ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಉತ್ಸವ: ಕಲೆಯಲ್ಲಿ ಶರಣರ ದರ್ಶನ

Last Updated 8 ಫೆಬ್ರುವರಿ 2018, 9:05 IST
ಅಕ್ಷರ ಗಾತ್ರ

ಬೀದರ್‌: ಬಸವ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ರಂಗೋಲಿಯಲ್ಲಿ ಶರಣರ ದರ್ಶನ ಮಾಡಿಸಿದರು.

ಮಹಿಳೆಯರಿಗಾಗಿಯೇ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 12ನೇ ಶತಮಾನದ ಶರಣ, ಶರಣೆಯರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಏಳು ಜನರು ನೆಲದ ಮೇಲೆ ಹಗುರವಾಗಿ ರಂಗೋಲಿ ಪುಡಿಯನ್ನು ಉದುರಿ ಬಿಡುವ ಮೂಲಕ ಶರಣರ ಚಿತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರ ಗಮನ ಸೆಳೆದರು.

ಬಹುತೇಕ ಕಲಾವಿದರು ಬಸವಣ್ಣನ ಭಾವಚಿತ್ರವನ್ನೇ ರಂಗೋಲಿಯಲ್ಲಿ ಬಿಡಿಸಬೇಕು ಎನ್ನುವ ಸಿದ್ಧತೆ ಮಾಡಿಕೊಂಡು ಬಂದಿದ್ದರು. ನಾಲ್ವರು ಬಸವಣ್ಣನ ಸ್ಕೆಚ್‌ ಹಾಕುತ್ತಲೇ ಬೀದರ್‌ನ ಎಸ್‌.ಎಂ.ಪಂಡಿತ ಫೈನ್‌ ಆರ್ಟ್ಸ್‌ ಕಾಲೇಜಿನ ವಿದ್ಯಾರ್ಥಿನಿ ಮಹೇಶ್ವರಿ ಪಾಂಚಾಳ ಅವರು ತಕ್ಷಣ ತಮ್ಮ ನಿಲುವು ಬದಲಿಸಿ ಹನ್ನೆನರಡನೆಯ ಶತಮಾನದ ಶೂನ್ಯಪೀಠದ ಅಲ್ಲಮ ಪ್ರಭು ಚಿತ್ರ ಬಿಡಿಸಲು ಶುರು ಮಾಡಿದರು.

ರಂಗೋಲಿಯಲ್ಲಿ ಕಪ್ಪು ಬಣ್ಣ ಬೆರೆಸಿ ಜಡೆ ಹಾಗೂ ಗಡ್ಡದ ಆಕಾರ ನೀಡುತ್ತ ರಂಗೋಲಿಯಲ್ಲಿ ಅಲ್ಲಂ ಪ್ರಭುವಿನ ಚಿತ್ರ ರಚಿಸಿದರು. ರಂಗೋಲಿಯಲ್ಲೇ ಕಾವಿ ಹೊದಿಕೆ ಹಾಕಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

‘ಬಸವಣ್ಣನ ಭಾವಚಿತ್ರದ ರಂಗೋಲಿ ಬಿಡಿಸಬೇಕು ಅಂದುಕೊಂಡಿದ್ದೆ. ಆದರೆ, ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿ ಆತ್ಮವಿಶ್ವಾಸದಿಂದ ಅಲ್ಲಂ ಪ್ರಭುವಿನ ರಂಗೋಲಿ ಬಿಡಿಸಿದೆ. ರಂಗೋಲಿ ನೋಡಲು ಬಂದ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿರುವುದು ಪ್ರಶಸ್ತಿ ಬಂದಿರುವಷ್ಟೇ ಖುಷಿ ತಂದಿದೆ’ ಎಂದು ಮಹೇಶ್ವರಿ ಪಾಂಚಾಳ ಹೇಳಿದರು.

ಔರಾದ್‌ ತಾಲ್ಲೂಕಿನ ಆಲೂರಿನ ಸಂಗೀತಾ ದುಲಗೆ ಅವರು ಅಕ್ಕಮಹಾದೇವಿಯ ಚಿತ್ರ ಬಿಡಿಸಿ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಪ್ರಾಧಾನ್ಯತೆ ನೀಡಿರುವುದನ್ನು ಬಿಂಬಿಸಿದರು. ಇದಕ್ಕೆ ಪುಷ್ಟಿ ನೀಡುವಂತೆ ಚಿಟಗುಪ್ಪ ಪದವಿ ಕಾಲೇಜಿನ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಗೋಪಮ್ಮ ಪೊಲೀಸ್‌ ಪಾಟೀಲ ಅವರು ಅನುಭವ ಮಂಟಪ ಚಿತ್ರಿಸಿ ಮೆಚ್ಚುಗೆಗೆ ಪಾತ್ರರಾದರು.

ಯೋಗೇಶ ಫೈನ್‌ ಆರ್ಟ್‌ ಕಾಲೇಜಿನ ತುಳಸಿ ವಿಶ್ವಕರ್ಮ, ಬಸವಕಲ್ಯಾಣದ ಶಿಕ್ಷಕಿ ಸುನಿತಾ ಶೀಲವಂತರ, ಸೇಂಟ್ ಜೋಸೆಫ್‌ ಪದವಿ ಪೂರ್ವ ಕಾಲೇಜಿನ ವಿದ್ಯಾವತಿ ಹಿರೇಮಠ, ಚನ್ನಾಟ್ಸ್‌ ಕಾಲೇಜಿನ ಅನ್ನಪೂರ್ಣ ವೈಜನಾಥ ಅವರು ಬಸವಣ್ಣನ ಚಿತ್ರ ಬಿಡಿಸಿ ಗಮನ ಸೆಳೆದರು.

ಜಿಲ್ಲಾಡಳಿತ ಯುವಕರಿಗೆ ಅವಕಾಶ ಕಲ್ಪಿಸದಿದ್ದರೂ ಚನ್ನಾರ್ಟ್ಸ್‌ ಕಾಲೇಜಿನ ಸಿದ್ದಪ್ಪ ಸಂಗಶೆಟ್ಟಿ ಮರಕಲ್‌ ಅವರು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಹಾಗೂ ವಿಠ್ಠಲ್‌ ದತ್ತಾತ್ರೇಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಚಿತ್ರ ಬಿಡಿಸಿ ಯುವಕರಲ್ಲೂ ಅತ್ಯುತ್ತಮ ಕಲಾವಿದರು ಇರುವುದನ್ನು ತೋರಿಸಿದರು.

* * 

ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಪ್ರತಿಯೊಂದು ಸ್ಪರ್ಧೆಯಲ್ಲಿ ಯುವಕ, ಯುವತಿಯರು ಆಸಕ್ತಿಯಿಂದ ಪಾಲ್ಗೊಂಡು ಪ್ರತಿಭೆಯನ್ನು ಮೆರೆದಿದ್ದಾರೆ
ಸುರೇಶ ಚನಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT