ಶುಕ್ರವಾರ, ಡಿಸೆಂಬರ್ 6, 2019
26 °C

ಬಸ್‌ ನಿಲ್ದಾಣ ಗೋಡೆಯಲ್ಲೂ ಮೈದಳೆದ ಹುತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್‌ ನಿಲ್ದಾಣ ಗೋಡೆಯಲ್ಲೂ ಮೈದಳೆದ ಹುತ್ತ

ಯಳಂದೂರು: ಬಸ್‌ ನಿಲ್ದಾಣದ ಒಳ ಹಾಗೂ ಹೊರಭಾಗದಲ್ಲಿ ಆವರಿಸುತ್ತಿರುವ ಹುತ್ತಗಳು. ಮತ್ತೊಂದೆಡೆ ಸ್ಥಳೀಯರ ಬೈಕ್‌ಗಳಿಗೆ ನಿಲುಗಡೆ ತಾಣವಾಗುತ್ತಿರುವ ಬಸ್‌ ನಿಲ್ದಾಣ. ಮಗದೊಂದೆಡೆ ಕಸ, ದೂಳಿನಿಂದ ಗಲೀಜಾಗುತ್ತಿರುವ ಪ್ರದೇಶ, ಇನ್ನು ಕೆಲವೆಡೆ ವಿಗ್ರಹಗಳನ್ನು ಇಟ್ಟು ಪೂಜೆ ಸಲ್ಲಿಸುವ ಕಾರ್ಯ...

ಇದು ತಾಲ್ಲೂಕಿನ ಮಾಂಬಳ್ಳಿ ಸಮೀಪದ ಉತ್ತಂಬಳ್ಳಿ ಬಳಿಯ ಬಸ್‌ ನಿಲ್ದಾಣದ ಸ್ಥಿತಿ. ಯಳಂದೂರು, ಮೈಸೂರು, ಕೊಳ್ಳೇಗಾಲಕ್ಕೆ ಸಂಚರಿಸುವವರ ವಿಶ್ರಾಂತಿಗಾಗಿ ಕಟ್ಟಿದ ಬಸ್‌ ನಿಲ್ದಾಣ ಈಗ ದೇವಾಲಯ ಹಾಗೂ ಹುತ್ತಗಳ ತಾಣವಾಗಿ ಪರಿವರ್ತಿತವಾಗಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕೂಡಿಕೊಳ್ಳುವ ಸ್ಥಳದಲ್ಲಿ 2009–10ನೇ ಸಾಲಿನ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಸ್‌ ತಂಗುದಾಣ ನಿರ್ಮಿಸಲಾಗಿದ್ದು, ಪ್ರತಿನನಿತ್ಯ ನೂರಾರು ಪ್ರಯಾಣಿಕರ ವಿಶ್ರಾಂತಿಗೆ ಬಳಕೆಯಾಗುತ್ತಿತ್ತು.

‘ನಿಲ್ದಾಣದ ಸುತ್ತಮುತ್ತ ಪೊದೆ, ಕಳೆಸಸ್ಯಗಳು ಬೆಳೆಯುತ್ತಿವೆ. ಭಕ್ತರು ತಂಗುದಾಣವನ್ನೇ ಬದಲಾಯಿಸಿದ್ದಾರೆ. ರಸ್ತೆ ಸಮೀಪ ಸಿಕ್ಕಿದ ಹಲವಾರು ದೇವರ ಶಿಲ್ಪಗಳನ್ನು ಇಟ್ಟು ಅರ್ಚನೆ ಮಾಡುತ್ತಿದ್ದಾರೆ. ಹೊರ ಭಾಗದಲ್ಲಿಯೇ ಹುತ್ತ ಬೆಳೆಯುತ್ತಿದೆ. ಬಹುತೇಕರು ಹರಕೆ, ಪೂಜೆ ಸಲ್ಲಿಸಲು ಇಲ್ಲಿಗೆ ಬರುತ್ತಾರೆ. ಪ್ರಯಾಣಿಕರು ಇಲ್ಲಿನ ಸ್ಥಿತಿ ಕಂಡು ಕುಳಿತುಕೊಳ್ಳಲು ಹೆದರುವ ಸ್ಥಿತಿ ಬಂದಿದೆ’ ಎನ್ನುತ್ತಾರೆ ಮದ್ದೂರು ಮಹೇಶ್ ಮತ್ತು ರಾಘವ.

ಸಮೀಪದಲ್ಲಿ ಎಲ್ಲೂ ದೇಗುಲಗಳಿಲ್ಲ. ಇದು ನೂರಾರು ಜನರು ಮತ್ತು ವಾಹನಗಳು ಸಂಚರಿಸುವ ಸ್ಥಳ. ಜಿಲ್ಲೆಯ 3 ಹೆದ್ದಾರಿಗಳು ಇಲ್ಲಿ ಕೂಡಿಕೊಳ್ಳುತ್ತವೆ. ಬಹುತೇಕರಿಗೆ ಬಸ್‌ ನಿಲ್ದಾಣದ ಕಲ್ಪನೆಯೂ ಬರದಂತೆ ಒಣ ತೆಂಗಿನ ಗರಿಗಳನ್ನು ಜೋಡಿಸಿ, ದೀಪ, ಧೂಪ ಇಟ್ಟು ದೇಗುಲ ನಿರ್ಮಿಸಲಾಗಿದೆ ಎನ್ನುತ್ತಾರೆ ಕೊಳ್ಳೇಗಾಲದ ಜಯಂತ್.

‘ಬಿಸಿಲು ಇಲ್ಲವೇ ಮಳೆ ಬಂದರೆ ಆಶ್ರಯಿಸಲು ಸುತ್ತಮುತ್ತ ಸಾರ್ವಜನಿಕ ತಂಗುದಾಣ ಇಲ್ಲ. ಜಿಲ್ಲೆಯ ವಿವಿಧೆಡೆಗೆ ಹೋಗಲು ನಾಮ ಫಲಕವನ್ನು ಸರಿಯಾದ ಸ್ಥಳದಲ್ಲಿ ಅಳವಡಿಸಿಲ್ಲ. ಬಸ್‌ ನಿಲ್ದಾಣದ ಬಳಿ ಬಹುತೇಕ ಹೊರ ರಾಜ್ಯದವರು ದಿಕ್ಕುತಪ್ಪಿ ಬಹುದೂರ ಸಾಗಿ ವಾಪಾಸಾಗುವುದಿದೆ. ವಾಹನ ಸವಾರರಿಗೆ ದಿಕ್ಕು ತೋರಿಸುವ ಫಲಕಗಳನ್ನು ಕಾಣದಂತೆ ಅಳವಡಿಸಿರುವುದು ಇದಕ್ಕೆ ಕಾರಣ. ಹಾಗಾಗಿ, ಸಂಬಂಧಪಟ್ಟ ಇಲಾಖೆ ಮಾರ್ಗದ ದಿಕ್ಕು ಮತ್ತು ಬಸ್‌ ತಂಗುದಾಣ ಉತ್ತಮಪಡಿಸಲಿ’ ಎನ್ನುತ್ತಾರೆ ಯಳಂದೂರು ಪಟ್ಟಣದ ಮಹದೇವ ಮತ್ತು ಮಲ್ಲಿಕಾರ್ಜುನ.

ಪ್ರತಿಕ್ರಿಯಿಸಿ (+)