ನದಿ ಪಾತ್ರಕ್ಕಿಳಿದು ರೈತರ ಪ್ರತಿಭಟನೆ

7

ನದಿ ಪಾತ್ರಕ್ಕಿಳಿದು ರೈತರ ಪ್ರತಿಭಟನೆ

Published:
Updated:

ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿ ಇರುವ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯಿಂದ ತುಂಗಭದ್ರಾ ನದಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಜನರು ಬುಧವಾರ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿರುವ ತುಂಗಭದ್ರಾ ನದಿ ಪಾತ್ರಕ್ಕೆ ಇಳಿದು ಪ್ರತಿಭಟನೆ ನಡೆಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ‘ಹದಿನೈದು ದಿನಗಳಿಂದ ಈ ಭಾಗದ ರೈತರ ಜೀವನಾಡಿ ತುಂಗಭದ್ರಾ ನದಿ ಬತ್ತಿಹೋಗಿದೆ. ಇದರಿಂದ ಹಮ್ಮಿಗಿ ಗ್ರಾಮದಿಂದ ತಾಲ್ಲೂಕಿನ ಸಿಂಗಟಾಲೂರ, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಹೆಸರೂರು ಗ್ರಾಮಗಳ ಸಾವಿರಾರು ರೈತರು ತೊಂದರೆ ಅನುಭವಿಸುವಂತಾಗಿದೆ’ ಎಂದು ತಿಳಿಸಿದರು.

‘ನದಿ ನೀರನ್ನು ನಂಬಿಕೊಂಡು ಈ ಭಾಗದ ರೈತರು ಭತ್ತ, ಕಬ್ಬು, ಹತ್ತಿ, ಸೂರ್ಯಕಾಂತಿ ಮೊದಲಾದ ವಾಣಿಜ್ಯ ಬೆಳೆ ನಾಟಿ ಮಾಡಿದ್ದಾರೆ. ಈಗ ನದಿಯಲ್ಲಿ ನೀರಿಲ್ಲದ ಕಾರಣದಿಂದ ಬೆಳೆಗಳು ಒಣಗುತ್ತಲಿದ್ದು, ತಕ್ಷಣ ಹುಲಿಗುಡ್ಡ ಯೋಜನೆಯಿಂದ ನದಿಗೆ ನೀರು ಬಿಡಬೇಕು’ ಎಂದು ಆಗ್ರಹಿಸಿದರು.

ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನ ಬೆಟಗೇರಿ ಮಾತನಾಡಿ, ‘ಮಳೆಗಾಲದಲ್ಲಿ ಸಕಾಲದಲ್ಲಿ ಮಳೆಯಾಗದೆ ಇದ್ದುದರಿಂದ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ನದಿ ನೀರನ್ನು ನಂಬಿಕೊಂಡು ಈಗ ಬಿತ್ತನೆ ಮಾಡಿದ್ದು, ತೆನೆ ಬಿಡುವ ಸಮಯದಲ್ಲಿ ನೀರಿನ ಕೊರತೆಯಾಗಿದೆ. ನದಿಗೆ ನೀರು ಬಿಡದಿದ್ದರೆ ರೈತರೆಲ್ಲ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಮಾತನಾಡಿ, ‘ಹಮ್ಮಿಗಿ ಹುಲಿಗುಡ್ಡ ಯೋಜನೆಯಿಂದ ಗದಗ–ಬೆಟಗೇರಿ ಪಟ್ಟಣಕ್ಕೆ ನಿಯಮಿತವಾಗಿ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ, ಸಚಿವ ಎಚ್‌.ಕೆ.ಪಾಟೀಲ ರೈತರ ಕಡೆಗೆ ಗಮನ ಹರಿಸುತ್ತಿಲ್ಲ. ತಕ್ಷಣ ನದಿಗೆ ನೀರು ಹರಿಸುವ ಕುರಿತಂತೆ ಅವರು ಅಧಿಕಾರಿಗಳಿಗೆ ಆದೇಶ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಮಾತನಾಡಿ, ‘ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಫೆ. 12ರ ಒಳಗೆ ನದಿಗೆ ನೀರು ಹರಿಸದಿದ್ದರೆ ರೈತರೆಲ್ಲ ಸೇರಿಕೊಂಡು ತಹಶೀಲ್ದಾರ್ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದರು.

ಜಗದೀಶ ಮೇಟಿ, ಶಂಕ್ರಪ್ಪ ಹಂಪಸಾಗರ, ಶರಣಪ್ಪ ಕುಂಬಾರ, ಮೌಲಾಸಾಬ್ ಕಂಬಳಿ, ಮದರಸಾಬ್ ಸಿಂಗಮಲ್ಲಿ, ರಾಜಸಾಬ್ ಜವಳಗೇರಿ, ಕರಿಯಪ್ಪ ಕಂಬಳಿ, ಹನುಮಪ್ಪ ಗಾಂಜಿ, ಮರಿಸ್ವಾಮಿ ಹಂಪಸಾಗರ, ಹನುಮಪ್ಪ ಡೊಳ್ಳಿನ, ಮಹ್ಮದರಫಿ ಹಂಚಿನಾಳ, ಅಡಿವೆಪ್ಪ ಕುಂಬಾರ, ಎಚ್.ಆರ್.ಕಾಗನೂರ, ಭೀಮಪ್ಪ ಕ್ಯಾತಣ್ಣವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry