ಮಂಗಳವಾರ, ಡಿಸೆಂಬರ್ 10, 2019
19 °C

ಕೆರೆಗಳ ಒತ್ತುವರಿಯಾಗದಂತೆ ನೋಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆಗಳ ಒತ್ತುವರಿಯಾಗದಂತೆ ನೋಡಿಕೊಳ್ಳಿ

ಬೆಳಗಾವಿ: ಜಿಲ್ಲೆಯಲ್ಲಿ ಕೆರೆಗಳ ಜಾಗ ಒತ್ತುವರಿಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಇಲ್ಲಿ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಕೆರೆಗಳ ಒತ್ತುವರಿ ಕುರಿತು ಮರುಸಮೀಕ್ಷೆ ನಡೆಸಬೇಕು. ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಬೇಕು. ತಂತಿಬೇಲಿ ಅಳವಡಿಸಿ, ಸರ್ಕಾರದ ಆಸ್ತಿ ವಶಕ್ಕೆ ಪಡೆಯಬೇಕು’ ಎಂದು ಸೂಚಿಸಿದರು.

‘ರಾಮದುರ್ಗ ತಾಲ್ಲೂಕಿನಲ್ಲಿ ರೈತರಿಗೆ ನೀಡಬೇಕಾದ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಅಕ್ರಮವಾಗಿರುವ ಕುರಿತು ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿ ವರದಿ ಸಲ್ಲಿಸಿದೆ. ಹಣ ವಾಪಸ್‌ ಪಡೆಯುವಂತೆ ತಿಳಿಸಿದೆ. ಹಣವನ್ನು ಸಂಬಂಧಿಸಿದವರಿಂದ ಮರಳಿ ಪಡೆಯುವುದಕ್ಕೂ ವಿಳಂಬ ಮಾಡುತ್ತಿರುವ ರಾಮದುರ್ಗ ತಾಲ್ಲೂಕು ತಹಶೀಲ್ದಾರ್‌ ವಿರುದ್ಧ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಬೇಕು’ ಎಂದು ತಿಳಿಸಿದರು.

‘ಮೊಬೈಲ್ ಆ್ಯಪ್‌ ಬಳಸಿ ಬೆಳೆಗಳ ಸಮೀಕ್ಷೆ ನಡೆಸುವುದು, ಪರಿಹಾರ ವಿತರಣೆ ಸೇರಿದಂತೆ ಅನೇಕ ಯೋಜನೆಗಳ ಅನುಷ್ಠಾನದಲ್ಲಿ ಉಪವಿಭಾಗಾಧಿಕಾರಿಗಳು ಜವಾಬ್ದಾರಿ ನಿರ್ವಹಿಸಬೇಕು. ಪ್ರತಿದಿನ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು. ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯಲು ಅವಕಾಶ ಕೊಡಬಾರದು. ಒಂದು ವೇಳೆ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಲ್ಲಿ ಜಪ್ತಿ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಶೇ. 99ರಷ್ಟು ಬಿತ್ತನೆಯಾಗಿದೆ. ಕೊಯ್ಲು ಪ್ರಾರಂಭವಾಗಿದೆ. ಬೀಜ ಹಾಗೂ ರಸಗೊಬ್ಬರಗಳ ಸಮಸ್ಯೆ ಇಲ್ಲ. ಕೊಯ್ಲು ಪೂರ್ಣಗೊಂಡ ನಂತರ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸುತ್ತಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಜೆ. ಪಾಟೀಲ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿಗಳಾದ ವಿಜಯಕುಮಾರ ಹೊನ್ನಕೇರಿ, ಗೀತಾ ಕೌಲಗಿ, ಆಹಾರ ಇಲಾಖೆ ಉಪನಿರ್ದೇಶಕಿ ಎಸ್‌.ಎಸ್‌. ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ. ಮುನಿರಾಜು ಭಾಗವಹಿಸಿದ್ದರು.

* *

ಉಪವಿಭಾಗಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಎಲ್ಲದಕ್ಕೂ ತಹಶೀಲ್ದಾರ್‌ಗಳ ಕಡೆ ಕೈತೋರಬಾರದು. ಹೀಗಾದರೆ, ಎಸಿ ಕಚೇರಿಗಳು ಏಕಿರಬೇಕು

ಎಸ್‌. ಜಿಯಾವುಲ್ಲಾ

ಜಿಲ್ಲಾಧಿಕಾರಿ

ಪ್ರತಿಕ್ರಿಯಿಸಿ (+)