, ನೀರು, ಭವನಕ್ಕೆ ಹೆಚ್ಚಿನ ಆದ್ಯತೆ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ರಸ್ತೆ, ನೀರು, ಭವನಕ್ಕೆ ಹೆಚ್ಚಿನ ಆದ್ಯತೆ

ವಿಜಯಪುರ: ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅಭಿವೃದ್ಧಿ ಕಾಮಗಾರಿ ನಡೆದಿವೆ.

ಈ ಐದು ವರ್ಷದ ಅವಧಿಯಲ್ಲಿ ಶಾಸಕರ ನಿಧಿಯಿಂದ 252 ಕಾಮಗಾರಿ ಕೈಗೊಳ್ಳಲು ಪ್ರೊ.ಎಚ್‌.ಆರ್‌.ಆಲಗೂರ ಶಿಫಾರಸು ಮಾಡಿದ್ದು, ಇವುಗಳಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದರೆ, ಹಲವು ಅಂತಿಮ ಹಂತದಲ್ಲಿವೆ. ಬೆರಳೆಣಿಕೆಯಷ್ಟು ಮಾತ್ರ ಪ್ರಗತಿಯಲ್ಲಿವೆ.

ರೈತರ ಜಮೀನುಗಳಿಗೆ ತೆರಳುವ ದಾರಿ ಸಮಸ್ಯೆ ತಲೆದೋರಿದ ಕಡೆ, ಎತ್ತಿನ ಬಂಡಿ ಸಂಚಾರಕ್ಕೂ ಸಂಕಷ್ಟ ಎದುರಾದ ಕಡೆ ಮಣ್ಣಿನ ರಸ್ತೆ ನಿರ್ಮಿಸಿಕೊಳ್ಳಲು ಸ್ಥಳೀಯರ ಬೇಡಿಕೆಗನುಗುಣವಾಗಿ ಶಾಸಕ ಆಲಗೂರ ಅನುದಾನ ಮಂಜೂರು ಮಾಡಿದ್ದಾರೆ.

2013–14ನೇ ಸಾಲಿನಲ್ಲಿ ₹ 35 ಲಕ್ಷ ಮೊತ್ತವನ್ನು ಮಣ್ಣಿನ ರಸ್ತೆ ನಿರ್ಮಾಣಕ್ಕೆ ಒದಗಿಸಿದ್ದರೆ, 2014–15ರಲ್ಲಿ ಅನುದಾನವನ್ನು ದುಪ್ಪಟ್ಟು ₹ 73 ಲಕ್ಷ ಬಿಡುಗಡೆಗೊಳಿಸಿದ್ದಾರೆ. 2016–17ನೇ ಸಾಲಿನಲ್ಲೂ ₹ 4 ಲಕ್ಷ ಬಿಡುಗಡೆಗೊಳಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯಾವುದೇ ಮಂಜೂರಾತಿ ನೀಡಿಲ್ಲ.

ರಸ್ತೆ ನಿರ್ಮಾಣಕ್ಕಾಗಿಯೇ ಆಲಗೂರ ಮೂರು ಆರ್ಥಿಕ ವರ್ಷದಲ್ಲಿ ₹ 1.12 ಕೋಟಿ ಬಿಡುಗಡೆ ಮಾಡಿದ್ದು, ಶಾಲೆಗಳ ದುರಸ್ತಿ ಸೇರಿದಂತೆ ಇನ್ನಿತರೆ ಖರ್ಚುಗಳಿಗಾಗಿ ನಾಲ್ಕು ವರ್ಷ ಒಟ್ಟು ₹ 17 ಲಕ್ಷ, ಅಂಗವಿಕಲರಿಗೆ ತ್ರಿಚಕ್ರ ವಿತರಿಸಲು ಒಮ್ಮೆ ಮಾತ್ರ ₹ 10 ಲಕ್ಷ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ವರ್ಷ ₹ 5 ಲಕ್ಷ ನೀಡಿದ್ದರೆ, 2015–16ರಲ್ಲಿ ಮಂಜೂರುಗೊಂಡ ಅನುದಾನದಲ್ಲಿ ಕಾಲು ಭಾಗ ₹ 50 ಲಕ್ಷವನ್ನು ನೀರಿನ ಸಮಸ್ಯೆ ಪರಿಹಾರಕ್ಕೆ ಒದಗಿಸಿರುವುದು ವಿಶೇಷ. ಈ ಮೊತ್ತದಲ್ಲಿ ಪೈಪ್‌ಲೈನ್‌ ಕಾಮಗಾರಿ, ಮೋಟರ್‌ ಅವಳವಡಿಸಲಾಗಿದೆ.

ಭವನಕ್ಕೆ ಹೆಚ್ಚು...

ಹೆಚ್ಚಿನ ವಿಸ್ತಾರ ಹೊಂದಿರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರ ಸಮುದಾಯ ಭವನ ನಿರ್ಮಾಣದ ಬೇಡಿಕೆಗೂ ಶಾಸಕ ಆಲಗೂರ ಸ್ಪಂದಿಸಿದ್ದು, ವ್ಯಾಪಕ ಪ್ರಮಾಣದಲ್ಲಿ ಅನುದಾನ ಮಂಜೂರು ಮಾಡಿದ್ದಾರೆ.

2013–14ನೇ ಸಾಲಿನಲ್ಲಿ ₹ 1.46 ಕೋಟಿ, 14–15ರಲ್ಲಿ ₹ 1.12 ಕೋಟಿ, 15–16ರಲ್ಲಿ ₹ 1.30 ಕೋಟಿ, 16–17ರಲ್ಲಿ ₹ 1.75 ಕೋಟಿ, 2017–18ರಲ್ಲಿ ₹ 42.50 ಲಕ್ಷ ಸೇರಿದಂತೆ, ಐದು ವರ್ಷದ ಅವಧಿಯಲ್ಲಿ ಒಟ್ಟು ₹ 6.05 ಕೋಟಿ ಮೊತ್ತವನ್ನು ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರೀಕರಿಸಿದ್ದಾರೆ.

ಇವುಗಳಲ್ಲಿ ಬಹುತೇಕ ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡು ಬಳಕೆಯಾಗುತ್ತಿದ್ದರೆ, ಇನ್ನೂ ಕೆಲವು 90% ಕಾಮಗಾರಿ ಪೂರ್ಣಗೊಂಡು, ಮತ್ತಷ್ಟು ಅನುದಾನದ ನಿರೀಕ್ಷೆಯಲ್ಲಿವೆ. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಕೆಆರ್‌ಐಡಿಎಲ್‌ ವತಿಯಿಂದ ಹೆಚ್ಚಿನವು ನಿರ್ಮಾಣಗೊಂಡಿವೆ.

ಅನುದಾನ ಸದ್ಬಳಕೆ...

2013–14ರಲ್ಲಿ ₹ 1.96 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 1.95 ಕೋಟಿ ಮೊತ್ತದ 71 ಕಾಮಗಾರಿ ಕೈಗೊಳ್ಳಲು ಶಾಸಕರು ಮಂಜೂರಾತಿ ಪತ್ರ ನೀಡಿದ್ದಾರೆ. ಇದರಲ್ಲಿ ₹ 1.93 ಕೋಟಿ ಖರ್ಚಾಗಿದೆ. ₹ 50 ಲಕ್ಷ ಮೊತ್ತಕ್ಕೆ ಕಾಮಗಾರಿ ಗುರುತಿಸಿ ಅನುದಾನ ಮಂಜೂರಿಕರಿಸದಿದ್ದರೆ, ಮಂಜೂರಾದ ಮೊತ್ತದಲ್ಲೂ ಕೇವಲ ₹ 2 ಲಕ್ಷ ಮಾತ್ರ ಖರ್ಚಾಗಬೇಕಿದೆ.

2014–15ರಲ್ಲಿ ₹ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 1.99.50.000 ಮೊತ್ತದ ವೆಚ್ಚದಲ್ಲಿ 69 ಕಾಮಗಾರಿ ಕೈಗೊಳ್ಳಲು ಮಂಜೂರಾತಿ ಪತ್ರವನ್ನು ಆಲಗೂರ ನೀಡಿದ್ದಾರೆ. ಇದರಲ್ಲಿ ₹ 1.92 ಕೋಟಿ ಖರ್ಚಾಗಿದೆ. ಈ ಆರ್ಥಿಕ ವರ್ಷದಲ್ಲೂ ₹ 50 ಲಕ್ಷ ಮೊತ್ತಕ್ಕೆ ಕಾಮಗಾರಿ ಗುರುತಿಸಿ ಅನುದಾನ ಮಂಜೂರಿಕರಿಸದಿದ್ದರೆ, ಮಂಜೂರಾದ ಹಣದಲ್ಲಿ ಇನ್ನೂ ₹ 7 ಲಕ್ಷ ವೆಚ್ಚವಾಗಬೇಕಿದೆ.

2015–16ರಲ್ಲೂ ₹ 2 ಕೋಟಿ ಮಂಜೂರಾಗಿದ್ದು, 50 ಕಾಮಗಾರಿ ನಡೆಸಲು ಪೂರ್ಣ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ₹ 1.88 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು, ₹ 12 ಲಕ್ಷವಷ್ಟೇ ಉಳಿದಿದೆ. ಈ ಆರ್ಥಿಕ ಸಾಲಿನಲ್ಲಿ ಮಾತ್ರ ಬೆರಳೆಣಿಕೆ ಕಾಮಗಾರಿ ಪೂರ್ಣಗೊಂಡಿಲ್ಲ.

2016–17ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, 49 ಕಾಮಗಾರಿ ಕೈಗೊಳ್ಳಲು ₹ 1.97 ಕೋಟಿ ಮೊತ್ತಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಇದರಲ್ಲಿ ₹ 1.48 ಕೋಟಿ ವೆಚ್ಚವಾಗಿದ್ದು, ₹ 52 ಲಕ್ಷ ಖರ್ಚಾಗಬೇಕಿದೆ. ವರ್ಷ ಗತಿಸಿದರೂ ಹಲ ಕಾಮಗಾರಿಗಳು ಈ ಆರ್ಥಿಕ ವರ್ಷದಲ್ಲಿ ಪೂರ್ಣಗೊಂಡಿಲ್ಲ.

2017–18ನೇ ಸಾಲಿನಲ್ಲಿ ಬಿಡುಗಡೆಯಾದ ₹ 1.50 ಕೋಟಿ ಮೊತ್ತದಲ್ಲಿ, 13 ಕಾಮಗಾರಿ ಕೈಗೊಳ್ಳಲು ₹ 45 ಲಕ್ಷ ಮೊತ್ತಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಕಾಮಗಾರಿ ಆರಂಭಗೊಳ್ಳುವುದು ಬಾಕಿಯಿದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಅನುದಾನ

‘ಶಾಸಕರ ನಿಧಿಯಡಿ ಉಮರಜ, ದೇವರ ನಿಂಬರಗಿ, ಬರಡೋಲ, ಹಾವಿನಾಳ ಗ್ರಾಮದ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿಸಲು ಜಲಾನಯನ ಇಲಾಖೆ ಮೂಲಕ ₨ 30 ಲಕ್ಷ ಅನುದಾನ ಒದಗಿಸಿರುವೆ. ಇದನ್ನು ಬಳಸಿಕೊಂಡ ರೈತ ಸಮೂಹ ಖುಷಿಯಲ್ಲಿರುವುದು ನನ್ನ ಸಂತಸ ಇಮ್ಮಡಿಸಿದೆ’ ಎಂದು ಶಾಸಕ ರಾಜು ಆಲಗೂರ ತಿಳಿಸಿದರು.

‘ಗ್ರಾಮೀಣ ಪ್ರದೇಶದ ನೀರು, ರಸ್ತೆ ಬೇಡಿಕೆಗೆ ಮನ್ನಣೆ ನೀಡಿರುವೆ. ಎಲ್ಲ ಹಳ್ಳಿಗೂ ಅನುದಾನ ಕೊಡಬೇಕು ಎಂಬ ಉದ್ದೇಶದಿಂದ ಸಮುದಾಯ ಭವನಗಳಿಗೆ ಕನಿಷ್ಠ ₹ 1 ಲಕ್ಷದಿಂದ 2, 3 ಲಕ್ಷದವರೆಗೂ ಅನುದಾನ ಮಂಜೂರು ಮಾಡಿರುವೆ.

ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಪಂಚಾಯತ್‌ರಾಜ್‌, ಕೆಆರ್‌ಐಡಿಎಲ್‌ ವತಿಯಿಂದ ನಡೆದಿರುವ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಲಭ್ಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವೆ’ ಎಂದು ಶಾಸಕ ರಾಜು ತಿಳಿಸಿದರು.

* * 

ಶಾಸಕರು ಸಮುದಾಯ ಭವನಕ್ಕೆ ಅನುದಾನ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಮೂಲ ಸೌಕರ್ಯ ಇಂದಿಗೂ ಕಲ್ಪಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಜನರ ಉಪಯೋಗಕ್ಕೆ ಉದ್ಘಾಟಿಸಲಿ

ಮೂಕಪ್ಪ ಸಂಕಪ್ಪ ಅಣ್ಣಾರಡ್ಡಿ, ಜಾಡರಗಲ್ಲಿ

ಪ್ರತಿಕ್ರಿಯಿಸಿ (+)