7

‘ಇಷ್ಟಕಾಮ್ಯ’ದ ಹುಡುಗಿ

Published:
Updated:
‘ಇಷ್ಟಕಾಮ್ಯ’ದ ಹುಡುಗಿ

2013ರಲ್ಲಿ ತೆರೆ ಕಂಡ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಬಂದವರು ಕಾವ್ಯಾ ಶೆಟ್ಟಿ. ಎತ್ತರದ ನಿಲುವು, ಸದಾಸ್ಮಿತ ಮುಖಭಾವ ಇವರನ್ನು ನೋಡಿದ ತಕ್ಷಣ ಕಾಣುವ ಲಕ್ಷಣಗಳು. ಕಾವ್ಯಾ ಅಭಿನಯಿಸಿರುವ ‘ಸಂಹಾರ’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ‘ಚಂದನವನ’ ಮಾತನಾಡಿಸಿತು. ಅವರ ಸಿನಿಮಾ ಯಾನವನ್ನು ಅರಿಯುವ ಯತ್ನ ನಡೆಸಿತು.

ಕಾವ್ಯಾ ಅವರು ಓದಿದ್ದು ಎಂಜಿನಿಯರಿಂಗ್ – ಉಡುಪಿ ಜಿಲ್ಲೆಯ ನಿಟ್ಟೆ ಕಾಲೇಜಿನಲ್ಲಿ. ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಇವರು ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದರು. ಆಗ ಇವರಿಗೆ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಒಂದು ಪ್ರಶಸ್ತಿ ಲಭಿಸಿತು. ಅದು ಕಾವ್ಯಾ ಅವರ ಸಿನಿಮಾ ಯಾನದ ಮೊದಲ ಮೆಟ್ಟಿಲಾಯಿತು. ‘ಮಾಡೆಲಿಂಗ್ ಮೂಲಕ ನಾನು ಸಿನಿಮಾ ರಂಗಕ್ಕೆ ಬಂದೆ. ಈಗಲೂ ಆಗೊಮ್ಮೆ – ಈಗೊಮ್ಮೆ ಮಾಡೆಲಿಂಗ್ ಮಾಡುತ್ತೇನೆ. ಆದರೆ ಮಾಡೆಲಿಂಗ್‌ಗಿಂತಲೂ ಸಿನಿಮಾ ಹೆಚ್ಚು ಇಷ್ಟವಾಗುತ್ತದೆ’ ಎನ್ನುತ್ತಾರೆ ಕಾವ್ಯಾ.

ಇವರು ಹುಟ್ಟಿದ್ದು, ಬೆಳೆದಿದ್ದು ಮಂಗಳೂರಿನಲ್ಲಿ. ಕುಟುಂಬದ ಯಾರೊಬ್ಬರೂ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದವರಲ್ಲ. ರಂಗಭೂಮಿಯ ಜೊತೆ ಕೂಡ ನಂಟು ಹೊಂದಿದ್ದವರಲ್ಲ. ಇವರ ಕುಟುಂಬದಿಂದ ಅಭಿನಯದ ಲೋಕ ಪ್ರವೇಶಿಸಿದವರಲ್ಲಿ ಕಾವ್ಯಾ ಅವರೇ ಮೊದಲಿಗರು.

ಕಾವ್ಯಾ ಜೊತೆ ಮಾತನಾಡುವಾಗ, 2016ರಲ್ಲಿ ತೆರೆಗೆ ಬಂದ ‘ಇಷ್ಟಕಾಮ್ಯ’ ಚಿತ್ರದ ಬಗ್ಗೆ ಅವರಲ್ಲಿ ಇರುವ ಪ್ರೀತಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ‘ನಾನು ತಮಿಳು, ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿದ್ದೇನೆ. ಆದರೆ ನನಗೆ ಯಶಸ್ಸು ತಂದುಕೊಟ್ಟಿದ್ದು ಇಷ್ಟಕಾಮ್ಯ ಸಿನಿಮಾ. ಇಷ್ಟು ದಿನಗಳ ಸಿನಿಮಾ ಪ್ರಯಾಣದಲ್ಲಿ ಇಷ್ಟಕಾಮ್ಯದ ನನ್ನ ಪಾತ್ರ ಜನರಿಗೆ ಹೆಚ್ಚು ಇಷ್ಟವಾಗಿದೆ. ಅವರು ಅದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಆ ಸಿನಿಮಾ ತೆರೆಗೆ ಬಂದ ನಂತರ ನನಗೆ ಕನ್ನಡದಲ್ಲೇ ಒಳ್ಳೆಯ ಅವಕಾಶಗಳು ಸಿಕ್ಕವು.

ಒಳ್ಳೆಯ ಅವಕಾಶಗಳು ಬೇರೆ ಭಾಷೆಗಳಲ್ಲಿ ದೊರೆತರೆ ಅಲ್ಲಿಯೂ ಅಭಿನಯಿಸುತ್ತೇನೆ. ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸುವುದು ನಮಗೆ ಅಷ್ಟೇನೂ ಕಷ್ಟವಲ್ಲ’ ಎಂಬುದು ಕಾವ್ಯಾ ಅವರ ಮಾತು.

‘ಸಂಹಾರ’ ಸಿನಿಮಾದಲ್ಲಿ ಇವರದ್ದು ಜಾನಕಿ ಎಂಬ ಹೆಸರಿನ ಪತ್ರಕರ್ತೆಯ ಪಾತ್ರ. ‘ಈ ಪಾತ್ರ ಗ್ಲಾಮರಸ್ ಆಗಿ ಹಾಗೂ ಲವಲವಿಕೆಯಿಂದ ಇರುವಂಥದ್ದು. ಇದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ’ ಎಂದರು ಕಾವ್ಯಾ.

‘ನಾನು ನಟಿಯಾಗಿ ಇಂಥದ್ದೇ ಸಿನಿಮಾಗಳಲ್ಲಿ ಅಭಿನಯಿಸಬೇಕು, ಇಂಥದ್ದರಲ್ಲಿ ಅಭಿನಯಿಸಬಾರದು ಎಂಬ ಬೇಲಿ ಹಾಕಿಕೊಂಡಿಲ್ಲ. ನನಗೆ ಸವಾಲು ಅಂತ ಅನಿಸುವ ಯಾವುದೇ ಪಾತ್ರವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನನಗೆ ಬಹಳ ಇಷ್ಟವಾಗುವುದು, ಐತಿಹಾಸಿಕ ಕಥೆ ಹೊಂದಿರುವ ಸಿನಿಮಾಗಳ ಹಾಗೂ ಹಿಂದಿನ ಕಾಲದ ಕಥೆ ಹೊಂದಿರುವ ಸಿನಿಮಾಗಳ ಪಾತ್ರ. ಆದರೆ ನಮ್ಮಲ್ಲಿ ಇಂತಹ ಸಿನಿಮಾಗಳು ತಯಾರಾಗುವುದು ಕಡಿಮೆ. ದೇವದಾಸ್ ಸಿನಿಮಾದಲ್ಲಿ ಐಶ್ವರ್ಯಾ ರೈ ಮಾಡಿದ ಪಾರು ಪಾತ್ರದಂಥವು ನನಗೆ ಇಷ್ಟ’ ಎಂದು ಕಾವ್ಯಾ ತಮ್ಮ ಇಷ್ಟಗಳ ಬಗ್ಗೆ ಹೇಳಿಕೊಂಡರು.

ಕಾವ್ಯಾ ಅವರಿಗೆ ಕನ್ನಡದಲ್ಲಿ ಸುದೀಪ್ ಬಹಳ ಇಷ್ಟವಾಗುವ ನಟ. ‘ಎಲ್ಲ ನಾಯಕ ನಟರ ಸಿನಿಮಾಗಳನ್ನೂ ನಾನು ನೋಡುತ್ತಿರುತ್ತೇನೆ’ ಎಂದರು. ಅವರಿಗೆ ಇದುವರೆಗೆ ದೊರೆತಿರುವ ಬಹುತೇಕ ಪಾತ್ರಗಳು ಗ್ಲಾಮರಸ್ ಆಗಿರುವಂಥವು.

ಈ ಗ್ಲಾಮರ್ ನಟಿಗೆ ಇನ್ನೊಂದು ಆಸೆ ಇದೆ. ಅದು ಸಿನಿಮಾ ನಿರ್ಮಾಣ ತಂಡದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬುದು. ‘ಸಿನಿಮಾ ನಿರ್ದೇಶನದ ಕೆಲಸ ನನ್ನ ಪಾಲಿಗೆ ಸುಲಭದ್ದಲ್ಲ. ಆದರೆ ನಿರ್ಮಾಣ ತಂಡದ ಜೊತೆ ಇದ್ದು, ಹಣಕಾಸು ನಿರ್ವಹಣೆಯ ಕೆಲಸ ಮಾಡಬೇಕು ಎಂಬ ಆಸೆ ಇದೆ’ ಎನ್ನುತ್ತಾರೆ ಕಾವ್ಯಾ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry