ಗುರುವಾರ , ಡಿಸೆಂಬರ್ 12, 2019
24 °C

‘ಕಾಲಚಕ್ರ’ದ ಸುಳಿಯಲ್ಲಿ ವಸಿಷ್ಠ ಸಿಂಹ

Published:
Updated:
‘ಕಾಲಚಕ್ರ’ದ ಸುಳಿಯಲ್ಲಿ ವಸಿಷ್ಠ ಸಿಂಹ

‘ನನಗೆ ಸಾಂಸಾರಿಕ ವಿಷಯ ಗೊತ್ತಿಲ್ಲ. ಆದರೆ, ಚಿತ್ರದಲ್ಲಿ ನಿರ್ದೇಶಕರು ನನ್ನನ್ನು ಸಂಸಾರಿಯಾಗಿ ಮಾಡಿದ್ದಾರೆ. ಸಿನಿಮಾದಲ್ಲಿನ ಪಾತ್ರ ನನ್ನನ್ನು ಬಹುವಾಗಿ ಕಾಡಿದೆ’ ಎಂದು ತಾವು ‘ಕಾಲಚಕ್ರ’ದ ಸುಳಿಗೆ ಸಿಲುಕಿದ ಬಗೆಯನ್ನು ಬಿಡಿಸಿಟ್ಟರು ನಟ ವಸಿಷ್ಠ ಸಿಂಹ.

ವಸಿಷ್ಠ ಸಿಂಹ ಬಹುಬೇಡಿಕೆ ಖಳನಟ. ಯುವ ಮತ್ತು ಮಧ್ಯವಯಸ್ಕನ ಎರಡು ವಿಭಿನ್ನ ಶೇಡ್‌ ಇರುವ ‘ಕಾಲಚಕ್ರ’ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅವರು ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ಸುಮಂತ್ ಕಾಂತಿ ನಿರ್ದೇಶನದ ಈ ಚಿತ್ರದ ಶೂಟಿಂಗ್‌ ಕೂಡ ಮುಗಿದಿದೆಯಂತೆ. ಚಿತ್ರೀಕರಣ ಮುಗಿಸಿದ ಬಳಿಕ ಸಿನಿಮಾಕ್ಕೆ ಹೆಸರಿಟ್ಟಿರುವ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿತ್ತು.

‘ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಅದೇ ವೇಳೆ ಮಫ್ತಿ ಚಿತ್ರದಲ್ಲಿಯೂ ನಟಿಸುತ್ತಿದ್ದೆ. ಅರವತ್ತು ವರ್ಷ ದಾಟಿದ ವಯಸ್ಕನ ಪಾತ್ರ ಕೂಡ ನಿರ್ವಹಿಸಿದ್ದೇನೆ. ಆಪ್ತರಕ್ಷಕದಲ್ಲಿ ವಿಷ್ಣುವರ್ಧನ್‌ ಅವರು ಗಂಟಲಿಗೆ ಬಟ್ಟೆ ಕಟ್ಟಿಕೊಂಡು ಧ್ವನಿ ನೀಡಿದ್ದಂತೆ. ಈ ಪಾತ್ರಕ್ಕೆ ನಾನು ಅದೇ ಮಾದರಿ ಅನುಸರಿಸಿದ್ದೇನೆ. ಡಬ್ಬಿಂಗ್‌ ಮಾಡಲು ಐದು ದಿನ ತೆಗೆದುಕೊಂಡೆ’ ಎಂದರು ವಸಿಷ್ಠ ಸಿಂಹ.

ನಿರ್ದೇಶಕ ಸುಮಂತ್‌ ಕಾಂತಿ ಒಮ್ಮೆ ಪೊಲೀಸ್‌ ಆಯುಕ್ತರ ಕಚೇರಿಗೆ ಹೋಗಿದ್ದರಂತೆ. ಅಲ್ಲಿ ಕಚೇರಿ ಸ್ವಚ್ಛಗೊಳಿಸುವ ಸಿಬ್ಬಂದಿ ನಡುವೆ ನಡೆಸುತ್ತಿದ್ದ ಸಂಭಾಷಣೆಯೇ ಕಾಲಚಕ್ರದ ರೂಪ ಪಡೆದಿದೆಯಂತೆ. ಇದು ಸೈಕಾಲಜಿ ಆಧಾರಿತ ಕಥಾವಸ್ತು ಹೊಂದಿದೆ. ಚಿತ್ರಕ್ಕೆ ಬಂಡವಾಳ ಕೂಡ ಅವರೇ ಹೂಡಿದ್ದಾರೆ. ಜತೆಗೆ, ಚಿತ್ರದ ಎರಡನೇ ಭಾಗಕ್ಕೂ ಚಿತ್ರಕಥೆ ಹೆಣೆಯಲಾಗುತ್ತಿದೆ ಎಂಬ ಗುಟ್ಟು ಬಿಚ್ಚಿಟ್ಟರು.

ಕೊಡಗು ಮೂಲದ ರಕ್ಷಾ ಅವರಿಗೆ ಇದು ಮೊದಲ ಚಿತ್ರ. ಅವರು ತಮಿಳು ಚಿತ್ರವೊಂದರಲ್ಲಿ ನಟಿಸಿದ್ದಾರೆ. ‘ಇದು ಸಾಫ್ಟ್‌ವೇರ್ ಎಂಜಿನಿಯರ್‌ ಕುಟುಂಬವೊಂದರಲ್ಲಿ ನಡೆಯುವ ಕಥೆ. ಇದರಲ್ಲಿ ಆವಿಕಾ ರಾಠೋಡ್‌ ನನ್ನ ಪುತ್ರಿ. ಅವಳ ಅಭಿನಯ ಪ್ರೇಕ್ಷಕರಿಗೆ ಬೆರಗು ಮೂಡಿಸಲಿದೆ’ ಎಂದರು.

ಖಳನಟ ರಾಜ್‌ ದಿಲೀಪ್‌ ಶೆಟ್ಟಿ ಈ ಚಿತ್ರದಲ್ಲಿ ಅರೆನಗ್ನರಾಗಿ ಕಾಣಿಸಿಕೊಂಡಿದ್ದಾರಂತೆ. ‘ಚಿತ್ರಪೂರ್ತಿ ನಗ್ನರಾಗಿಯೇ ಕಾಣಿಸಿಕೊಳ್ಳಬೇಕು ಎಂದು ನಿರ್ದೇಶಕರು ಹೇಳಿದಾಗ ಆತಂಕಗೊಂಡಿದ್ದೆ. ಕೊನೆಗೆ, ಧರಿಸಲು ಚಡ್ಡಿ ನೀಡಿದಾಗ ಕೊಂಚ ಸಮಾಧಾನವಾಯಿತು’ ಎಂದರು. ಗುರುಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ಗುಂಡ್ಲುಪೇಟೆ ಸುರೇಶ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. 

ಪ್ರತಿಕ್ರಿಯಿಸಿ (+)