ಬುಧವಾರ, ಡಿಸೆಂಬರ್ 11, 2019
21 °C

ಸಂಸತ್‌ನಲ್ಲಿ ಪ್ರಧಾನಿ ಮೋದಿ ಪ್ರತಿಪಾದಿಸಿದ ವಿಷಯಗಳ ವಾಸ್ತವಾಂಶ: ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್‌ನಲ್ಲಿ ಪ್ರಧಾನಿ ಮೋದಿ ಪ್ರತಿಪಾದಿಸಿದ ವಿಷಯಗಳ ವಾಸ್ತವಾಂಶ: ಇಲ್ಲಿದೆ ಮಾಹಿತಿ

ನವದೆಹಲಿ: ಸ್ವಾತಂತ್ರ್ಯಾನಂತರ ಸುದೀರ್ಘ ಅವಧಿ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷದ ತಪ್ಪು ನೀತಿಗಳಿಂದಾಗಿ ದೇಶ ಕಷ್ಟ ಅನುಭವಿಸುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಸಭೆಯಲ್ಲಿ ಹೇಳಿದ್ದರು. ಅಲ್ಲದೆ ಬ್ಯಾಂಕ್‌ಗಳ ಬಿಕ್ಕಟ್ಟು, ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಬೀದರ್–ಕಲಬುರ್ಗಿ ರೈಲು ಹಳಿ ಯೋಜನೆ, ಕಾಶ್ಮೀರ ವಿವಾದ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.

ಮೋದಿ ಪ್ರತಿಪಾದಿಸಿದ ವಿಷಯಗಳ ವಾಸ್ತವಾಂಶದ ಬಗ್ಗೆ ದಿ ಕ್ವಿಂಟ್ ವೆಬ್‌ಸೈಟ್ ಪರಿಶೀಲನೆ ನಡೆಸಿದ್ದು, ಅಂಕಿಅಂಶ ಸಹಿತ ವರದಿ ಮಾಡಿದೆ.

ಸುಮಾರು 90 ನಿಮಿಷ ಲೋಕಸಭೆಯಲ್ಲಿ ಮಾತನಾಡಿದ್ದ ಮೋದಿ, ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿ ಮಾಡಬೇಕಿದೆ. ಹೀಗಾಗಿ ಹೆಚ್ಚು ಸಂಪನ್ಮೂಲಗಳನ್ನು ಅಲ್ಲಿಗೆ ಮೀಸಲಿಡಲಾಗಿದೆ ಎಂದು ಹೇಳಿದ್ದರು.

ವಾಸ್ತವವೇನೆಂದರೆ, 2017–18ರಲ್ಲಿ ಈಶಾನ್ಯ ರಾಜ್ಯ ಅಭಿವೃದ್ಧಿ ಇಲಾಖೆಗೆ ಮೀಸಲಿಟ್ಟಿದ್ದ ಅನುದಾನಕ್ಕಿಂತ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 12ರಷ್ಟು ಹೆಚ್ಚು ಅನುದಾನ ಘೋಷಿಸಲಾಗಿದೆ. ಆದರೆ, ಈಶಾನ್ಯ ರಾಜ್ಯಗಳ ಗ್ರಾಮೀಣ ಜೀವನ ಮತ್ತು ಬೊಡೊಲ್ಯಾಂಡ್ ಪ್ರಾದೇಶಿಕ ಮಂಡಳಿಗೆ ಘೋಷಿಸಿರುವ ಅನುದಾನವನ್ನು ಕ್ರಮವಾಗಿ ಶೇ 16 ಮತ್ತು ಶೇ 33ರಷ್ಟು ಕಡಿತ ಮಾಡಲಾಗಿದೆ.

ವಸೂಲಾಗದ ಸಾಲದಿಂದಾಗಿ (ಎನ್‌ಪಿಎ) ಬ್ಯಾಂಕುಗಳು ಬಿಕ್ಕಟ್ಟು ಎದುರಿಸುವುದಕ್ಕೆ ಈ ಹಿಂದಿನ ಸರ್ಕಾರಗಳು ಮತ್ತು ಅವುಗಳ ಬ್ಯಾಂಕಿಂಗ್ ನೀತಿಗಳೇ ಕಾರಣ ಎಂದು ಮೋದಿ ಹೇಳಿದ್ದರು.

ದಾಖಲೆಗಳ ಪ್ರಕಾರ, 2008–09ರಲ್ಲಿ ಸಂಭವಿಸಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ವಿಚಾರಗಳು ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಲು ಕಾರಣವಾಗಿವೆ. 2000ನೇ ಇಸವಿಗಿಂತಲೂ ಮೊದಲಿನ, ಹಿಂದಿನ ಎನ್‌ಡಿಎ ಸರ್ಕಾರವಿದ್ದಾಗಿನ ಬ್ಯಾಂಕಿಂಗ್ ನೀತಿಗಳೂ ಎನ್‌ಪಿಎ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂಡಿಯಾಸ್ಪೆಂಡ್‌ ತನಿಖಾ ವರದಿ ಹೇಳಿರುವಂತೆ, ಪರಿಣತಿ ಹೊಂದಿಲ್ಲದವರು ಕೈಗೆತ್ತಿಕೊಂಡಿರುವ ದೀರ್ಘಾವಧಿಯ ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣವನ್ನು ವಾಣಿಜ್ಯ ಬ್ಯಾಂಕುಗಳು ಹೆಚ್ಚು ಮಾಡಿದ್ದವು. 2010-11ರಲ್ಲಿ ಕಾರ್ಪೋರೇಟ್ ಕ್ಷೇತ್ರದ ವಸೂಲಾಗದ ಸಾಲದ ಪ್ರಮಾಣ ಶೇ 67ರಷ್ಟು ಹೆಚ್ಚಾಗಿತ್ತು. 2013ರ ನಂತರ ಸಾಲ ವಸೂಲಾತಿ ಪ್ರಮಾಣದಲ್ಲಿ ಗಣನೀಯ, ಅಂದರೆ ಶೇ 53ರಷ್ಟು ಇಳಿಕೆಯಾಗಿದೆ.

‘ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೀದರ್–ಕಲಬುರ್ಗಿ ರೈಲು ಹಳಿ ನಿರ್ಮಾಣ ಯೋಜನೆಗೆ ಅನುಮೋದನೆ ದೊರೆತಿತ್ತು. 2004ರಿಂದ 2013ರ ವರೆಗೆ ಏನೂ ಕೆಲಸವಾಗಿಲ್ಲ. ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರವಿದ್ದಾಗ ಕಾಮಗಾರಿ ಆರಂಭವಾಗಿತ್ತು’ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ ಮೋದಿ ಹೇಳಿದ್ದರು.

ವಾಸ್ತವದಲ್ಲಿ, 107 ಕಿಲೋ ಮೀಟರ್ ದೂರದ ಬೀದರ್–ಕಲಬುರ್ಗಿ ರೈಲು ಹಳಿ ಯೋಜನೆಗೆ 2000ನೇ ಇಸವಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50ರ ಅನುದಾನ ಹಂಚಿಕೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಹಾಗೂ ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚಕ್ಕೆ 2007ರಲ್ಲಿ ರೈಲ್ವೆ ಇಲಾಖೆ ಅನುಮೋದನೆ ನೀಡಿತ್ತು. 2014ರ ವೇಳೆಗೆ ಶೇ 91.5ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು ಎಂಬುದು 2014–15ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಿಂದ ತಿಳಿದುಬಂದಿದೆ.

‘ಪಂಡಿತ್ ಜವಹರಲಾಲ್ ನೆಹರು ದೇಶದ ಮೊದಲ ಪ್ರಧಾನಿಯಾಗುವ ಬದಲು ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಿದ್ದಿದ್ದರೆ ಇಡೀ ಕಾಶ್ಮೀರ ಇಂದು ನಮ್ಮದಾಗಿರುತ್ತಿತ್ತು’ ಎಂದೂ ಮೋದಿ ಹೇಳಿದ್ದರು.

ಆದರೆ ತಜ್ಞರು ಹೇಳುವ ಪ್ರಕಾರ, ಕಾಶ್ಮೀರವನ್ನು ಭಾರತದ ಭಾಗವನ್ನಾಗಿ ಮಾಡಿಕೊಳ್ಳುವುದರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರಿಗೂ ಅಷ್ಟೊಂದು ಆಸಕ್ತಿ ಇದ್ದಂತಿರಲಿಲ್ಲ. ಈ ಬಗ್ಗೆ ಭಾರತದ ವಿದೇಶಾಂಗ ಮತ್ತು ಭದ್ರತಾ ನೀತಿಗಳ ಇತಿಹಾಸದ ವಿಚಾರದಲ್ಲಿ ತಜ್ಞರಾಗಿರುವ, ನಿವೃತ್ತ ಸೇನಾಧಿಕಾರಿ ಶ್ರೀನಾಥ್ ರಾಘವನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಒಂದು ಹಂತದಲ್ಲಿ ಜುನಾಗಢ ಮತ್ತು ಹೈದರಾಬಾದ್‌ ಅನ್ನು ಪಡೆಯುವುದಕ್ಕಾಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಪಟೇಲ್ ಸಿದ್ಧರಾಗಿದ್ದರು ಎಂದು ಶ್ರೀನಾಥ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಕೆಲವು ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಬರಹಗಾರ ಸುಧೀಂದ್ರ ಕುಲಕರ್ಣಿಯೂ ಹೇಳಿದ್ದಾರೆ. ಜವಹರ್‌ಲಾಲ್ ನೆಹರು ಮತ್ತು ವಲ್ಲಭಭಾಯಿ ಪಟೇಲರು ಪಾಕಿಸ್ತಾನದೊಂದಿಗೆ ಕದನವಿರಾಮ ಒಪ್ಪಿಕೊಂಡದ್ದು ಜಮ್ಮು ಮತ್ತು ಕಾಶ್ಮೀರದ ವಿಭಜನೆಗೆ ಕಾರಣವಾಗಿತ್ತು ಎಂದು ಕುಲಕರ್ಣಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕುಲಕರ್ಣಿ ಅವರು ತಮ್ಮ ವಿಚಾರವನ್ನು ಸಮರ್ಥಿಸಿಕೊಳ್ಳಲು ಭಾರತದ ಮಾಜಿ ರಾಯಭಾರಿ ಟಿ.ಸಿ.ಎ. ರಾಘವನ್ ಅವರ ದಿ ಪೀಪಲ್ ನೆಕ್ಸ್ಟ್ ಡೋರ್ (The People Next Door) ಪುಸ್ತಕದ ಆಯ್ದ ಭಾಗವನ್ನು ಟ್ವಿಟರ್ ಜತೆ ಲಗತ್ತಿಸಿದ್ದಾರೆ.

(ಟಿ.ಸಿ.ಎ. ರಾಘವನ್ ಅವರ ದಿ ಪೀಪಲ್ ನೆಕ್ಸ್ಟ್ ಡೋರ್ (The People Next Door) ಪುಸ್ತಕದ ಆಯ್ದ ಭಾಗ – ಕೃಪೆ:ಟ್ವಿಟರ್)

ಪ್ರತಿಕ್ರಿಯಿಸಿ (+)