ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರದಲ್ಲಿ ಆಸ್ಪತ್ರೆಯಿಂದ ಉಗ್ರ ಪರಾರಿ: ಜೈಲಿನ ಮುಖ್ಯಾಧಿಕಾರಿ ಅಮಾನತು

Last Updated 8 ಫೆಬ್ರುವರಿ 2018, 12:23 IST
ಅಕ್ಷರ ಗಾತ್ರ

ಶ್ರೀನಗರ: ಇಲ್ಲಿನ ವೈದ್ಯಕೀಯ ಆರೋಗ್ಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಮಂಗಳವಾರ ಪೊಲೀಸರ ಮೇಲೆ ನಡೆದ ದಾಳಿ ಮತ್ತು ಅಲ್ಲಿ ಪೊಲೀಸ್ ಕಸ್ಟಡಿಯಿಂದ ಪಾಕಿಸ್ತಾನದ ನವೀದ್ ಜಾತ್ ಎಂಬ ಉಗ್ರಗಾಮಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಶ್ರೀನಗರ ಜೈಲಿನ ಮುಖ್ಯಾಧಿಕಾರಿ ಹಿಲಾಲ್ ಅಹ್ಮದ್ ರಾಥೇರ್ ಅವರನ್ನು ರಾಜ್ಯ ಸರ್ಕಾರ ಬುಧವಾರ ಅಮಾನತು ಮಾಡಿದೆ.

ಅವರ ಸ್ಥಾನಕ್ಕೆ ಅನಂತನಾಗ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಕುಮಾರ್ ಕಾಕರ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಗೃಹ ಖಾತೆ ಪ್ರಧಾನ ಕಾರ್ಯದರ್ಶಿ ಆರ್.ಕೆ.ಗೋಯಲ್ ತಿಳಿಸಿದ್ದಾರೆ.

ಐವರ ಬಂಧನ
ನವೀದ್ ಜಾತ್ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿ ಪುಲ್ವಾಮಾ ಜಿಲ್ಲೆಯಲ್ಲಿ ಐವರನ್ನು ಬಂಧಿಸಿದ್ದಾರೆ.

ಇವರು ನವೀದ್ ಜಾತ್ ಪರಾರಿಯಾಗಲು ಸಹಕರಿಸಿದವರು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಗ್ಯ ತಪಾಸಣೆಗಾಗಿ ನವೀದ್ ಮತ್ತು ಇತರ ಐವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಇವರ ಪಹರೆಗಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದರಿಂದ ಇಬ್ಬರು ಪೊಲೀಸರು ಸತ್ತಿದ್ದಾರೆ.

ಈ ಘಟನೆಯಲ್ಲಿ ಭದ್ರತಾ ವೈಫಲ್ಯ ಮತ್ತು ಪೊಲೀಸರೂ ಶಾಮೀಲಾಗಿರುವ ಸಾಧ್ಯತೆ ಬಗ್ಗೆ ಇಲಾಖಾ ತನಿಖೆ ಆರಂಭಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ತಪ್ಪಿಸಿಕೊಂಡಿರುವ ನವೀದ್ ಜಾತ್ ಮುಜಾಹಿದ್ದೀನ್ ಕಮಾಂಡರ್ ಸದ್ದಾಂ ಪೆದ್ದರ್ ಎಂಬ ಭಯೋತ್ಪಾದಕನೊಂದಿಗೆ ಎಕೆ–47 ರೈಫಲ್ ಹಿಡಿದುಕೊಂಡಿರುವ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಗುರುವಾರ ಕಾಣಿಸಿಕೊಂಡಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT